- Kannada News Photo gallery Cricket photos India Test Team poor records continue under coach gautam gambhir
ಟೀಮ್ ಇಂಡಿಯಾಗೆ ‘ಗಂಭೀರ’ ಸಮಸ್ಯೆ: ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು
Gautam Gambhir: ಗೌತಮ್ ಗಂಭೀರ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಟೆಸ್ಟ್ ವಿಷಯಕ್ಕೆ ಬಂದರೆ ತೀರಾ ಕಳಪೆ ಮಟ್ಟದಲ್ಲಿದೆ. ಇದಕ್ಕೆ ಸಾಕ್ಷಿ ಗಂಭೀರ್ ಮುಂದಾಳತ್ವದಲ್ಲಿ ಭಾರತ ತಂಡವು 10 ಟೆಸ್ಟ್ ಪಂದ್ಯಗಳನ್ನು ಸೋತಿರುವುದು.
Updated on: Nov 27, 2025 | 7:53 AM

ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ (Gautam Gambhir) ಗರಡಿಯಲ್ಲಿ ಭಾರತ ತಂಡವು ಈವರೆಗೆ 19 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಹತ್ತೊಂಬತ್ತು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ ಏಳು ಪಂದ್ಯಗಳಲ್ಲಿ ಎಂದರೆ ನಂಬಲೇಬೇಕು. ಅಂದರೆ ಗಂಭೀರ್ ಗರಡಿಯಲ್ಲಿ ಭಾರತ ಟೆಸ್ಟ್ ತಂಡವು ಅಧಃಪತನದತ್ತ ಸಾಗುತ್ತಿದೆ. ಇದಕ್ಕೆ ಸಾಕ್ಷಿ ಈ ಕೆಳಗಿನ ಅಂಕಿ ಅಂಶಗಳು...

2024 ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಝಿಲೆಂಡ್ 8 ವಿಕೆಟ್ಗಳ ಜಯ ದಾಖಲಿಸಿತ್ತು. ಇದು 36 ವರ್ಷಗಳ ಬಳಿಕ ಭಾರತದಲ್ಲಿ ನ್ಯೂಝಿಲೆಂಡ್ ತಂಡಕ್ಕೆ ದಕ್ಕಿದ ಮೊದಲ ಟೆಸ್ಟ್ ಜಯ ಎಂಬುದು ವಿಶೇಷ. ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ 19 ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟ ಕೂಡ ಇದರೊಂದಿಗೆ ಅಂತ್ಯವಾಗಿತ್ತು.

ಇನ್ನು ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಭಾರತ ತಂಡ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್ ಎಂಬುದು ವಿಶೇಷ.

93 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡ ನ್ಯೂಝಿಲೆಂಡ್ ವಿರುದ್ಧ ಸರಣಿ ಸೋತಿದ್ದು ಕೂಡ ಗಂಭೀರ್ ಕೋಚ್ ಆದ ಮೇಲೆ. ಅಂದರೆ ಗೌತಮ್ ಗಂಭೀರ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧದ 9 ದಶಕಗಳ ಪಾರುಪತ್ಯಕ್ಕೆ ತೆರೆ ಎಳೆದಿದೆ.

ನ್ಯೂಝಿಲೆಂಡ್ ವಿರುದ್ಧದ ಸರಣಿ ಸೋಲಿನೊಂದಿಗೆ ತವರಿನಲ್ಲಿ ಭಾರತ ತಂಡದ 12 ವರ್ಷಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಅಲ್ಲದೆ 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಸತತ ಟೆಸ್ಟ್ ಪಂದ್ಯಗಳನ್ನು ಸೋತು ನಿರಾಸೆ ಮೂಡಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 19 ವರ್ಷಗಳ ಟೆಸ್ಟ್ ಗೆಲುವಿನ ನಾಗಾಲೋಟಕ್ಕೆ ತೆರೆ ಎಳೆದಿದ್ದ ಟೀಮ್ ಇಂಡಿಯಾ, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲೂ ನ್ಯೂಝಿಲೆಂಡ್ ವಿರುದ್ಧ ಸೋತು 12 ವರ್ಷಗಳ ಗೆಲುವಿನ ಪರಂಪರೆಯನ್ನು ಅಂತ್ಯಗೊಳಿಸಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿರಲಿಲ್ಲ. ಆದರೆ ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ತವರಿನಲ್ಲಿ ಅವಮಾನಕರ ಸೋಲನುಭವಿಸಿದೆ.

ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 10 ವರ್ಷಗಳಿಂದ ಪಾರುಪತ್ಯ ಮರೆದಿತ್ತು. ಆದರೆ ಕಳೆದ ಬಾರಿ ಗಂಭೀರ್ ಮುಂದಾಳತ್ವದಲ್ಲಿ ಆಸೀಸ್ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾ 3-1 ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಂಡಿದೆ. ಈ ಮೂಲಕ ದಶಕದ ಗೆಲುವಿನ ನಾಗಾಲೋಟವನ್ನು ಸಹ ಅಂತ್ಯಗೊಳಿಸಿದೆ.

ಇಷ್ಟೇ ಅಲ್ಲದೆ ಭಾರತ ತಂಡವು ಕಳೆದ ಎರಡು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (2021, 2023) ಆಡಿತ್ತು. ಆದರೆ ಗಂಭೀರ್ ಕೋಚ್ ಆದ ಬಳಿಕ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 2025 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು ವಿಫಲವಾಗಿದೆ. ಅಂದರೆ ಟೆಸ್ಟ್ ಕ್ರಿಕೆಟ್ನ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿದ್ದ ಭಾರತ ತಂಡವು ಈ ಬಾರಿ ಫೈನಲ್ಗೆ ಪ್ರವೇಶಿಸಲು ವಿಫಲವಾಗುವ ಮೂಲಕ ಭಾರೀ ಮುಖಭಂಗ ಅನುಭವಿಸಿದೆ.

ಹಾಗೆಯೇ ಹೆಡಿಂಗ್ಲೆ ಮೈದಾನದಲ್ಲಿ 77 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೈದಾನದಲ್ಲಿ 1948 ರಲ್ಲಿ ಆಸ್ಟ್ರೇಲಿಯಾ 404 ರನ್ ಚೇಸ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು. ಆ ಬಳಿಕ ಯಾವುದೇ ತಂಡ 370+ ಸ್ಕೋರ್ ಬೆನ್ನತ್ತಿ ಗೆದ್ದಿರಲಿಲ್ಲ. ಆದರೆ ಈ ಬಾರಿ ಟೀಮ್ ಇಂಡಿಯಾ ನೀಡಿದ 371 ರನ್ಗಳ ಗುರಿಯನ್ನು 82 ಓವರ್ಗಳಲ್ಲಿ ಬೆನ್ನತ್ತಿ ಇಂಗ್ಲೆಂಡ್ ಅಮೋಘ ಗೆಲುವು ದಾಖಲಿಸಿದೆ.

ಇನ್ನು ಸೌತ್ ಆಫ್ರಿಕಾ ವಿರುದ್ಧ ಈಡನ್ ಗಾರ್ಡನ್ಸ್ ಮೈದಾನದಲ್ಲೂ ಟೀಮ್ ಇಂಡಿಯಾ ಹೀನಾಯ ಸೋಲನುಭವಿಸಿದೆ. ಅದು ಕೂಡ ಬರೋಬ್ಬರಿ 15 ವರ್ಷಗಳ ಬಳಿಕ. ಅಂದರೆ ಸೌತ್ ಆಫ್ರಿಕಾ ತಂಡವು ಹದಿನೈದು ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯವೊಂದನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.

ಇದೀಗ ಗುವಾಹಟಿ ಟೆಸ್ಟ್ನಲ್ಲೂ ಟೀಮ್ ಇಂಡಿಯಾ ಸೋಲನುಭವಿಸಿದೆ. ಈ ಬಾರಿ ಸೋತಿರುವುದು ಬರೋಬ್ಬರಿ 408 ರನ್ಗಳ ಅಂತರದಿಂದ. ಇದು ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು. ಅಂದರೆ ಇದಕ್ಕೂ ಮುನ್ನ ಟೀಮ್ ಇಂಡಿಯಾ ಟೆಸ್ಟ್ ಪಂದ್ಯದಲ್ಲಿ 400+ ರನ್ಗಳ ಅಂತರದಿಂದ ಸೋತೇ ಇರಲಿಲ್ಲ.

ಅಂದರೆ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ತಂಡವು ಹಲವು ವರ್ಷಗಳ ಪಾರುಪತ್ಯಕ್ಕೆ ತೆರೆ ಎಳೆದಿದೆ. ಅದು ಕೂಡ ಹೀನಾಯ ಸೋಲುಗಳೊಂದಿಗೆ. ಅದರಲ್ಲೂ ಕಳೆದ 19 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 7 ಮ್ಯಾಚ್ಗಳಲ್ಲಿ ಮಾತ್ರ. ಇದರಲ್ಲಿ ನಾಲ್ಕು ಗೆಲುವುಗಳು ದುರ್ಬಲ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ್ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ಗಂಭೀರ್ ಗರಡಿಯಲ್ಲಿ ಭಾರತ ಟೆಸ್ಟ್ ತಂಡವು ಅಧಃಪತನದತ್ತ ಸಾಗುತ್ತಿರುವುದು ಸ್ಪಷ್ಟ.




