ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹದಿನಾರನೇ ಆವೃತ್ತಿ ಸಲುವಾಗಿ ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆಯನ್ನು ಕೇರಳದ ಕೊಚ್ಚಿಯಲ್ಲಿ ಇಂದು ನಡೆಯಲಿದ್ದು, ಬರೋಬ್ಬರಿ 405 ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಾರೆ 10 ತಂಡಗಳು ತಮ್ಮ ಆಟಗಾರರ ಖರೀದಿ ಸಲುವಾಗಿ ಹಣದ ಹೊಳೆ ಹರಿಸಲು ಲೆಕ್ಕಾಚಾರ ಮಾಡಿವೆ.
ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ 119 ಕ್ಯಾಪ್ಡ್ ಪ್ಲೇಯರ್ಸ್ ಸದ್ಯ ಹರಾಜಿನ ಕೇಂದ್ರಬಿಂದುವಾಗಿದ್ದಾರೆ. ಆಲ್‌ರೌಂಡರ್ ಸ್ಯಾಮ್ ಕುರ್ರನ್, ಬೆನ್ ಸ್ಟೋಕ್ಸ್, ಸಿಕಂದರ್ ರಾಝಾ, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಅಜಿಂಕ್ಯಾ ರಹಾನೆ, ಅಮಿತ್ ಮಿಶ್ರಾ, ಕ್ಯಾಮರೂನ್ ಗ್ರೀನ್ ಮತ್ತು ಇನ್ನೂ ಅನೇಕ ಆಟಗಾರರು ಈ ವರ್ಷದ ಮಿನಿ ಹರಾಜಿನ ಭಾಗವಾಗಿದ್ದಾರೆ.
ಒಂದು ವೇಳೆ ಹರಾಜು ಪ್ರಕ್ರಿಯೆ ನಡೆಯುವ ವೇಳೆ ಒಬ್ಬ ಆಟಗಾರನ ಖರೀದಿ ಸಲುವಾಗಿ ತಂಡಗಳು ತಮ್ಮಲ್ಲಿನ ಎಲ್ಲಾ ಹಣವನ್ನು ಖರ್ಚು ಮಾಡಿದರೆ ಏನಾಗುತ್ತದೆ?. ಇದಕ್ಕಾಗಿ ಐಪಿಎಲ್‌ನಲ್ಲಿ ನಿಯಮವಿದೆ. ವಿಶೇಷ ಎಂದರೆ ಇಂಥದ್ದೊಂದು ಸನ್ನಿವೇಶ ಐಪಿಎಲ್‌ನಲ್ಲಿ ಈವರೆಗೆ ಬಂದಿಲ್ಲ. ಈ ಸಲುವಾಗಿ ಐಪಿಎಲ್ ಮಂಡಳಿ ವಿಶೇಷ ನಿಯಮವನ್ನೂ ಕೂಡ ಹೊಂದಿದೆ. ಇದಕ್ಕೆ ಹೆಸರು ಟೈ ಬ್ರೇಕರ್ ರೂಲ್.
ಈ ನಿಯಮದ ಪ್ರಕಾರ ಬಿಡ್ಡಿಂಗ್ ಸಲ್ಲಿಕೆಗೆ ಯಾವುದೇ ಕೊನೆಯಿಲ್ಲ. ಹೀಗಾಗಿ ತಂಡಗಳು ತಮ್ಮಲ್ಲಿನ ಎಲ್ಲಾ ಹಣ ಖರ್ಚು ಮಾಡಿ ಟೈ ಕಂಡಾಗ 'ಟೈ ಬ್ರೇಕರ್' ನಿಯಮ ಜಾರಿಗೆ ಬರುತ್ತದೆ.
ಉದಾಹರಣೆಗೆ 2 ತಂಡಗಳು ತಮ್ಮಲ್ಲಿ ಬಾಕಿ ಉಳಿದಿರುವ 10 ಕೋಟಿ ರೂ. ಮೊತ್ತವನ್ನು ಸಂಪೂರ್ಣವಾಗಿ ಬಿಡ್ ಮಾಡಿ ಟೈ ಸಾಧಿಸಿದ್ದಾಗ ಆ ಆಟಗಾರನ ಖರೀದಿಗೆ ಈ ನಿಯಮ ಅಳವಡಿಸಲಾಗುತ್ತದೆ. ತಮ್ಮ ಪರ್ಸ್‌ಗಳಲ್ಲಿ ಯಾವುದೇ ಹಣ ಬಾಕಿ ಇರದೇ ಇದ್ದರೂ ಕೂಡ, ಈ ಆಟಗಾರನ ಖರೀದಿ ಸಲುವಾಗಿ ಗರಿಷ್ಠ ಎಷ್ಟು ಬಿಡ್ ಮಾಡಲು ರೆಡಿ ಎಂದು ಫ್ರಾಂಚೈಸಿಗಳು ಮುಚ್ಚಿದ ಚೀಟಿಯಲ್ಲಿ ಬರೆದು ಕೊಡಬೇಕು. ಯಾವ ತಂಡ ಗರಿಷ್ಠ ಬಿಡ್ ಮಾಡಿರುತ್ತದೋ ಆ ತಂಡಕ್ಕೆ ಆಟಗಾರನ ಸೇಲ್ ಆಗುತ್ತಾನೆ.
ಈ ಗರಿಷ್ಠ ಬಿಡ್ಡಿಂಗ್‌ನಲ್ಲಿ ಟೈ ವರೆಗಿನ ಮೊತ್ತ ಆಟಗಾರನಿಗೆ ಸೇರಿದರೆ ಉಳಿದ ಮೊತ್ತ ಬಿಸಿಸಿಐ ಪಾಲಾಗುತ್ತದೆ. ಅಂದಹಾಗೆ ಈ ನಿಯಮ 2010ರ ಆವೃತ್ತಿಯಿಂದಲೂ ಜಾರಿಯಲ್ಲಿದೆ ಎಂಬುದು ವಿಶೇಷ. ಆದರೆ, ಕಳೆದ 15 ಸೀಸನ್ ವರೆಗೂ ಬಳಕೆಗೆ ಬಂದಿಲ್ಲ.
ಐಪಿಎಲ್ ಹರಾಜು ಪ್ರಕ್ರಿಯೆ ಶುಕ್ರವಾರದ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಸುಮಾರು ರಾತ್ರಿ 9:00ಕ್ಕೆ ಕೊನೆಗೊಳ್ಳುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಐಪಿಎಲ್ ಹರಾಜನ್ನು ನೇರ ಪ್ರಸಾರ ಮಾಡಲಿದೆ.
ಜಿಯೋ ಸಿನಿಮಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ಹರಾಜು ಪ್ರಕ್ರಿಯೆಯನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಭಾರತದಲ್ಲಿ ವಾಸಿಸುವ Airtel, Jio, BSNL ಮತ್ತು VI ಬಳಕೆದಾರರಿಗೂ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
Published On - 11:33 am, Fri, 23 December 22