IPL 2023: RCB ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್ ಭಾವನಾತ್ಮಕ ಸಂದೇಶ
IPL 2023 Kannada: ಈ ಬಾರಿ 13 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ದಿನೇಶ್ ಕಾರ್ತಿಕ್ ಕಲೆಹಾಕಿದ್ದು ಕೇವಲ 140 ರನ್ ಮಾತ್ರ. ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಡಿಕೆಯನ್ನು ಮುಂದಿನ ಸೀಸನ್ಗಾಗಿ ಆರ್ಸಿಬಿ ಉಳಿಸಿಕೊಳ್ಳುವುದು ಅನುಮಾನ.
Updated on: May 24, 2023 | 8:30 PM

IPL 2023: ಪ್ರತಿ ಸೀಸನ್ನಂತೆ ಈ ಬಾರಿ ಕೂಡ ಆರ್ಸಿಬಿ ತಂಡ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಆಡಿದ 14 ಪಂದ್ಯಗಳಲ್ಲಿ ಕೇವಲ 7 ರಲ್ಲಿ ಮಾತ್ರ ಜಯ ಸಾಧಿಸಿದ ಫಾಫ್ ಡುಪ್ಲೆಸಿಸ್ ಪಡೆ ಲೀಗ್ ಹಂತದಲ್ಲೇ ಹೊರಬಿದ್ದಿದೆ.

ಒಂದು ತಂಡವಾಗಿ ಆಡುವಲ್ಲಿ ಸಂಪೂರ್ಣ ವಿಫಲರಾಗಿದ್ದ ಆರ್ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಪ್ರಚಂಡ ಪ್ರದರ್ಶನ ನೀಡಿದ್ದರು.

ಈ ನಾಲ್ವರ ಸಾಂಘಿಕ ಹೋರಾಟದಿಂದಲೇ ಆರ್ಸಿಬಿ ಕಪ್ ಗೆಲ್ಲುವ ಕನಸನ್ನು ಬಿತ್ತಿದ್ದರು. ಆದರೆ ಉಳಿದ ಆಟಗಾರರ ಕಳಪೆ ಪ್ರದರ್ಶನವು ಆರ್ಸಿಬಿ ಪಾಲಿಗೆ ಮುಳುವಾಯಿತು. ಇದುವೇ ಕೆಲ ಪಂದ್ಯಗಳಲ್ಲಿ ಸೋಲಿಗೂ ಪ್ರಮುಖ ಕಾರಣವಾಯಿತು.

ಅದರಲ್ಲೂ ತಂಡದಲ್ಲಿ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶ್ ಆಗುವ ಮುನ್ನವೇ ಔಟ್ ಆಗಿ ಪೆವಿಲಿಯನ್ ಸೇರುತ್ತಿದ್ದರು. ಇದು ಕೂಡ ಆರ್ಸಿಬಿ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿತು.

ಇದೀಗ ಟೂರ್ನಿಯಿಂದ ಹೊರಬಿದ್ದ ನೋವಿನಲ್ಲಿರುವ ಆರ್ಸಿಬಿ ಅಭಿಮಾನಿಗಳಿಗೆ ದಿನೇಶ್ ಕಾರ್ತಿಕ್ ಭಾವನಾತ್ಮಕ ಸಂದೇಶ ರವಾನಿಸಿದ್ದಾರೆ. ಅಲ್ಲದೆ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ಡಿಕೆ, ನಮಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ಫಲಿತಾಂಶ ಕೂಡ ನಮ್ಮ ಪರವಾಗಿರಲಿಲ್ಲ. ಇದಾಗ್ಯೂ ನಮ್ಮ ಕನಸನ್ನು ಬೆನ್ನತ್ತುವುದು ಮುಂದುವರೆಯಲಿದೆ. ನಮ್ಮೆಲ್ಲಾ ಏಳು-ಬೀಳುಗಳಲ್ಲಿ ಜೊತೆಗಿದ್ದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನಮಗೆ ನೀವೇ ಸರ್ವಸ್ವ ಎಂದು ದಿನೇಶ್ ಕಾರ್ತಿಕ್ ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಬಾರಿ 13 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ದಿನೇಶ್ ಕಾರ್ತಿಕ್ ಕಲೆಹಾಕಿದ್ದು ಕೇವಲ 140 ರನ್ ಮಾತ್ರ. ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ಡಿಕೆಯನ್ನು ಮುಂದಿನ ಸೀಸನ್ಗಾಗಿ ಆರ್ಸಿಬಿ ಉಳಿಸಿಕೊಳ್ಳುವುದು ಅನುಮಾನ.
