Updated on: May 07, 2023 | 10:07 PM
IPL 2023: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಈ ಬಾರಿ ಕೂಡ ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತಪಡಿಸಿಕೊಂಡಿದೆ. ಆಡಿರುವ 11 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ಹಾರ್ದಿಕ್ ಪಾಂಡ್ಯ ಪಡೆ ಇದೀಗ 16 ಅಂಕಗಳನ್ನು ಸಂಪಾದಿಸಿದೆ.
ಇನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ 3 ಪಂದ್ಯಗಳು ಉಳಿದಿದ್ದು, ಇದರಲ್ಲಿ ಒಂದು ಜಯ ಸಾಧಿಸಿದರೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ. ಏಕೆಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಟಾಪ್- 4 ನಲ್ಲಿರುವ ತಂಡಗಳೆಲ್ಲವೂ 11 ಪಂದ್ಯಗಳನ್ನಾಡಿದೆ.
ಇದರಲ್ಲಿ ಅತ್ಯಧಿಕ ಪಾಯಿಂಟ್ಸ್ ಕಲೆಹಾಕಿರುವುದು ಗುಜರಾತ್ ಟೈಟಾನ್ಸ್ (16 ಅಂಕ) ಮಾತ್ರ. ಇನ್ನುಳಿದ ಮೂರು ತಂಡಗಳು 3 ಪಂದ್ಯಗಳಲ್ಲಿ ಗೆದ್ದರೂ 17, 18 ಅಥವಾ 19 ಅಂಕಗಳನ್ನು ಮಾತ್ರ ಸಂಪಾದಿಸಲಿದೆ.
ಇತ್ತ ಈಗಾಗಲೇ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ತಂಡವು ಮುಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಟಾಪ್-4 ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿಯೇ ಹಾಲಿ ಚಾಂಪಿಯನ್ ಈ ಬಾರಿ ಕೂಡ ಪ್ಲೇಆಫ್ ಪಂದ್ಯಗಳನ್ನಾಡುವುದು ಬಹುತೇಕ ಖಚಿತ ಎನ್ನಬಹುದು.
ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ಐಪಿಎಲ್ 2022 ರಲ್ಲಿ 16 ಅಂಕಗಳನ್ನು ಪಡೆದ ಮೊದಲ ತಂಡವಾಗಿ ಗುಜರಾತ್ ಟೈಟಾನ್ಸ್ ಹೊರಹೊಮ್ಮಿತು. ಈ ಬಾರಿ ಕೂಡ ಹಾರ್ದಿಕ್ ಪಾಂಡ್ಯ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಇತ್ತ 11 ಪಂದ್ಯಗಳನ್ನಾಡಿರುವ ಗುಜರಾತ್ ಟೈಟಾನ್ಸ್ ಸೋತಿರುವುದು ಕೇವಲ 3 ತಂಡಗಳ ವಿರುದ್ಧ ಮಾತ್ರ. ಕೆಕೆಆರ್ ವಿರುದ್ಧ ಕೊನೆಯ ಓವರ್ನಲ್ಲಿ ಸೋತರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ 3 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ರನ್ಗಳಿಂದ ಸೋಲನುಭವಿಸಿತ್ತು.
ಈ ಮೂರು ಸೋಲುಗಳ ಹೊರತಾಗಿಯೂ ಗುಜರಾತ್ ಟೈಟಾನ್ಸ್ ತಂಡವು ಪ್ರತಿ ಹಂತದಲ್ಲೂ ಸಾಂಘಿಕ ಪ್ರದರ್ಶನ ನೀಡುತ್ತಾ ಬಂದಿದೆ. ಇದರ ಫಲವಾಗಿ ಇದೀಗ 16 ಅಂಕಗಳು ಹಾಗೂ +0.951 ನೆಟ್ ರನ್ ರೇಟ್ನೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ.