IPL 2023: ಏಪ್ರಿಲ್ 23 ರಂದು ಮುಗ್ಗರಿಸುವ ವಿರಾಟ್ ಕೊಹ್ಲಿ: ಇಲ್ಲಿದೆ 5 ಇನಿಂಗ್ಸ್ ಅಂಕಿ ಅಂಶಗಳು
IPL 2023 Kannada: ಐಪಿಎಲ್ನಲ್ಲಿ ಏಪ್ರಿಲ್ 23 ರಂದು ನಡೆದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು
Updated on: Apr 24, 2023 | 3:29 PM

IPL 2023: ಐಪಿಎಲ್ ಅಂಗಳದ ದಾಖಲೆಯ ಸರದಾರ ವಿರಾಟ್ ಕೊಹ್ಲಿಗೆ ಏಪ್ರಿಲ್ 23 ಅನ್ ಲಕ್ಕಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾನುವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಕಿಂಗ್ ಕೊಹ್ಲಿ ಏಪ್ರಿಲ್ 23 ರಂದೇ 3 ಬಾರಿ ಗೋಲ್ಡನ್ ಡಕ್ಗೆ ಔಟಾದ ಅಪಕೀರ್ತಿಗೆ ಒಳಗಾದರು.

ಅದರಲ್ಲೂ ಏಪ್ರಿಲ್ 23 ರಂದೇ ವಿರಾಟ್ ಕೊಹ್ಲಿ ಮೂರು ಬಾರಿ ಸೊನ್ನೆ ಸುತ್ತಿರುವುದೇ ಅಚ್ಚರಿ. ಅಂದರೆ ಐಪಿಎಲ್ನಲ್ಲಿ ಏಪ್ರಿಲ್ 23 ರಂದು ಕಿಂಗ್ ಕೊಹ್ಲಿ ಒಟ್ಟು 5 ಇನಿಂಗ್ಸ್ ಆಡಿದ್ದಾರೆ.

ಏಪ್ರಿಲ್ 23 ರಂದು ಮೊದಲ ಬಾರಿಗೆ ಕೊಹ್ಲಿಗೆ ಕಣಕ್ಕಿಳಿದಿದ್ದು 2012 ರಲ್ಲಿ. ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಾದ ಆ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 16 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಇದಾದ ಬಳಿಕ 2013 ರ ಏಪ್ರಿಲ್ 23 ರಂದು ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಬ್ಯಾಟ್ ಬೀಸಿದ್ದ ಕೊಹ್ಲಿ 9 ಎಸೆತಗಳಲ್ಲಿ 11 ರನ್ಗಳಿಸಿ ಔಟಾಗಿದ್ದರು.

ಆ ಬಳಿಕ ವಿರಾಟ್ ಕೊಹ್ಲಿ ಏಪ್ರಿಲ್ 23 ರಂದು 2017 ರಲ್ಲಿ ಆಡಿದ್ದರು. ಅಂದು ಕೆಕೆಆರ್ ವಿರುದ್ಧ ಕಣಕ್ಕಿಳಿದಿದ್ದ ಕೊಹ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಗೋಲ್ಡನ್ ಡಕ್ಗೆ ಔಟಾದರು.

ಇನ್ನು 2022 ರ ಏಪ್ರಿಲ್ 23 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದಿದ್ದ ಕಿಂಗ್ ಕೊಹ್ಲಿ ಮೊದಲ ಎಸೆತದಲ್ಲೇ ವಿಕೆಟ್ ಕೈಚೆಲ್ಲಿದ್ದರು.

ಇದೀಗ ಏಪ್ರಿಲ್ 23 ರಂದೇ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಶೂನ್ಯಕ್ಕೆ ಔಟಾಗಿದ್ದಾರೆ. ಇದರೊಂದಿಗೆ ಏಪ್ರಿಲ್ 23 ರಂದು ಕೊಹ್ಲಿ ಮೂರನೇ ಬಾರಿಗೆ ಗೋಲ್ಡನ್ ಡಕ್ಗೆ ಔಟಾದಂತಾಗಿದೆ.

ಅಂದರೆ ಐಪಿಎಲ್ನಲ್ಲಿ ಏಪ್ರಿಲ್ 23 ರಂದು ನಡೆದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ದಿನಾಂಕದಂದು 5 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ ಕಲೆಹಾಕಿರುವುದು ಕೇವಲ 27 ರನ್ ಮಾತ್ರ.

ಇದೇ ಕಾರಣದಿಂದಾಗಿ ವಿರಾಟ್ ಕೊಹ್ಲಿಯ ಪಾಲಿಗೆ ಏಪ್ರಿಲ್ 23 ಅನ್ಲಕ್ಕಿ ಡೇ ಎಂದು ವಿಶ್ಲೇಷಿಸಲಾಗುತ್ತಿದೆ.
