- Kannada News Photo gallery Cricket photos IPL 2025: Suryakumar Yadav breaks AB de Villiers' IPL record
ಸೂರ್ಯನ ಅಬ್ಬರಕ್ಕೆ ABDಯ ದಾಖಲೆಯೇ ಉಡೀಸ್
IPL 2025 MI vs PBKS: ಇಂಡಿಯನ್ ಪ್ರೀಮಿಯರ್ ಲೀಗ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 203 ರನ್ ಕಲೆಹಾಕಿದರೆ, ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ 19 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಸೋಲಿನ ನಡುವೆ ಮುಂಬೈ ಇಂಡಿಯನ್ಸ್ ದಾಂಡಿಗ ಸೂರ್ಯಕುಮಾರ್ ಯಾದವ್ ವಿಶೇಷ ದಾಖಲೆ ಬರೆದಿದ್ದಾರೆ.
Updated on: Jun 02, 2025 | 11:10 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಹೊಸ ಇತಿಹಾಸ ರಚಿಸಿದ್ದಾರೆ. ಅದು ಕೂಡ 9 ವರ್ಷಗಳ ಹಿಂದೆ ಎಬಿ ಡಿವಿಲಿಯರ್ಸ್ ಬರೆದಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್ನ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಈ 44 ರನ್ಗಳೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಸೂರ್ಯ 700 ರನ್ಗಳನ್ನು ಪೂರೈಸಿದ್ದಾರೆ.

ಇದರೊಂದಿಗೆ ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಪೇರಿಸಿದ ಆರಂಭಿಕನಲ್ಲದ ಬ್ಯಾಟರ್ ಎಂಬ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ವಿಶೇಷ ದಾಖಲೆ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿತ್ತು.

2016ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 16 ಇನಿಂಗ್ಸ್ ಆಡಿದ್ದ ಎಬಿ ಡಿವಿಲಿಯರ್ಸ್ ಬರೋಬ್ಬರಿ 687 ರನ್ ಕಲೆಹಾಕಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾನ್ ಓಪನರ್ ಎಂಬ ವಿಶೇಷ ದಾಖಲೆಯನ್ನು ಎಬಿಡಿ ನಿರ್ಮಿಸಿದ್ದರು.

ಇದೀಗ ಎಬಿಡಿಯ ಈ ವಿಶೇಷ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಅಳಿಸಿ ಹಾಕಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ 16 ಇನಿಂಗ್ಸ್ ಆಡಿರುವ ಸೂರ್ಯಕುಮಾರ್ ಯಾದವ್ 5 ಅರ್ಧಶತಕಗಳೊಂದಿಗೆ ಒಟ್ಟು 717 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲಿ 700 ರನ್ಗಳ ಗಡಿದಾಟಿದ ಆರಂಭಿಕನಲ್ಲದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಸೀಸನ್ವೊಂದರಲ್ಲಿ ಅತ್ಯಧಿನ ರನ್ ಪೇರಿಸಿದ ನಾನ್ ಓಪನರ್ (ಆರಂಭಿಕನಲ್ಲದ) ಬ್ಯಾಟರ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ. ಈ ದಾಖಲೆಗಳ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಐಪಿಎಲ್ ಸೀಸನ್-18ರ ಅಭಿಯಾನ ಸೋಲಿನೊಂದಿಗೆ ಅಂತ್ಯಗೊಂಡಿದ್ದು ಮಾತ್ರ ವಿಪರ್ಯಾಸ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




