IPL 2026: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಮ್ಯಾಚ್ ಗೆಲ್ಲಬೇಕು? ಇಲ್ಲಿದೆ ಮಾಹಿತಿ
IPL 2026 playoff qualification scenario: ಐಪಿಎಲ್ ಟೂರ್ನಿಯ ಲೀಗ್ ಹಂತದ 14 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದ ಎಲ್ಲಾ ತಂಡಗಳು ಪ್ಲೇ-ಆಫ್‌ಗೆ ಅರ್ಹತೆ ಪಡೆದಿವೆ. ಅಂದರೆ ಪ್ಲೇಆಫ್ ಖಚಿತಪಡಿಸಿಕೊಳ್ಳಲು 16 ಅಂಕಗಳು ಅನಿವಾರ್ಯ. ಈ ಲೆಕ್ಕಾಚಾರದಂತೆ ಪ್ಲೇಆಫ್ಗೆ ಪ್ರವೇಶಿಸಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...
Updated on: May 13, 2026 | 8:57 AM

IPL 2026: ಐಪಿಎಲ್ 2026ರ ಲೀಗ್ ಹಂತವು ಈಗ ರೋಚಕ ಘಟ್ಟಕ್ಕೆ ತಲುಪಿದ್ದು, ಪ್ಲೇ-ಆಫ್ ತಲುಪಲು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯದ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ಗುಜರಾತ್ ಟೈಟಾನ್ಸ್ (GT) ಹಾಗೂ ಪಂಜಾಬ್ ಕಿಂಗ್ಸ್ (PBKS) ತಂಡಗಳು ಟಾಪ್-4 ನಲ್ಲಿವೆ. ಇನ್ನುಳಿದ 4 ತಂಡಗಳೂ ಕೂಡ ಪ್ಲೇಆಫ್ ರೇಸ್ನಲ್ಲಿವೆ. ಅದರಂತೆ ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ... (PC: BCCI)

ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಕೂಡ 12 ಪಂದ್ಯಗಳನ್ನಾಡಿದೆ. ಈ ವೇಳೆ 4 ಮ್ಯಾಚ್ಗಳಲ್ಲಿ ಸೋತರೆ, 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಅದರಂತೆ ಇದೀಗ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ಪ್ಲೇಆಫ್ ಆಡುವುದು ಬಹುತೇಕ ಖಚಿತವಾಗಿದೆ. ಇನ್ನು ಮುಂದಿನ 2 ಪಂದ್ಯಗಳಲ್ಲಿ 1 ಜಯ ಸಾಧಿಸಿದರೆ 18 ಅಂಕಗಳ ಮೂಲಕ ಅಧಿಕೃತವಾಗಿ ಪ್ಲೇಆಫ್ಗೇರಲಿದೆ. (PC: BCCI)

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ ಸಾರಥ್ಯದ ಆರ್ಸಿಬಿ ತಂಡವು ಈವರೆಗೆ 11 ಪಂದ್ಯಗಳನ್ನಾಡಿದ್ದು, ಈ ವೇಳೆ 7 ಮ್ಯಾಚ್ಗಳಲ್ಲಿ ಜಯ ಸಾಧಿಸಿದೆ. ಅದರಂತೆ ಇದೀಗ 14 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ 3 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದರೆ 16 ಅಂಕಗಳೊಂದಿಗೆ ಪ್ಲೇಆಫ್ ಆಡುವುದನ್ನು ಖಚಿತಪಡಿಸಿಕೊಳ್ಳಲಿದೆ. (PC: BCCI)

ಸನ್ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್ ಮುಂದಾಳತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವು ಈವರೆಗೆ 12 ಪಂದ್ಯಗಳನ್ನಾಡಿದೆ. ಈ ವೇಳೆ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅದರಂತೆ ಇದೀಗ 14 ಅಂಕಗಳನ್ನು ಹೊಂದಿರುವ ಎಸ್ಆರ್ಹೆಚ್ ಮುಂದಿನ 2 ಪಂದ್ಯಗಳಲ್ಲಿ 1 ಗೆಲುವು ಸಾಧಿಸಿ ಪ್ಲೇಆಫ್ಗೇರಬಹುದು. (PC: BCCI)

ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್ ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ 6 ಗೆಲುವು ದಾಖಲಿಸಿರುವ ಪಂಜಾಬ್ ಪಡೆ ಒಟ್ಟು 13 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಮುಂದಿನ 3 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಕೇವಲ 2 ಮ್ಯಾಚ್ ಗೆದ್ದರೆ 17 ಅಂಕಗಳೊಂದಿಗೆ ಪ್ಲೇಆಫ್ಗೇರಲಿದೆ. (PC: BCCI)

ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್ ಸಾರಥ್ಯದಲ್ಲಿ ಕಣಕ್ಕಿಳಿಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ ವೇಳೆ 6 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನುಳಿದ 3 ಪಂದ್ಯಗಳಲ್ಲಿ 2 ಜಯ ಸಾಧಿಸಿದರೆ ಸಿಎಸ್ಕೆ ತಂಡ ಕೂಡ ಪ್ಲೇಆಫ್ಗೆ ಅರ್ಹತೆ ಪಡೆದುಕೊಳ್ಳಬಹುದು. (PC: BCCI)

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಈಗಾಗಲೇ 11 ಪಂದ್ಯಗಳನ್ನಾಡಿದೆ. ಈ 11 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕಗಳನ್ನು ಪಡೆದಿರುವ ಆರ್ಆರ್ ಪಡೆ ಮುಂದಿನ 3 ಮ್ಯಾಚ್ಗಳಲ್ಲಿ 2 ಜಯ ಸಾಧಿಸಿದರೆ ಒಟ್ಟು ಅಂಕಗಳನ್ನು 16 ಕ್ಕೇರಿಸಬಹುದು. ಈ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆಯಬಹುದು. (PC: BCCI)

ಕೊಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ ನಾಯಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಈವರೆಗೆ 10 ಪಂದ್ಯಗಳನ್ನಾಡಿದೆ. ಈ ವೇಳೆ ಕೆಕೆಆರ್ ಗೆದ್ದಿರುವುದು 4 ಪಂದ್ಯಗಳಲ್ಲಿ ಮಾತ್ರ. ಇನ್ನು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ 1 ಅಂಕ ಗಿಟ್ಟಿಸಿಕೊಂಡಿದೆ. ಅದರಂತೆ ಇದೀಗ 9 ಅಂಕಗಳನ್ನು ಹೊಂದಿರುವ ಕೆಕೆಆರ್ ಮುಂದಿನ 4 ಪಂದ್ಯಗಳಲ್ಲಿ ಜಯ ಸಾಧಿಸಿದರೆ 17 ಅಂಕಗಳೊಂದಿಗೆ ನೇರವಾಗಿ ಪ್ಲೇಆಫ್ಗೆ ಪ್ರವೇಶಿಸಲಿದೆ. (PC: BCCI)

ಡೆಲ್ಲಿ ಕ್ಯಾಪಿಟಲ್ಸ್: ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ 12 ಪಂದ್ಯಗಳನ್ನಾಡಿದ್ದು, ಈ ವೇಳೆ 5 ಮ್ಯಾಚ್ಗಳಲ್ಲಿ ಗೆದ್ದರೆ 7 ಪಂದ್ಯಗಳಲ್ಲಿ ಸೋತಿದೆ. ಈ ಮೂಲಕ 10 ಅಂಕಗಳನ್ನು ಮಾತ್ರ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ 2 ಪಂದ್ಯಗಳಲ್ಲೂ ಗೆಲುವು ದಾಖಲಿಸಿದರೆ 14 ಅಂಕಗಳನ್ನು ಪಡೆಯಬಹುದು. ಅದರಂತೆ ಲೀಗ್ ಹಂತದ ಮುಕ್ತಾಯದ ವೇಳೆಗೆ ಟಾಪ್-4 ನಲ್ಲಿರುವ ಯಾವುದಾದರೂ ತಂಡ 14 ಅಂಕ ಹೊಂದಿದ್ದರೆ ಮಾತರ ನೆಟ್ ರನ್ ರೇಟ್ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ಗೆ ಪ್ಲೇಆಫ್ಗೆ ಪ್ರವೇಶಿಸಲು ಅವಕಾಶ ದೊರೆಯಲಿದೆ. (PC: BCCI)

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ 11 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು 3 ಪಂದ್ಯಗಳಲ್ಲಿ ಮಾತ್ರ. ಇನ್ನುಳಿದ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 12 ಅಂಕಗಳನ್ನು ಮಾತ್ರ ಪಡೆಯಬಹುದು. ಇತ್ತ ಟಾಪ್-4 ನಲ್ಲಿರುವ ನಾಲ್ಕು ತಂಡಗಳು 13 ಕ್ಕಿಂತ ಹೆಚ್ಚಿನ ಅಂಕಗಳನ್ನು ಹೊಂದಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. (PC: BCCI)

ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ಆಡಿದ 11 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ. ಇದೀಗ ಕೇವಲ 6 ಅಂಕಗಳನ್ನು ಮಾತ್ರ ಹೊಂದಿರುವ ಎಸ್ಎಸ್ಜಿ ಮುಂದಿನ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 12 ಅಂಕಗಳನ್ನು ಮಾತ್ರ ಪಡೆಯಬಹುದು. 12 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಲು ಅವಕಾಶ ಇಲ್ಲದಿರುವುದರಿಂದ ಎಲ್ಎಸ್ಜಿ ಕೂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. (PC: BCCI)




