- Kannada News Photo gallery Cricket photos Vaibhav Sooryavanshi IPL 2026: Youngest 600+ Runs, Most Sixes and Fastest Fifty Record
SRH vs RR: ವೈಭವ್ ಸೂರ್ಯವಂಶಿ ಸಿಡಿಲಬ್ಬರಕ್ಕೆ ಸೃಷ್ಟಿಯಾದ ದಾಖಲೆಗಳೆಷ್ಟು ನೋಡಿ
Vaibhav Sooryavanshi IPL 2026: ಐಪಿಎಲ್ 2026 ರ ಎಲಿಮಿನೇಟರ್‌ನಲ್ಲಿ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ದಾಖಲೆ ನಿರ್ಮಿಸಿದರು. ಅವರು ಆರೆಂಜ್ ಕ್ಯಾಪ್ ಮುಂಚೂಣಿಯಲ್ಲಿದ್ದು, ಒಂದೇ ಸೀಸನ್‌ನಲ್ಲಿ 600+ ರನ್ ಗಳಿಸಿದ ಅತಿ ಕಿರಿಯ ಆಟಗಾರ, ಅತಿ ಹೆಚ್ಚು ಸಿಕ್ಸರ್‌ಗಳು, ವೇಗದ ಅರ್ಧಶತಕ, ಮತ್ತು ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆಗಳನ್ನು ಮುರಿದು ತಮ್ಮ ಅಸಾಮಾನ್ಯ ಸಾಮರ್ಥ್ಯ ಪ್ರದರ್ಶಿಸಿದರು.
Updated on: May 27, 2026 | 10:12 PM

ಐಪಿಎಲ್ 2026 ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಬಾರಿಸಿದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 334.48 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ವೈಭವ್ ತಮ್ಮ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಹೊಡೆದರು. ವೈಭವ್ ಕೇವಲ 3 ರನ್ಗಳಿಂದ ದಾಖಲೆಯ ಶತಕದಿಂದ ವಂಚಿತರಾದರೂ ಹಲವು ದಾಖಲೆಗಳನ್ನು ಸೃಷ್ಟಿಸಿದರು (PC- PTI).

ಈ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 15 ಪಂದ್ಯಗಳಲ್ಲಿ 680 ರನ್ ಕಲೆಹಾಕಿದ್ದು, ಈ ಮೂಲಕ ಆರೆಂಜ್ ಕ್ಯಾಪ್ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಷ್ಟೇ ಅಲ್ಲ, ವೈಭವ್ ಸೂರ್ಯವಂಶಿ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ 600 ಕ್ಕೂ ಹೆಚ್ಚು ರನ್ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಸೃಷ್ಟಿಸಿದರು. ಇದಕ್ಕೂ ಮೊದಲು, ಈ ದಾಖಲೆ 2018 ರಲ್ಲಿ ರಿಷಭ್ ಪಂತ್ ಹೆಸರಿನಲ್ಲಿತ್ತು (PC- PTI).

ಐಪಿಎಲ್‌ನ ಒಂದೇ ಸೀಸನ್‌ನಲ್ಲಿ 65 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವೈಭವ್, ಕ್ರಿಸ್ ಗೇಲ್ ಅವರ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು, ಕ್ರಿಸ್ ಗೇಲ್ 2012 ರಲ್ಲಿ 59 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಆ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ (PC- PTI).

ಐಪಿಎಲ್ ಟೂರ್ನಿಯ ನಾಕೌಟ್ ಹಂತಗಳಲ್ಲಿ ಅತ್ಯಂತ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ಸರಿಗಟ್ಟಿದ್ದಾರೆ. ಇದಕ್ಕೂ ಮೊದಲು 2014 ರಲ್ಲಿ, ಸುರೇಶ್ ರೈನಾ ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಈಗ ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ (PC- PTI).

ಪವರ್‌ಪ್ಲೇಯಲ್ಲಿ ವೈಭವ್ ಸೂರ್ಯವಂಶಿ ಬಾರಿಸಿದ ಐದನೇ ಅರ್ಧಶತಕ ಇದಾಗಿದೆ. ಈ ಮೂಲಕ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೇವಿಡ್ ವಾರ್ನರ್ 6 ಬಾರಿ ಈ ಸಾಧನೆ ಮಾಡಿದ್ದಾರೆ (PC- PTI).

ಪವರ್ ಪ್ಲೇನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ವೈಭವ್ ಆರು ಓವರ್‌ಗಳಲ್ಲಿ 8 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೂಲಕ ಅವರು ಸನತ್ ಜಯಸೂರ್ಯ, ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋವ್, ಅಭಿಷೇಕ್ ಶರ್ಮಾ ಮತ್ತು ಅವರ ಹೆಸರಿನಲ್ಲಿದ್ದ 7 ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದ್ದಾರೆ (PC- PTI).

ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ವೈಭವ್ ಸೂರ್ಯವಂಶಿ ನಿರ್ಮಿಸಿದ್ದಾರೆ. 2016 ರಲ್ಲಿ ಡೇವಿಡ್ ವಾರ್ನರ್ 467 ರನ್ ಗಳಿಸಿದ್ದರು. ಈಗ ವೈಭವ್ ಸೂರ್ಯವಂಶಿ ಈ ಟೂರ್ನಿಯಲ್ಲಿ 490 ರನ್ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ (PC- PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More




