14 ಸಿಕ್ಸ್, 7 ಫೋರ್: 33 ಎಸೆತಗಳಲ್ಲಿ ಮೂರಂಕಿ ಮೊತ್ತಗಳಿಸಿದ ಇಶಾನ್ ಕಿಶನ್
Jharkhand vs Karnataka: ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಎಡಗೈ ದಾಂಡಿಗ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕರ್ನಾಟಕ ವಿರುದ್ಧದ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ 125 ರನ್ ಸಿಡಿಸಿದ್ದಾರೆ. ಈ ಮೂಲಕ ಕರ್ನಾಟಕ ತಂಡಕ್ಕೆ ಜಾರ್ಖಂಡ್ 413 ರನ್ಗಳ ಗುರಿ ನೀಡಿದೆ.
Updated on: Dec 24, 2025 | 2:01 PM

ದೇಶೀಯ ಟೂರ್ನಿಯಲ್ಲಿ ಇಶಾನ್ ಕಿಶನ್ (Ishan Kishan) ಸಿಡಿಲಬ್ಬರ ಮುಂದುವರೆದಿದೆ. ಇತ್ತೀಚೆಗಷ್ಟೇ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ಇಶಾನ್ ಇದೀಗ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಸ್ಫೋಟಕ ಶತಕ ಬಾರಿಸಿದ್ದಾರೆ.

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಾರ್ಖಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ಪರ ನಾಯಕ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಎದುರಿಸಿದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ಗೆ ಒತ್ತು ನೀಡಿದರು. ಈ ಮೂಲಕ ಕರ್ನಾಟಕ ಬೌಲರ್ಗಳ ಬೆಂಡೆತ್ತಿದ ಯುವ ಎಡಗೈ ದಾಂಡಿಗ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ವಿಜಯ ಹಝಾರೆ ಟೂರ್ನಿಯಲ್ಲಿ ಮೂಡಿಬಂದ 2ನೇ ವೇಗದ ಸೆಂಚುರಿ ಎಂಬುದು ವಿಶೇಷ.

ಇದಕ್ಕೂ ಮುನ್ನ ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಬಿಹಾರ ತಂಡದ ನಾಯಕ ಸಕಿಬುಲ್ ಗನಿ 32 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ 32 ಎಸೆತಗಳ ಮೂಲಕ ಸೆಂಚುರಿ ಪೂರೈಸಿ ಇಶಾನ್ ಕಿಶನ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಬಾರಿಸಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಕೇವಲ 39 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 14 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 125 ರನ್ ಬಾರಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಜಾರ್ಖಂಡ್ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 412 ರನ್ ಕಲೆಹಾಕಿದ್ದಾರೆ.
