- TV9 Kannada Photo gallery Cricket photos Jai Mundra: Indian Origin Bowler's Heroics Against Team India and European T20 League Debut
ಟೀಂ ಇಂಡಿಯಾ ವಿರುದ್ಧ ಮಿಂಚಿದ್ದ ಭಾರತ ಮೂಲದ ವೇಗಿಗೆ ಜಾಕ್ಪಾಟ್
Jai Mundra: ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋಲನುಭವಿಸಿತ್ತು. ರಾಜಸ್ಥಾನ ಮೂಲದ ಜೈ ಮುಂದ್ರಾ ಈ ಐತಿಹಾಸಿಕ ಸೋಲಿಗೆ ಪ್ರಮುಖ ಕಾರಣರಾಗಿದ್ದರು. ಟೀಂ ಇಂಡಿಯಾ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಮುಂದ್ರಾ, ಈಗ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ರೋಟರ್‌ಡ್ಯಾಮ್ ಡಾಕರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದು ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಹೊಸ ಮೈಲುಗಲ್ಲು.
Updated on: Jul 02, 2026 | 9:48 PM

ಕೆಲವೇ ದಿನಗಳ ಹಿಂದಷ್ಟೇ ಟೀಂ ಇಂಡಿಯಾ ಐತಿಹಾಸಿಕ ಸರಣಿ ಸೋಲಿಗೆ ಕೊರಳೊಡ್ಡಿತ್ತು. ಅದು ಕ್ರಿಕೆಟ್ ಲೋಕದ ಶಿಶು ಎಂದೇ ಬಿಂಬಿತವಾಗಿರುವ ಐರ್ಲೆಂಡ್ನಂತಹ ತಂಡದ ಎದುರು. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಸೋಲುವುದರ ಜೊತೆಗೆ ಟಿ20 ಸರಣಿಯಲ್ಲಿ ವೈಟ್ ವಾಶ್ ಮುಖಭಂಗವನ್ನು ಅನುಭವಿಸಿತ್ತು.

ಟೀಂ ಇಂಡಿಯಾದ ಈ ಐತಿಹಾಸಿಕ ಸೋಲಿಗೆ ಭಾರತ ಮೂಲದ ಬೌಲರ್ ಕಾರಣರಾಗಿದ್ದು ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ರಾಜಸ್ಥಾನದ ಟೋಂಕ್‌ನಲ್ಲಿ ಜನಿಸಿ, ನಂತರ ವಿದ್ಯಾರ್ಥಿ ವೀಸಾದಲ್ಲಿ ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಐರ್ಲೆಂಡ್‌ಗೆ ತೆರಳಿದ್ದ ಜೈ ಮುಂದ್ರಾ ಅಲ್ಲಿಯೇ ವೃತ್ತಿಪರ ಕ್ರಿಕೆಟ್ ಆಡಲು ಆರಂಭಿಸಿದ್ದರು. ಕಾಕತಾಳೀಯವಾಗಿ ಟೀಂ ಇಂಡಿಯಾ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಅವಕಾಶವೂ ಅವರಿಗೆ ಲಭಿಸಿತ್ತು.

ಸಿಕ್ಕ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದ ಜೈ ಮುಂದ್ರಾ, ಟೀಂ ಇಂಡಿಯಾ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 25 ರನ್ ನೀಡಿ 2 ವಿಕೆಟ್ ಪಡೆದಿದ್ದ ಮುಂದ್ರಾ, ಎರಡನೇ ಪಂದ್ಯದಲ್ಲಿ 32 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿ ಭಾರತದ ಸೋಲಿಗೆ ಕಾರಣರಾಗಿದ್ದರು.

ಟೀಂ ಇಂಡಿಯಾದಂತಹ ಬಲಿಷ್ಠ ತಂಡದ ವಿರುದ್ಧವೇ ಮಾರಕ ಬೌಲಿಂಗ್ ದಾಳಿ ಪ್ರದರ್ಶಿಸಿದ್ದ ಜೈ ಮುಂದ್ರಾಗೆ ಇದೀಗ ಯುರೋಪಿನಲ್ಲಿ ಆರಂಭವಾಗುತ್ತಿರುವ ಚೊಚ್ಚಲ ಆವೃತ್ತಿಯಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಅವರನ್ನು ರೋಟರ್‌ಡ್ಯಾಮ್ ಡಾಕರ್ಸ್ ಫ್ರಾಂಚೈಸಿ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

ಈ ಟಿ20 ಲೀಗ್‌ನಲ್ಲಿ ಒಟ್ಟು ಆರು ತಂಡಗಳು ಕಣಕ್ಕಿಳಿಯುತ್ತಿದ್ದು, ಇಲ್ಲಿಯವರೆಗೆ ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್‌ನಿಂದ ತಲಾ 12 ಆಟಗಾರರನ್ನು ಒಳಗೊಂಡಂತೆ 36 ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಪ್ರತಿ ತಂಡವು ಆರು ಆಟಗಾರರನ್ನು ಉಳಿಸಿಕೊಂಡಿದೆ. ಅದರಲ್ಲಿ ರೋಟರ್‌ಡ್ಯಾಮ್ ಡಾಕರ್ಸ್ ಫ್ರಾಂಚೈಸಿ ಜೈ ಮುಂದ್ರಾರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.




