
ದೇಶೀ ಟೂರ್ನಿ ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳು ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪೂರ್ವ ವಲಯ ಹಾಗೂ ಕೇಂದ್ರಿಯ ವಲಯ ತಂಡಗಳು ಮುಖಾಮುಖಿಯಾಗಿವೆ. ಈ ಟೂರ್ನಿಯಲ್ಲಿ ಪೂರ್ವ ವಲಯ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ ವೃತ್ತಿಜೀವನದಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ(PC-PTI).
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇಂದ್ರ ವಲಯ ತಂಡ ಮೊದಲ ದಿನದಾಟದಂತ್ಯಕ್ಕೆ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 266 ರನ್ ಕಲೆಹಾಕಿದೆ. ಕೇಂದ್ರ ವಲಯ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಶಮಿ 16 ಓವರ್‌ಗಳನ್ನು ಬೌಲ್ ಮಾಡಿ 42 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದರು(PC-PTI).
ಈ ಎರಡು ವಿಕೆಟ್‌ಗಳೊಂದಿಗೆ, ಮೊಹಮ್ಮದ್ ಶಮಿ ವೃತ್ತಿಪರ ಕ್ರಿಕೆಟ್‌ನಲ್ಲಿ 900 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಈ ಮೈಲಿಗಲ್ಲನ್ನು ತಲುಪುವ ಮೂಲಕ, ಶಮಿ ಪ್ರಥಮ ದರ್ಜೆ, ಲಿಸ್ಟ್ ಎ ಮತ್ತು ಟಿ20 ಕ್ರಿಕೆಟ್‌ನಲ್ಲಿ 900 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ವೇಗದ ಬೌಲರ್‌ಗಳ ಗಣ್ಯರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ಆರನೇ ಭಾರತೀಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ(PC-PTI).
ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 379 ವಿಕೆಟ್‌ಗಳು, ಲಿಸ್ಟ್ ಎ ಕ್ರಿಕೆಟ್‌ನಲ್ಲಿ 283 ಮತ್ತು ಟಿ20 ಕ್ರಿಕೆಟ್‌ನಲ್ಲಿ 280 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ 900 ವೃತ್ತಿಪರ ವಿಕೆಟ್‌ಗಳಲ್ಲಿ 462 ವಿಕೆಟ್‌ಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾ ಪರ ಉರುಳಿಸಿದ್ದಾರೆ(PC-PTI).
2010 ರಲ್ಲಿ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದ ಮೊಹಮ್ಮದ್ ಶಮಿ 2013 ರಲ್ಲಿ ಟೀಂ ಇಂಡಿಯಾ ಪರ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದರು. ಅಲ್ಲಿಂದ ತಂಡದಲ್ಲಿ ಖಾಯಂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದ ಮೊಹಮ್ಮದ್ ಶಮಿ 2025 ರಿಂದ ಟೀಂ ಇಂಡಿಯಾ ಪರ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಅಲ್ಲದೆ ಸಿಕ್ಕಿರುವ ಮಾಹಿತಿ ಪ್ರಕಾರ, ಶಮಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಭಾಗಶಃ ಮುಗಿದಿದೆ ಎಂತಲೇ ಹೇಳಲಾಗುತ್ತಿದೆ(PC-PTI).