- Kannada News Photo gallery Cricket photos Nat Sciver-Brunt Creates New World Record In 2025 World Cup
ಭರ್ಜರಿ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ನ್ಯಾಟ್ ಸೀವರ್ ಬ್ರಂಟ್
England Women vs Sri Lanka Women: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 253 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 45.4 ಓವರ್ಗಳಲ್ಲಿ ಕೇವಲ 164 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಇಂಗ್ಲೆಂಡ್ ತಂಡ 89 ರನ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Oct 12, 2025 | 9:54 AM

ಮಹಿಳಾ ಏಕದಿನ ವಿಶ್ವಕಪ್ನ 12ನೇ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ನ್ಯಾಟ್ ಸೀವರ್ ಬ್ರಂಟ್ (Nat Sciver-Brunt) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು.

ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ನ್ಯಾಟ್ ಸೀವರ್ ಬ್ರಂಟ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಸೀವರ್ ಆ ಬಳಿಕ ಬಿರುಸಿನ ಹೊಡೆತಗಳೊಂದಿಗೆ ಗಮನ ಸೆಳೆದರು.

ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ನ್ಯಾಟ್ ಸೀವರ್ ಬ್ರಂಟ್ 117 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 117 ರನ್ ಬಾರಿಸಿದರು. ಈ ಶತಕದೊಂದಿಗೆ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಬ್ರಂಟ್ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಸುಝಿ ಬೆಟ್ಸ್ ಹೆಸರಿನಲ್ಲಿತ್ತು. ಮಹಿಳಾ ಏಕದಿನ ವಿಶ್ವಕಪ್ನಲ್ಲಿ 29 ಇನಿಂಗ್ಸ್ ಆಡಿರುವ ಸುಝಿ ಬೆಟ್ಸ್ ಒಟ್ಟು 4 ಶತಕ ಬಾರಿಸಿ ಈ ಭರ್ಜರಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆ ಮುರಿಯುವಲ್ಲಿ ನ್ಯಾಟ್ ಸೀವರ್ ಬ್ರಂಟ್ ಯಶಸ್ವಿಯಾಗಿದ್ದಾರೆ.

ಇಂಗ್ಲೆಂಡ್ ಪರ ಮಹಿಳಾ ಏಕದಿನ ವಿಶ್ವಕಪ್ನಲ್ಲಿ 19 ಇನಿಂಗ್ಸ್ ಆಡಿರುವ ನ್ಯಾಟ್ ಸೀವರ್ ಬ್ರಂಟ್ ಈವರೆಗೆ 5 ಶತಕ ಸಿಡಿಸಿದ್ದಾರೆ. ಈ ಐದು ಶತಕಗಳೊಂದಿಗೆ ವುಮೆನ್ಸ್ ಒಡಿಐ ವರ್ಲ್ಡ್ ಕಪ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
