- Kannada News Photo gallery Cricket photos Pakistan vs South Africa Test: Babar Azam's Century Wait Extends After Flop
PAK vs SA: 31 ತಿಂಗಳು, 73 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಶತಕ ಬಾರಿಸದ ಬಾಬರ್ ಆಝಂ
Babar Azam's Century Drought Continues: ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಆರಂಭವಾಗಿದೆ. ಆದರೆ ತಂಡಕ್ಕೆ ಮರಳಿದ ಬಾಬರ್ ಅಜಮ್ ಕೇವಲ 23 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇದು ಅವರ ಶತಕದ ಬರವನ್ನು ಮತ್ತಷ್ಟು ವಿಸ್ತರಿಸಿದೆ. ಬಾಬರ್ ಕೊನೆಯದಾಗಿ ಡಿಸೆಂಬರ್ 2022ರಲ್ಲಿ ಟೆಸ್ಟ್ ಶತಕ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಈ ವೈಫಲ್ಯವು ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Updated on: Oct 12, 2025 | 7:04 PM

ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂದಿನಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಪಾಕಿಸ್ತಾನ ತಂಡ ಮೊದಲ ದಿನದಾಟದಂತ್ಯಕ್ಕೆ 313 ರನ್ ಕಲೆಹಾಕಿತು. ತಂಡದ ಪರ ನಾಲ್ವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಆದರೆ ಬಹಳ ದಿನಗಳ ನಂತರ ತಂಡದಲ್ಲಿ ಕಾಣಿಸಿಕೊಂಡ ಮಾಜಿ ನಾಯಕ ಬಾಬರ್ ಆಝಂ ಮತ್ತೊಮ್ಮೆ ವಿಫಲರಾದರು. 947 ದಿನಗಳ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಬಾಬರ್ ಕೇವಲ 23 ರನ್ ಗಳಿಸಿ ಔಟಾದರು. ಇದು ಬಾಬರ್ ಆಝಂ ಅವರ ಶತಕದ ಕಾಯುವಿಕೆಯನ್ನು ಮತ್ತಷ್ಟು ವಿಸ್ತರಿಸಿತು. ವಾಸ್ತವವಾಗಿ ಬಾಬರ್ 73 ಇನ್ನಿಂಗ್ಸ್‌ಗಳು ಮತ್ತು 31 ತಿಂಗಳುಗಳಿಂದ ಒಂದೇ ಒಂದು ಶತಕ ಬಾರಿಸಿಲ್ಲ.

ಪಾಕಿಸ್ತಾನ ನಾಯಕ ಶಾನ್ ಮಸೂದ್ ಔಟಾದ ನಂತರ ಕ್ರೀಸ್ಗೆ ಬಂದ ಬಾಬರ್, ಉತ್ತಮ ಆರಂಭವನ್ನು ಪಡೆದುಕೊಂಡರು. ಆದರೆ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಸೈಮನ್ ಹಾರ್ಮರ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಬಾಬರ್ 48 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 23 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದು ಅವರ ಶತಕದ ಕಾಯುವಿಕೆಯನ್ನು ಮತ್ತಷ್ಟು ವಿಸ್ತರಿಸಿತು.

ಬಾಬರ್ ಆಝಂ ಆಗಸ್ಟ್ 30, 2023 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ನೇಪಾಳ ವಿರುದ್ಧ ಶತಕ ಬಾರಿಸಿದ್ದರು. ಅಂದಿನಿಂದ ಬಾಬರ್ 73 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ, ಆದರೆ ಶತಕ ಬಾರಿಸಿಲ್ಲ. ಈ ಅವಧಿಯಲ್ಲಿ, ಬಾಬರ್ ಏಕದಿನದಲ್ಲಿ 29 ಇನ್ನಿಂಗ್ಸ್‌ಗಳು, ಟಿ20 ಕ್ರಿಕೆಟ್‌ನಲ್ಲಿ 23 ಇನ್ನಿಂಗ್ಸ್‌ಗಳು ಮತ್ತು ಟೆಸ್ಟ್ ಪಂದ್ಯಗಳಲ್ಲಿ 21 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

ಬಾಬರ್ ಆಝಂ ಕಳೆದ ಮೂರು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಗಳಿಸಿಲ್ಲ. ಡಿಸೆಂಬರ್ 26, 2022 ರಂದು ಕರಾಚಿಯಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 161 ರನ್ ಬಾರಿಸಿದ್ದ ಬಾಬರ್ ಅಂದಿನಿಂದ ಈ ಸ್ವರೂಪದಲ್ಲಿ ಶತಕ ಗಳಿಸಿಲ್ಲ.

ಬಾಬರ್ ಇಲ್ಲಿಯವರೆಗೆ 60 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 109 ಇನ್ನಿಂಗ್ಸ್‌ಗಳಲ್ಲಿ, ಅವರು 42.58 ರ ಸರಾಸರಿಯಲ್ಲಿ 4258 ರನ್ ಗಳಿಸಿದ್ದಾರೆ, ಇದರಲ್ಲಿ ಒಂಬತ್ತು ಶತಕಗಳು ಮತ್ತು 29 ಅರ್ಧಶತಕಗಳು ಸೇರಿವೆ. ಏಕದಿನ ಪಂದ್ಯಗಳಲ್ಲಿ ಬಾಬರ್ 134 ಪಂದ್ಯಗಳಲ್ಲಿ 19 ಶತಕಗಳು ಮತ್ತು 128 ಟಿ20ಗಳಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ.
