- Kannada News Photo gallery Cricket photos New World Record, first father son duo to play international cricket together
ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಾಣ
Cricket World Record: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಂದೆ ಮತ್ತು ಮಗ ಒಂದೇ ದೇಶದ ಪರ ಆಡಿದ ಹಲವು ನಿದರ್ಶನಗಳಿವೆ. ಅಷ್ಟೇ ಅಲ್ಲದೆ ವಿವಿಧ ಲೀಗ್ಗಳಲ್ಲಿ ಹಾಗೂ ದೇಶೀಯ ಟೂರ್ನಿಗಳಲ್ಲಿ ತಂದೆ ಮತ್ತು ಮಗ ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದ ಉದಾಹರಣೆಗಳಿವೆ. ಆದರೆ ಇದೇ ಮೊದಲ ಬಾರಿಗೆ ತಂಡವೊಂದರ ಪರ ತಂದೆ-ಮಗ ಜೊತೆಯಾಗಿ ಕಣಕ್ಕಿಳಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
Updated on: Nov 10, 2025 | 7:09 AM

ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ (New World Record) ನಿರ್ಮಾಣವಾಗಿದೆ. ಅದು ಕೂಡ ಹಿಂದೆಂದೂ ಕಂಡರಿಯದ ಮತ್ತು ಕೇಳರಿಯದ ವರ್ಲ್ಡ್ ರೆಕಾರ್ಡ್. ಇಂತಹದೊಂದು ದಾಖಲೆ ನಿರ್ಮಿಸಿರುವುದು ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್.

ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್ ಜೊತೆಯಾಗಿ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇದರಲ್ಲೇನು ವಿಶೇಷ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ತಂದೆ ಮತ್ತು ಮಗ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಂದೆ ಮತ್ತು ಮಗ ಜೊತೆಯಾಗಿ ಒಂದೇ ತಂಡದ ಪರ ಕಣಕ್ಕಿಳಿದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ ನೂರ ನಲ್ವತ್ತೆಂಟು ವರ್ಷಗಳಲ್ಲಿ ಯಾವುದೇ ತಂಡದ ಪರ ತಂದೆ ಮತ್ತು ಮಗ ಜೊತೆಯಾಗಿ ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಆದರೀಗ ಟಿಮೋರ್-ಲೆಸ್ಟೆ (ಆಗ್ನೇಯ ಏಷ್ಯಾ ರಾಷ್ಟ್ರ) ದೇಶದ ಪರ ಕಣಕ್ಕಿಳಿಯುವ ಮೂಲಕ ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇಂಡೋನೇಷ್ಯಾ ವಿರುದ್ಧದ ಪಂದ್ಯದಲ್ಲಿ ಟಿಮೋರ್-ಲೆಸ್ಟೆ ಪರ 50 ವರ್ಷದ ಸುಹೇಲ್ ಸತ್ತಾರ್ ಹಾಗೂ 17 ವರ್ಷದ ಯಹಿಯಾ ಸುಹೇಲ್ ಕಣಕ್ಕಿಳಿದಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಸಹ ಜೊತೆಯಾಗಿ ಬ್ಯಾಟಿಂಗ್ ಸಹ ಮಾಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಜೊತೆಯಾಗಿ ಆಡಿದ ತಂದೆ-ಮಗ ಎನಿಸಿಕೊಂಡಿದ್ದಾರೆ.

ಇನ್ನು ಬಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸುಹೇಲ್ ಸತ್ತಾರ್ 14 ರನ್ಗಳಿಸಿದರೆ, ಯಹಿಯಾ ಸುಹೇಲ್ ಕೇವಲ 1 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಟಿಮೋರ್-ಲೆಸ್ಟೆ ತಂಡ 19 ಓವರ್ಗಳಲ್ಲಿ 61 ರನ್ಗಳಿಸಿ ಆಲೌಟ್ ಆಗಿತ್ತು.ಈ ಗುರಿಯನ್ನು ನಾಲ್ಕು ಓವರ್ಗಳಲ್ಲಿ ಚೇಸ್ ಮಾಡಿ ಇಂಡೋನೇಷ್ಯಾ ತಂಡ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.




