ಸೈಮ್ ಸಿಡಿಲಬ್ಬರ… 79 ಎಸೆತಗಳಲ್ಲಿ ಪಂದ್ಯ ಮುಗಿಸಿದ ಪಾಕಿಸ್ತಾನ್..!
Pakistan vs South Africa, 2nd T20I: ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಪಾಕಿಸ್ತಾನ್ ತಂಡವು ದ್ವಿತೀಯ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದೆ. ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿರುವ ಪಾಕ್ ಪಡೆಯು ಸೈಮ್ ಅಯ್ಯೂಬ್ ಅವರ ವಿಸ್ಫೋಟಕ ಬ್ಯಾಟಿಂಗ್ನೊಂದಿಗೆ 9 ವಿಕೆಟ್ಗಳ ಜಯ ಸಾಧಿಸಿದೆ.
Updated on: Nov 01, 2025 | 8:25 AM

ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಭರ್ಜರಿ ಜಯ ಸಾಧಿಸಿದೆ. ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಫಯೀಮ್ ಅಶ್ರಫ್ (4 ವಿಕೆಟ್) ಹಾಗೂ ಸಲ್ಮಾನ್ ಮಿರ್ಝ (3 ವಿಕೆಟ್) ದಾಳಿಗೆ ತತ್ತರಿಸಿದ ಸೌತ್ ಆಫ್ರಿಕಾ ತಂಡವು 19.2 ಓವರ್ಗಳಲ್ಲಿ 110 ರನ್ಗಳಿಸಿ ಸರ್ವಪತನ ಕಂಡಿತು.

111 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಸಾಹಿಬ್ಝಾದ ಫರ್ಹಾನ್ ಹಾಗೂ ಸೈಮ್ ಅಯ್ಯೂಬ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಅದರಲ್ಲೂ ವಿಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೈಮ್ ಅಯ್ಯೂಬ್ ಆಫ್ರಿಕಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.

ಆರಂಭದಿಂದಲೇ ಹೊಡಿಬಡಿ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಸೈಮ್ ಅಯ್ಯೂಬ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 71 ರನ್ ಬಾರಿಸಿದರು.

ಈ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ಥಾನ್ ತಂಡವು 13.1 ಓವರ್ಗಳಲ್ಲಿ ಅಂದರೆ ಕೇವಲ 79 ಎಸೆತಗಳಲ್ಲಿ 111 ರನ್ಗಳ ಗುರಿ ಮುಟ್ಟಿತು. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧದದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
