ಟೆಸ್ಟ್ನಲ್ಲಿ RCB ಆಟಗಾರನ ಆರ್ಭಟ: ಚೊಚ್ಚಲ ಶತಕ ಜಸ್ಟ್ ಮಿಸ್
Jacob Bethell: 21 ವರ್ಷದ ಜೇಕಬ್ ಬೆಥೆಲ್ ಇಂಗ್ಲೆಂಡ್ ತಂಡದ ಭರವಸೆಯ ಆಲ್ರೌಂಡರ್ ಆಟಗಾರ. ಈ ಬಾರಿಯ ಮೆಗಾ ಹರಾಜಿನಲ್ಲಿ ಬೆಥೆಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2.6 ಕೋಟಿ ರೂ.ಗೆ ಖರೀದಿಸಿದೆ. ಈ ಖರೀದಿ ಬೆನ್ನಲ್ಲೇ ಅಬ್ಬರ ಶುರು ಮಾಡಿರುವ ಜೇಕಬ್ ಈ ಬಾರಿಯ ಐಪಿಎಲ್ನಲ್ಲೂ ಸಿಡಿಲಬ್ಬರ ಪ್ರದರ್ಶಿಸುವ ನಿರೀಕ್ಷೆಯಿದೆ.
Updated on: Dec 07, 2024 | 12:53 PM

ವೆಲ್ಲಿಂಗ್ಟನ್ನಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಯುವ ದಾಂಡಿಗ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆಥೆಲ್ ಸ್ಪೋಟಕ ಇನಿಂಗ್ಸ್ಗೆ ಒತ್ತು ನೀಡಿದರು.

ಅದರಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ 21 ವರ್ಷದ ಬೆಥೆಲ್ ಅನುಭವಿ ನ್ಯೂಝಿಲೆಂಡ್ ಬೌಲರ್ಗಳ ವಿರುದ್ಧ ಸೆಟೆದು ನಿಂತರು. ಪರಿಣಾಮ ಜೇಕಬ್ ಬೆಥೆಲ್ ಬ್ಯಾಟ್ನಿಂದ 3 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳು ಮೂಡಿಬಂದವು.

ಆದರೆ 117 ಎಸೆತಗಳಲ್ಲಿ 96 ರನ್ಗಳಿಸಿದ್ದ ವೇಳೆ ಟಿಮ್ ಸೌಥಿ ಎಸೆದ ಎಸೆತವನ್ನು ಗುರುತಿಸುವಲ್ಲಿ ಎಡವಿದ ಬೆಥೆಲ್ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಈ ಮೂಲಕ ಕೇವಲ 4 ರನ್ಗಳಿಂದ ಚೊಚ್ಚಲ ಶತಕ ಸಿಡಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡರು.

ಇದಕ್ಕೂ ಮುನ್ನ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೇಕಬ್ ಬೆಥೆಲ್ ಕೇವಲ 37 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗೊಂದಿಗೆ ಅಜೇಯ 50 ರನ್ ಬಾರಿಸಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಇಂಗ್ಲೆಂಡ್ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು.

ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಆರ್ಭಟ ಮುಂದುವರೆಸಿರುವ ಜೇಕಬ್ ಬೆಥೆಲ್ ಶತಕದಂಚಿನಲ್ಲಿ ಎಡವಿದ್ದಾರೆ. ಇದಾಗ್ಯೂ ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ತಂಡವು ದ್ವಿತೀಯ ದಿನದಾಟದ ಮುಕ್ತಾಯದ ವೇಳೆಗೆ 2ನೇ ಇನಿಂಗ್ಸ್ನಲ್ಲಿ 5 ವಿಕೆಟ್ ಕಳೆದುಕೊಂಡು 378 ರನ್ ಕಲೆಹಾಕಿದೆ.


ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More




