Rohit Sharma: ಅಂದು ವಿರಾಟ್ ಕೊಹ್ಲಿ, ಇಂದು ರೋಹಿತ್ ಶರ್ಮಾ: ಹಿಟ್ಮ್ಯಾನ್ಗೆ ಶತಕದ ಬರ
Rohit Sharma's Last century: ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಕೊನೆಯ ಏಕದಿನ ಪಂದ್ಯವಾಡಲು ಸಜ್ಜಾಗಿದೆ. 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದ ರೋಹಿತ್ ಶರ್ಮಾ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸುವ ವಿಶ್ವಾಸದಲ್ಲಿದ್ದಾರೆ.
Updated on: Jan 22, 2023 | 7:22 PM

2019 ರಲ್ಲಿ ಕೊನೆಯ ಬಾರಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ ತಮ್ಮ 71ನೇ ಶತಕ ಬಾರಿಸಲು 3 ವರ್ಷ ತೆಗೆದುಕೊಂಡಿದ್ದರು. ಇದರ ನಡುವೆ ಹಲವು ಟೀಕೆಗಳಿಗೂ ಗುರಿಯಾಗಿದ್ದರು. ಆದರೆ ಇವೆಲ್ಲವನ್ನೂ ಮೆಟ್ಟಿ ನಿಂತ ಕಿಂಗ್ ಕೊಹ್ಲಿ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿ ಕಂಬ್ಯಾಕ್ ಮಾಡಿದ್ದರು. ಆ ಬಳಿಕ ಬ್ಯಾಕ್ ಟು ಬ್ಯಾಕ್ 3 ಶತಕ ಬಾರಿಸಿ ಮಿಂಚಿದ್ದಾರೆ. ಇದೀಗ ರೋಹಿತ್ ಶರ್ಮಾ ಸರದಿ.

ಹೌದು, ಹಿಟ್ಮ್ಯಾನ್ ಕೂಡ ವಿರಾಟ್ ಕೊಹ್ಲಿಯಂತೆ ಶತಕದ ಬರವನ್ನು ಎದುರಿಸುತ್ತಿದ್ದಾರೆ. ಅಂದರೆ ರೋಹಿತ್ ಶರ್ಮಾ ಏಕದಿನ ಶತಕ ಬಾರಿಸಿ ವರ್ಷಗಳೇ ಕಳೆದಿವೆ. ಕೊನೆಯ ಬಾರಿ ಹಿಟ್ಮ್ಯಾನ್ ಬ್ಯಾಟ್ನಿಂದ ಶತಕ ಮೂಡಿಬಂದಿದ್ದು 2020 ರಲ್ಲಿ. ಆ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಮೂರಂಕಿ ಮೊತ್ತಗಳಿಸಿ ರೋಹಿತ್ ಶರ್ಮಾ ಬ್ಯಾಟ್ ಮೇಲೆತ್ತಿಲ್ಲ.

2020, ಜನವರಿ 19 ರಂದು ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 119 ರನ್ ಬಾರಿಸಿದ್ದೇ ಕೊನೆಯ ಶತಕ. ಇದಾದ ಬಳಿಕ ಒನ್ಡೇ ಕ್ರಿಕೆಟ್ನಲ್ಲಿ ಸೆಂಚುರಿ ಬಾರಿಸುವಲ್ಲಿ ಹಿಟ್ಮ್ಯಾನ್ ಸಫಲರಾಗಿಲ್ಲ.

ಅಂದರೆ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 29 ಶತಕ ಬಾರಿಸಿರುವ ರೋಹಿತ್ ಶರ್ಮಾ ತಮ್ಮ 30ನೇ ಶತಕಕ್ಕಾಗಿ ಮೂರು ವರ್ಷಗಳಿಂದ ಕಾಯುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 83 ರನ್ ಬಾರಿಸಿದ್ದ ಹಿಟ್ಮ್ಯಾನ್ ಅದನ್ನು ಶತಕವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು.

ಇದೀಗ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಕೊನೆಯ ಏಕದಿನ ಪಂದ್ಯವಾಡಲು ಸಜ್ಜಾಗಿದೆ. 2ನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದ ರೋಹಿತ್ ಶರ್ಮಾ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸುವ ವಿಶ್ವಾಸದಲ್ಲಿದ್ದಾರೆ ಅಭಿಮಾನಿಗಳು. ಈ ಮೂಲಕ ಮೂರು ವರ್ಷಗಳ ಏಕದಿನ ಶತಕದ ಬರಕ್ಕೆ ಫುಲ್ಸ್ಟಾಪ್ ಇಡಲಿದ್ದಾರಾ ಕಾದು ನೋಡಬೇಕಿದೆ.



















