ಸ್ಮೃತಿ ಮಂಧಾನ ದಾಖಲೆ ಧೂಳೀಪಟ: ಹೊಸ ವಿಶ್ವ ದಾಖಲೆ ಬರೆದ ತಝ್ಮಿನ್ ಬ್ರಿಟ್ಸ್
New Zealand Women vs South Africa Women: ಮಹಿಳಾ ಏಕದಿನ ವಿಶ್ವಕಪ್ನ 7ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 231 ರನ್ ಕಲೆಹಾಕಿದರೆ, ಈ ಗುರಿಯನ್ನು ಸೌತ್ ಆಫ್ರಿಕಾ 40.5 ಓವರ್ಗಳಲ್ಲಿ 234 ರನ್ಗಳಿಸಿ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
Updated on: Oct 07, 2025 | 8:19 AM

ಇಂದೋರ್ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ನ 7ನೇ ಪಂದ್ಯದಲ್ಲಿ ಸೌತ್ ಆಫ್ರಿಕಾದ ತಝ್ಮಿನ್ ಬ್ರಿಟ್ಸ್ (Tazmin brits) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ಮಹಿಳಾ ತಂಡವು 47.5 ಓವರ್ಗಳಲ್ಲಿ 231 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಆರಂಭಿಕಳಾಗಿ ಕಣಕ್ಕಿಳಿದ ತಝ್ಮಿನ್ ಸ್ಫೋಟಕ ಇನಿಂಗ್ಸ್ ಆಡಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ತಝ್ಮಿ ಬ್ರಿಟ್ಸ್ ಕೇವಲ 87 ಎಸೆತಗಳಲ್ಲಿ ಶತಕ ಪೂರೈಸಿದರು.

ಈ ಶತಕದೊಂದಿಗೆ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಒಂದೇ ವರ್ಷ ಅತ್ಯಧಿಕ ಸೆಂಚುರಿ ಸಿಡಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆ ತಝ್ಮಿನ ಬ್ರಿಟ್ಸ್ ಪಾಲಾಯಿತು. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹೆಸರಿನಲ್ಲಿತ್ತು.

ಸ್ಮೃತಿ ಮಂಧಾನ 2024 ರಲ್ಲಿ 4 ಏಕದಿನ ಶತಕಗಳನ್ನು ಬಾರಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು. ಅಲ್ಲದೆ ಈ ವರ್ಷ ಕೂಡ ನಾಲ್ಕು ಸೆಂಚುರಿ ಈ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಈ ದಾಖಲೆ ಮುರಿದು ತಝ್ಮಿನ್ ಬ್ರಿಟ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ತಝ್ಮಿನ್ ಬ್ರಿಟ್ಸ್ ಈ ವರ್ಷ ಆಡಿದ 11 ಏಕದಿನ ಪಂದ್ಯಗಳಲ್ಲಿ 5 ಶತಕ ಸಿಡಿಸಿದ್ದಾರೆ. ಈ ಐದು ಸೆಂಚುರಿಗಳೊಂದಿಗೆ ಮಹಿಳಾ ಏಕದಿನ ಇತಿಹಾಸದಲ್ಲೇ ಒಂದೇ ವರ್ಷ ಅತ್ಯಧಿಕ ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹಾಗೆಯೇ ಅತೀ ಕಡಿಮೆ ಪಂದ್ಯಗಳಲ್ಲಿ 7 ಏಕದಿನ ಸೆಂಚುರಿ ಸಿಡಿಸಿದ ಮಹಿಳಾ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಕೇವಲ 41 ಇನಿಂಗ್ಸ್ಗಳ ಮೂಲಕ ಎಂಬುದು ವಿಶೇಷ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
