- Kannada News Photo gallery Cricket photos Vaibhav Suryavanshi: 14 Year Old Appointed Bihar Ranji Vice Captain
Vaibhav Suryavanshi: 14ನೇ ವಯಸ್ಸಿಗೆ ರಣಜಿ ತಂಡದ ಉಪನಾಯಕನಾದ ವೈಭವ್ ಸೂರ್ಯವಂಶಿ
Vaibhav Suryavanshi: 14 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ರಣಜಿ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಅಂಡರ್-19 ತಂಡದ ಪರ ರನ್ ಮಳೆ ಸುರಿಸಿದ್ದ ಇವರು, ಐಪಿಎಲ್‌ನಲ್ಲಿ ಅತಿ ಕಿರಿಯ ಟಿ20 ಶತಕವೀರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಅಕ್ಟೋಬರ್ 15ರಿಂದ ಆರಂಭವಾಗುವ ರಣಜಿ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ, ಮುಂಬರುವ ಅಂಡರ್-19 ವಿಶ್ವಕಪ್ಗೆ ಸಿದ್ಧತೆ ಕಾರಣ ಸಂಪೂರ್ಣ ಸೀಸನ್ ಆಡುವುದಿಲ್ಲ.
Updated on:Oct 13, 2025 | 5:03 PM

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತದ ಅಂಡರ್ 19 ತಂಡದ ಪರ ರನ್ಗಳ ಮಳೆ ಹರಿಸಿದ್ದ ವೈಭವ್ ಸೂರ್ಯವಂಶಿಗೆ ಇದೀಗ ರಣಜಿ ತಂಡದ ಉಪನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ಇದೇ ಅಕ್ಟೋಬರ್ 15 ರಿಂದ ಆರಂಭವಾಗಲಿರುವ ದೇಶಿ ಟೂರ್ನಿ ರಣಜಿ ಟ್ರೋಫಿಯಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ತಂಡದ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ವೈಭವ್ ಸೂರ್ಯವಂಶಿ ಇದುವರೆಗೆ ಬಿಹಾರ ಪರ ಐದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 10 ಇನ್ನಿಂಗ್ಸ್‌ಗಳನ್ನಾಡಿ 158 ಎಸೆತಗಳನ್ನು ಎದುರಿಸಿ 100 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ, ಅವರು 18 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ. ವೈಭವ್ ಸೂರ್ಯವಂಶಿಗೆ ಮೊದಲ ಬಾರಿಗೆ ಬಿಹಾರದ ರಣಜಿ ತಂಡಕ್ಕೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.

ಇದೀಗ ಬಿಹಾರ ತಂಡದ ಉಪನಾಯಕನಾಗಿ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಬಿಹಾರ ಪರ ತಮ್ಮ ಆರನೇ ಪ್ರಥಮ ದರ್ಜೆ ಪಂದ್ಯವನ್ನು ಆಡಲಿದ್ದಾರೆ. ಇನ್ನು ಈ ತಂಡಕ್ಕೆ ಸಕಿಬುಲ್ ಗನಿ ಅವರನ್ನು ನಾಯಕರನ್ನಾಗಿ ನೇಮಿಸಲಾಗಿದೆ.

ಈ ವರ್ಷದ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ಗೂ ವೈಭವ್ ಪಾದಾರ್ಪಣೆ ಮಾಡಿದ್ದರು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಪುರುಷರ ಕ್ರಿಕೆಟ್‌ನಲ್ಲಿ ಟಿ20 ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ (14 ವರ್ಷ) ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಇದು ಐಪಿಎಲ್‌ನಲ್ಲಿ ಎರಡನೇ ಅತಿ ವೇಗದ ಶತಕವೂ ಆಗಿತ್ತು.

ಆದಾಗ್ಯೂ ವೈಭವ್ ಸೂರ್ಯವಂಶಿ ಮುಂದಿನ ವರ್ಷ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 2026 ರ ಅಂಡರ್-19 ವಿಶ್ವಕಪ್ ಮೇಲೆ ಗಮನ ಹರಿಸುವುದರಿಂದ, ಇಡೀ ರಣಜಿ ಟ್ರೋಫಿ ಋತುವಿನಲ್ಲಿ ಬಿಹಾರ ಪರ ಆಡುವುದಿಲ್ಲ.

ಬಿಹಾರ ತಂಡವು ಅಕ್ಟೋಬರ್ 15 ರಂದು ತನ್ನ ರಣಜಿ ಟ್ರೋಫಿ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಅರುಣಾಚಲ ಪ್ರದೇಶ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಪಾಟ್ನಾದ ಮೊಯಿನ್-ಉಲ್-ಹಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರ ತನ್ನ ಎರಡನೇ ಪಂದ್ಯವನ್ನು ಅಕ್ಟೋಬರ್ 25 ರಂದು ಮಣಿಪುರ ವಿರುದ್ಧ ಆಡಲಿದೆ.

ಬಿಹಾರ ತಂಡ: ಪಿಯೂಷ್ ಕುಮಾರ್ ಸಿಂಗ್, ಭಾಸ್ಕರ್ ದುಬೆ, ಸಕಿಬುಲ್ ಗನಿ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅರ್ನವ್ ಕಿಶೋರ್, ಆಯುಷ್ ಲೋಹರುಕ, ಬಿಪಿನ್ ಸೌರಭ್, ಅಮೋದ್ ಯಾದವ್, ನವಾಜ್ ಖಾನ್, ಸಕಿಬ್ ಹುಸೇನ್, ರಾಘವೇಂದ್ರ ಪ್ರತಾಪ್ ಸಿಂಗ್, ಸಚಿನ್ ಕುಮಾರ್ ಸಿಂಗ್, ಹಿಮಾಂಶು ಸಿಂಗ್, ಖಾಲಿದ್ ಆಲಂ, ಸಚಿನ್ ಕುಮಾರ್.
Published On - 5:03 pm, Mon, 13 October 25




