
ಗುಜರಾತ್ ಟೈಟಾನ್ಸ್ ಹಾಗೂ ಆರ್‌ಸಿಬಿ ನಡುವೆ ನಡೆದ ಐಪಿಎಲ್ 2026 ರ 42ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರು, ಆದರೆ ಕೇವಲ 13 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು. ಆದಾಗ್ಯೂ, ಈ ಪಂದ್ಯದಲ್ಲಿ ಕೊಹ್ಲಿ ಯಾವುದೇ ಬ್ಯಾಟ್ಸ್‌ಮನ್ ಮುರಿಯಲು ಅತ್ಯಂತ ಕಷ್ಟಕರವಾದ ಮಹತ್ವದ ದಾಖಲೆಯೊಂದನ್ನು ನಿರ್ಮಿಸಿದರು.

ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ 28 ರನ್‌ಗಳ ಇನ್ನಿಂಗ್ಸ್ ಆಡಿದ ಕೊಹ್ಲಿ ಏಷ್ಯಾದ ನೆಲದಲ್ಲಿ 12,000 ಕ್ಕೂ ಹೆಚ್ಚು ಟಿ20 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏಷ್ಯಾದಲ್ಲಿ 340 ಇನ್ನಿಂಗ್ಸ್‌ಗಳನ್ನಾಡಿರುವ ವಿರಾಟ್ ಕೊಹ್ಲಿ 12,012 ಟಿ20 ರನ್ ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಕ್ಕಪಕ್ಕ ಪ್ರಸ್ತುತ ಯಾವ ಬ್ಯಾಟ್ಸ್‌ಮನ್ ಕೂಡ ಇಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಏಷ್ಯಾದಲ್ಲಿ 10,252 ಟಿ20 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 10,023 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಒಟ್ಟಾರೆಯಾಗಿ ವಿರಾಟ್ ಕೊಹ್ಲಿ 422 ಟಿ20 ಪಂದ್ಯಗಳಲ್ಲಿ 13,894 ರನ್ ಗಳಿಸಿದ್ದಾರೆ. ಇದರಲ್ಲಿ ಒಂಬತ್ತು ಶತಕಗಳು ಮತ್ತು 108 ಅರ್ಧಶತಕಗಳು ಸೇರಿವೆ. ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 450 ಸಿಕ್ಸರ್‌ಗಳು ಮತ್ತು 1,250 ಕ್ಕೂ ಹೆಚ್ಚು ಬೌಂಡರಿಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದುವರೆಗೆ ಆಡಿರುವ ಒಂಬತ್ತು ಪಂದ್ಯಗಳಲ್ಲಿ 54 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿಯೊಂದಿಗೆ 379 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಐವತ್ತು ಪ್ಲಸ್ ಸ್ಕೋರ್‌ಗಳು ಸೇರಿವೆ.