Yashasvi Jaiswal: ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?
IPL 2023 Kannada: ಯಶಸ್ವಿ ಜೈಸ್ವಾಲ್ ಮೊದಲ ಓವರ್ನಲ್ಲಿ 2 ಭರ್ಜರಿ ಸಿಕ್ಸ್, ಮೂರು ಫೋರ್ ಹಾಗೂ 2 ರನ್ಗಳೊಂದಿಗೆ 26 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಪ್ರಥಮ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.
Updated on: May 12, 2023 | 3:57 PM

IPL 2023: ಐಪಿಎಲ್ನ 56ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಅಕ್ಷರಶಃ ಅಬ್ಬರಿಸಿದ್ದರು. ಮೊದಲ ಓವರ್ನಲ್ಲೇ 26 ರನ್ ಚಚ್ಚಿದ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಹೊಸ ಇತಿಹಾಸ ನಿರ್ಮಿಸಿದರು.

ಅಷ್ಟೇ ಅಲ್ಲದೆ ಕೆಕೆಆರ್ ಬೌಲರ್ಗಳ ಬೆಂಡೆತ್ತುವ ಮೂಲಕ ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿ 47 ಎಸೆತಗಳಲ್ಲಿ ಅಜೇಯ 98 ರನ್ ಸಿಡಿಸಿದ್ದರು.

ವಿಶೇಷ ಎಂದರೆ ಜೈಸ್ವಾಲ್ ಅವರ ಈ ಸಿಡಿಲಬ್ಬರದ ಬ್ಯಾಟಿಂಗ್ ವೇಳೆ ಬರೋಬ್ಬರಿ 5 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳು ಮೂಡಿಬಂದಿದ್ದವು. ಈ ಸ್ಪೋಟಕ ಇನಿಂಗ್ಸ್ಗೆ ಇದೀಗ ರನ್ ಮೆಷಿನ್ ವಿರಾಟ್ ಕೊಹ್ಲಿಯೇ ಫಿದಾ ಆಗಿದ್ದಾರೆ.

ಎಂತಹ ಅದ್ಭುತ ಬ್ಯಾಟಿಂಗ್...ಇತ್ತೀಚೆಗೆ ನಾ ನೋಡಿದ ಅತ್ಯುತ್ತಮ ಇನಿಂಗ್ಸ್ ಇದು...ಎಂತಹ ಅದ್ಭುತ ಪ್ರತಿಭೆ...ಎಂದು ಯಶಸ್ವಿ ಜೈಸ್ವಾಲ್ ಅವರನ್ನು ಕಿಂಗ್ ಕೊಹ್ಲಿ ಹಾಡಿ ಹೊಗಳಿ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾರೆ.

ಇತ್ತ ಪ್ರಸ್ತುತ ಕ್ರಿಕೆಟ್ ಅಂಗಳದ ಕಿಂಗ್ ಕಡೆಯಿಂದಲೇ ಹೊಗಳಿಸಿಕೊಂಡಿರುವ ಯಶಸ್ವಿ ಜೈಸ್ವಾಲ್ ಹಿರಿಹಿರಿ ಹಿಗ್ಗಿದ್ದಾರೆ. ಇನ್ನು ಈ ಸ್ಪೋಟಕ ಇನಿಂಗ್ಸ್ ಮೂಲಕ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ಕೂಡ ನಿರ್ಮಿಸಿದ್ದಾರೆ. ಆ ದಾಖಲೆಯೆಂದರೆ...

ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ದಾಖಲೆ ಇದೀಗ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕೆಎಲ್ ರಾಹುಲ್ ಹೆಸರಿನಲ್ಲಿತ್ತು. ಇದೀಗ 13 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ ಯಶಸ್ವಿ ಜೈಸ್ವಾಲ್ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇನ್ನು ನಿತೀಶ್ ರಾಣಾ ಎಸೆದ ಈ ಪಂದ್ಯದ ಮೊದಲ ಓವರ್ನಲ್ಲಿ 20 ವರ್ಷದ ಯಶಸ್ವಿ ಜೈಸ್ವಾಲ್ 6, 6, 4, 4, 2, 4 ಫೋರ್ ಬಾರಿಸಿದ್ದರು. ಈ ಮೂಲಕ ಮೊದಲ ಓವರ್ನಲ್ಲೇ ಅತ್ಯಧಿಕ ರನ್ ಕಲೆಹಾಕಿದ ಅತ್ಯಂತ ಕಿರಿಯ ಬ್ಯಾಟ್ಸ್ಮನ್ ಎನಿಸಿಕೊಂಡರು.

ಹಾಗೆಯೇ ಮೊದಲ ಓವರ್ನಲ್ಲಿ ಅತೀ ಹೆಚ್ಚು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಮುನ್ನ 2011 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಮೊದಲ ಓವರ್ನಲ್ಲಿ 27 ರನ್ ಬಾರಿಸಿತ್ತು. ಆದರೆ ಆ ಓವರ್ನಲ್ಲಿ 7 ಎಕ್ಸ್ಟ್ರಾ ರನ್ಗಳಿದ್ದವು.

ಆದರೀಗ ಯಶಸ್ವಿ ಜೈಸ್ವಾಲ್ ಮೊದಲ ಓವರ್ನಲ್ಲಿ 2 ಭರ್ಜರಿ ಸಿಕ್ಸ್, ಮೂರು ಫೋರ್ ಹಾಗೂ 2 ರನ್ಗಳೊಂದಿಗೆ 26 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಪ್ರಥಮ ಓವರ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ.
