IPL 2026 Car Winner: ಈ ಬಾರಿ ಟಾಟಾ ಕಾರ್ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ?
IPL 2026 Award List: ಈ ಬಾರಿಯ ಐಪಿಎಲ್ನಲ್ಲಿ ಅನುಭವಿ ಆಟಗಾರರನ್ನೇ ಹಿಂದಿಕ್ಕಿ ಯುವ ಎಡಗೈ ದಾಂಡಿಗ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಈ ಪ್ರಶಸ್ತಿ ಪಡೆದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on:Jun 03, 2026 | 10:07 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕೆ ತೆರೆಬಿದ್ದಿದೆ. ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಆರ್ಸಿಬಿ ತಂಡ ಬಹುಮಾನ ಮೊತ್ತವಾಗಿ 20 ಕೋಟಿ ರೂ. ತನ್ನದಾಗಿಸಿಕೊಂಡಿದೆ. (PC: IPL)

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಬಾರಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲಿ 29 ವಿಕೆಟ್ ಪಡೆದ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೊ ರಬಾಡ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. (PC: IPL)

ಅದೇ ರೀತಿ ಅದ್ಭುತ ಸ್ಟ್ರೈಕ್ ರೇಟ್ನೊಂದಿಗೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಸಫಾರಿ ಕಾರು ಈ ಬಾರಿ ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಪಾಲಾಗಿದೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟ್ರೈಕರ್ ಪ್ರಶಸ್ತಿ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. (PC: IPL)

ಇದಕ್ಕೂ ಮುನ್ನ 2025 ರಲ್ಲಿ ವೈಭವ್ ಸೂರ್ಯವಂಶಿ ಸೂಪರ್ ಸ್ಟ್ರೈಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ವೈಭವ್ ಒಂದು ಶತಕದೊಂದಿಗೆ ಒಟ್ಟು 252 ರನ್ ಕಲೆಹಾಕಿದ್ದರು. ಅದು ಕೂಡ 206.55 ರ ಸ್ಟ್ರೈಕ್ ರೇಟ್ನಲ್ಲಿ ಎಂಬುದು ವಿಶೇಷ. ಈ ಮೂಲಕ ಐಪಿಎಲ್ 2025ರ ಟಾಟಾ ಕರ್ವ್ ತಮ್ಮದಾಗಿಸಿಕೊಂಡಿದ್ದರು. (PC: IPL)

ಈ ಬಾರಿ ಅನುಭವಿ ಬೌಲರ್ಗಳ ಬೆಂಡೆತ್ತಿದ ಯುವ ದಾಂಡಿಗ 16 ಇನಿಂಗ್ಸ್ಗಳ ಮೂಲಕ ಕಲೆಹಾಕಿದ್ದು ಬರೋಬ್ಬರಿ 776 ರನ್ಗಳು. ಅದು ಕೂಡ 237.30ರ ಸ್ಟ್ರೈಕ್ ರೇಟ್ನಲ್ಲಿ. ಈ ಮೂಲಕ ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಟಾಟಾ ಸಿಯೆರಾ ವೈಭವ್ ಸೂರ್ಯವಂಶಿ ಪಾಲಾಗಿದೆ. ವಿಶೇಷ ಎಂದರೆ ಈಗಷ್ಟೇ ಕೆರಿಯರ್ ಆರಂಭಿಸಿರುವ ವೈಭವ್ ಬ್ಯಾಕ್ ಟು ಬ್ಯಾಕ್ ಸೂಪರ್ ಸ್ಟ್ರೈಕರ್ ಪ್ರಶಸ್ತಿ ತಮ್ಮದಾಗಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. (PC: IPL)
Published On - 7:31 am, Mon, 1 June 26




