- Kannada News Photo gallery Cricket photos Mohammed Shami Benched: Why BCCI Sidelined Star Bowler After England Tour Refusal
ವೃತ್ತಿಜೀವನಕ್ಕೆ ಕಂಟಕವಾಯ್ತಾ ಮೊಹಮ್ಮದ್ ಶಮಿಯ ಸ್ವಯಂಕೃತ ಅಪರಾಧ?
Mohammed Shami Benched: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ತಂಡದಿಂದ ಹೊರಗುಳಿದಿರುವುದಕ್ಕೆ ಹೊಸ ಕಾರಣ ಬಹಿರಂಗವಾಗಿದೆ. ಫಿಟ್‌ನೆಸ್ ಸಮಸ್ಯೆ ಬಿಸಿಸಿಐ ಹೇಳಿದ್ದರೆ, ಶಮಿ ಆಯ್ಕೆದಾರರನ್ನು ಗುರಿಯಾಗಿಸಿಕೊಂಡಿದ್ದರು. ಇತ್ತೀಚಿನ ವರದಿಯ ಪ್ರಕಾರ, ಶಮಿ ಇಂಗ್ಲೆಂಡ್‌ನಲ್ಲಿ ‘ಭಾರತ ಎ’ ಪಂದ್ಯ ಆಡಲು ನಿರಾಕರಿಸಿದ್ದೇ ತಂಡದಿಂದ ಹೊರಗುಳಿಯಲು ಪ್ರಮುಖ ಕಾರಣ. ಈ ನಡೆ ಬಿಸಿಸಿಐಗೆ ಅಸಮಾಧಾನ ತಂದಿದ್ದು, ಯುವ ಆಟಗಾರರಿಗೆ ಅವಕಾಶ ನೀಡಲು ಮುಂದಾಗಿದೆ.
Updated on: Nov 10, 2025 | 5:37 PM

ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಬಹಳ ಸಮಯದಿಂದ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. 2023 ರ ಏಕದಿನ ವಿಶ್ವಕಪ್ ನಂತರ ಶಮಿ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ಮೂಲಕ ಶಮಿ ಭಾರತ ತಂಡಕ್ಕೆ ಮರಳಿದ್ದರು. ಆದಾಗ್ಯೂ, ಆ ಬಳಿಕ ಶಮಿ ಅವರು ಮೂರು ಸ್ವರೂಪಗಳಲ್ಲಿ ತಂಡದಿಂದ ಹೊರಗುಳಿದಿದ್ದಾರೆ.

ಪ್ರಸ್ತುತ ಶಮಿ ದೇಶಿ ಟೂರ್ನಿ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆ ಮಾಡಲಾಗಿಲ್ಲ. ಇದಕ್ಕೆ ಕಾರಣ, ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಎಂದು ಬಿಸಿಸಿಐ ಹೇಳುತ್ತಿದ್ದರೆ, ಇತ್ತ ಶಮಿ ಯಾರ ಹೆಸರನ್ನು ತೆಗೆದುಕೊಳ್ಳದೆ ಆಯ್ಕೆದಾರರನ್ನು ಗುರಿಯಾಗಿಸಿಕೊಂಡು ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಒಂದರರ್ಥದಲ್ಲಿ ಮೊಹಮ್ಮದ್ ಶಮಿ, ಬಿಸಿಸಿಐ ವಿರುದ್ಧ ನೀಡುತ್ತಿರುವ ಬಹಿರಂಗ ಹೇಳಿಕೆಗಳು ಅವರ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೊಡಕಾಗಿವೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದ್ದು, ಶಮಿ ತಾವು ಮಾಡಿದ ಸ್ವಯಂಕೃತ ಅಪರಾಧದಿಂದಾಗಿ ತಂಡದಲ್ಲಿ ಸ್ಥಾನ ಪಡೆಯುತಿಲ್ಲ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ, ಶಮಿ ಸ್ವತಃ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಲು ನಿರಾಕರಿಸಿದ್ದರು. ಶಮಿಯ ಈ ನಡೆಯಿಂದ ಕೋಪಗೊಂಡಿರುವ ಬಿಸಿಸಿಐ, ಅವರನ್ನು ತಂಡದಿಂದ ಹೊರಗಿಟ್ಟಿದೆ ಎನ್ನಲಾಗುತ್ತಿದೆ.

ವರದಿಯ ಪ್ರಕಾರ, ಭಾರತದ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ, ಆಯ್ಕೆ ಸಮಿತಿಯ ಹಿರಿಯ ಸದಸ್ಯರೊಬ್ಬರು ಶಮಿ ಅವರಿಗೆ ಹಲವಾರು ಸಂದೇಶಗಳನ್ನು ಕಳುಹಿಸಿ ಅವರ ಫಿಟ್ನೆಸ್ ಬಗ್ಗೆ ವಿಚಾರಿಸಿ, ಕ್ಯಾಂಟರ್ಬರಿ ಅಥವಾ ನಾರ್ಥಾಂಪ್ಟನ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ಪರ ಕನಿಷ್ಠ ಒಂದು ಪಂದ್ಯವನ್ನಾದರೂ ಆಡುವಂತೆ ವಿನಂತಿಸಿದ್ದರು.

ಆದರೆ ಮೊಹಮದ್ ಶಮಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಆದರೆ ಶಮಿ ತಮ್ಮ ಕೆಲಸದ ಹೊರೆ ನಿರ್ವಹಣೆಯನ್ನು ಮುಂದಿಟ್ಟು ಇಂಗ್ಲೆಂಡ್ ವಿರುದ್ಧದ ಸರಣಿಗೆ ನನ್ನನ್ನು ಪರಿಗಣಿಸಬಾರದು ಎಂದು ಆಯ್ಕೆ ಸಮಿತಿಯ ಸದಸ್ಯರಿಗೆ ಹೇಳಿದ್ದರು ಎಂದು ತಿಳಿದುಬಂದಿದೆ.

ಮೊಹಮ್ಮದ್ ಶಮಿಯ ಈ ನಡೆಯಿಂದ ಅಸಮಾಧಾನಗೊಂಡಿದ್ದ ಬಿಸಿಸಿಐ ಇದೀಗ ಅವರನ್ನು ಮೂಲೆಗುಂಪು ಮಾಡಿ ಯುವ ಬೌಲರ್ಗಳಿಗೆ ಆಧ್ಯತೆ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಯುವ ವೇಗಿಗಳಾದ ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ಹಾಗೂ ಆಕಾಶ್ ದೀಪ್ಗೆ ಮೊಹಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ಜೊತೆ ಬೌಲಿಂಗ್ ವಿಭಾಗದ ಜವಾಬ್ದಾರಿ ನೀಡುತ್ತಿದೆ ಎಂದು ವರದಿಯಾಗಿದೆ.




