ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2023) ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯು ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ಖರೀದಿಸಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಬಿಡ್ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ಪೈಪೋಟಿ ಏರ್ಪಟ್ಟಿತ್ತು.
ಆದರೆ ಅಂತಿಮವಾಗಿ ಟೀಮ್ ಇಂಡಿಯಾ ಆಟಗಾರ್ತಿಯನ್ನು ಆರ್ಸಿಬಿ ಫ್ರಾಂಚೈಸಿ ಬರೋಬ್ಬರಿ 3.40 ಕೋಟಿಗೆ ತನ್ನದಾಗಿಸಿಕೊಂಡಿತು. ಇತ್ತ ಆರ್ಸಿಬಿ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸ್ಮೃತಿ ಮಂಧಾನ ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
RCB ಟ್ವಿಟರ್ನಲ್ಲಿ ಮಾಡಲಾದ ಪೋಸ್ಟ್ಗೆ ಸ್ಮೃತಿ ಮಂಧಾನ ನಮಸ್ಕಾರ ಬೆಂಗಳೂರು ಎಂದು ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಧ್ವಜದ ಸಂಕೇತವಾಗಿ ಹಳದಿ-ಕೆಂಪು ಹಾರ್ಟ್ ಎಮೋಜಿಗಳನ್ನು ನೀಡಿರುವುದು ವಿಶೇಷ. ಇದೀಗ ಸ್ಮೃತಿ ಮಂಧಾನ ಮಾಡಿರುವ ಟ್ವೀಟ್ ಭಾರೀ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರ್ತಿಯನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ.
26 ವರ್ಷದ ಸ್ಮೃತಿ ಮಂಧಾನ ಅವರು 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೆ 2018 ರಲ್ಲಿ ICC ಮಹಿಳಾ ಆಟಗಾರ್ತಿಯಾಗಿ ಹೊರಹೊಮ್ಮಿದ್ದರು. ಹಾಗೆಯೇ 2021 ಮತ್ತು 2022 ರಲ್ಲಿ ICC ವರ್ಷದ ಟಿ20 ಆಟಗಾರ್ತಿಯಾಗಿ ನಾಮನಿರ್ದೇಶನಗೊಂಡಿದ್ದರು.
ಪ್ರಸ್ತುತ ಟೀಮ್ ಇಂಡಿಯಾದ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಇದುವರೆಗೆ 112 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 20 ಶತಕಗಳನ್ನು ಒಳಗೊಂಡಂತೆ 2651 ರನ್ ಗಳಿಸಿದ್ದಾರೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿರುವ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ಒಲಿಯಲಿದೆಯಾ ಕಾದು ನೋಡಬೇಕಿದೆ.
Published On - 7:25 pm, Mon, 13 February 23