
ಗಾಯದಿಂದಾಗಿ ಇನ್ನು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ಹರ್ಷಿತ್ ರಾಣಾ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಹಾಗೂ ಅದಾದ ಬಳಿಕ ನಡೆಯಲಿರುವ ಏಷ್ಯನ್ ಕ್ರೀಡಾಕೂಟದಲ್ಲಿಯೂ ಆಡುವುದಿಲ್ಲ. ಹೀಗಾಗಿ ಅವರ ಬದಲಿಯಾಗಿ ಬಿಸಿಸಿಐ ಯಶ್ ಠಾಕೂರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ(PC-PTI).
ಹರ್ಷಿತ್ ರಾಣಾ ಅವರನ್ನು ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮತ್ತು 2026 ರ ಏಷ್ಯನ್ ಕ್ರೀಡಾಕೂಟಕ್ಕೆ ಟೀಂ ಇಂಡಿಯಾದಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ ಅವರು ತಂಡದಲ್ಲಿ ಆಡುವುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಿಸಿಸಿಐ ಅಂದೇ ತಿಳಿಸಿತ್ತು. ಆದರೀಗ ಅವರನ್ನು ತಂಡದಿಂದ ಹೊರಗಿಟ್ಟಿರುವುದಾಗಿ ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ(PC-PTI).
ಹರ್ಷಿತ್ ರಾಣಾ ಬದಲಿಗೆ ವಿದರ್ಭದ 27 ವರ್ಷದ ವೇಗದ ಬೌಲರ್ ಯಶ್ ಠಾಕೂರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷದ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಯಶ್ ಭಾರತ ಪರ ಪಾದಾರ್ಪಣೆ ಮಾಡಿದ್ದರು. ಅವರು ಇಲ್ಲಿಯವರೆಗೆ ಎರಡು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ, ಯಶ್ ಠಾಕೂರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 50 ಪಂದ್ಯಗಳನ್ನು ಆಡಿದ್ದು, 7.04 ರ ಎಕಾನಮಿ ದರದಲ್ಲಿ 81 ವಿಕೆಟ್‌ಗಳನ್ನು ಕಬಳಿಸಿದ್ದಾರೆ(PC-BCCI).
ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯಶ್ ಠಾಕೂರ್(PC-BCCI).
ಅಫ್ಘಾನಿಸ್ತಾನ ವಿರುದ್ಧ ಆಡಿದ ಅದೇ ಟಿ20 ತಂಡ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಏಷ್ಯನ್ ಕ್ರೀಡಾಕೂಟದಲ್ಲಿಯೂ ಆಡಲಿದೆ. ಶ್ರೇಯಸ್ ಅಯ್ಯರ್ ಎರಡೂ ಪಂದ್ಯಾವಳಿಗಳಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ತಿಲಕ್ ವರ್ಮಾ ಉಪನಾಯಕರಾಗಿರುತ್ತಾರೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 13 ರಂದು ಪ್ರಾರಂಭವಾಗುತ್ತದೆ(PC-BCCI).