- Kannada News Photo gallery Exposure to Indian Culture in shivamogga College Students wearing saree and panche got attention
ಶಿವಮೊಗ್ಗ: ಕಾಲೇಜಿನಲ್ಲಿ ಭಾರತೀಯ ಸಂಸ್ಕೃತಿ ಅನಾವರಣ; ಸೀರೆ, ಪಂಚೆ ತೊಟ್ಟು ಗಮನ ಸೆಳೆದ ವಿದ್ಯಾರ್ಥಿಗಳು, ಇಲ್ಲಿದೆ ಪೋಟೋಸ್
ಕಾಲೇಜು ವಿದ್ಯಾರ್ಥಿಗಳಿಗೆ ಸಾಂಪ್ರದಾಯಕ ಉಡುಗೆ ತೊಡುಗೆ ಅಂದ್ರೆ, ಒಂದು ರೀತಿಯಲ್ಲಿ ಹಬ್ಬ ಇದ್ದಂತೆ. ಈ ಸಾಂಪ್ರದಾಯಿಕ ಬಟ್ಟೆಗಳನ್ನು ತೊಡುವುದೆ ಅಪರೂಪ. ಏನಿದ್ದರೂ ಕಾಲೇಜು ಸಮವಸ್ತ್ರ ಬಿಟ್ಟರೆ, ಜೀನ್ಸ್ ಮತ್ತು ಟೀ ಶರ್ಟ್ ಗೆ ಯುವ ಸಮೂಹ ಮಾರು ಹೋಗಿದೆ. ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚಾರಣೆಯಲ್ಲಿ ಯುವಕ ಮತ್ತು ಯುವತಿಯರು ದೇಶಿಯ ಉಡುಗೆ ತೊಡುಗೆ ತೊಟ್ಟು ಎಲ್ಲರ ಗಮನ ಸೆಳೆದರು.
Updated on: Sep 03, 2023 | 6:57 PM

ಕಾಲೇಜ್ ಕ್ಯಾಂಪಸ್ನಲ್ಲಿ ಕಾಲಿಟ್ಟರೆ ಸಾಕು, ಕಾಲೇಜಿನ ಎದುರು ಚಪ್ಪರ ಹಾಕಿ ಅದನ್ನು ವಿವಿಧ ಹೂವು ಹಾಗೂ ತಳಿರು ತೋರಣಗಳಿಂದ ಸಿಂಗರಗೊಂಡಿತ್ತು. ಅಲ್ಲಿ ಕಾಲೇಜ್ ಸಮವಸ್ತ್ರ ಮಾಯವಾಗಿತ್ತು. ಎಲ್ಲ ವಿದ್ಯಾರ್ಥಿಗಳು ಪಂಚೆ ಶಲ್ಯ ಧರಿಸಿದ್ದರೆ, ಇತ್ತ ವಿದ್ಯಾರ್ಥಿನಿಯರು ಸೀರೆ ತೊಟ್ಟಿದ್ದರು. ಈ ದೃಶ್ಯ ಕಂಡು ಬಂದಿದ್ದು, ಶಿವಮೊಗ್ಗದ ತುಳಿಸಿ ಆಚಾರ್ಯ ವಾಣಿಜ್ಯ (ಎಟಿಎನ್‌ಸಿಸಿ) ಕಾಲೇಜಿನಲ್ಲಿ.

ಹೌದು, ಕಾಲೇಜಿನಲ್ಲಿ ‘ಸಾಂಪ್ರದಾಯಿಕ ದಿನ’ ಆಚರಿಸಲಾಯಿತು. ವಿದ್ಯಾರ್ಥಿನಿಯರು ಸೀರೆ, ವಿದ್ಯಾರ್ಥಿಗಳು ಪಂಚೆ ಹಾಗೂ ಶಲ್ಯ ಧರಿಸಿ ಎಲ್ಲರ ಗಮನ ಸೆಳೆದರು. ಬಿಕಾಂ ಹಾಗೂ ಬಿಬಿಎಂ ವಿಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ವೈಯಕ್ತಿಕ ಹಾಗೂ ಗುಂಪು ವಿಭಾಗದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಇನ್ನು ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಅನಾವರಣಗೊಳಿಸಿದರು. ಗುಂಪು ವಿಭಾಗದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಡಿಜೆ ಹಾಡುಗಳಿಗೆ ಕಾಲೇಜಿನ ಆವರಣದಲ್ಲಿ ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ವಿವಿಧ ಬಗೆಯ ಉಡುಗೆಗಳನ್ನು ಧರಿಸಿ RAMP ಮೇಲೆ ಹೆಜ್ಜೆ ಹಾಕಿದರು.

ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಾಪಕರೂ ಸಾಥ್ ನೀಡಿದರು. ಕೊಡಗಿನ ಸಾಂಪ್ರದಾಯಿಕ ಸೀರೆ, ಓಣಂ ಹಬ್ಬದ ವೇಳೆ ಧರಿಸುವ ಸೀರೆ ಹಾಗೂ ಇಳಕಲ್ ಸೀರೆ ಉಟ್ಟು, ಹಣೆಮೇಲೆ ಬೊಟ್ಟು ಇಟ್ಟುಕೊಂಡಿದ್ದ ವಿದ್ಯಾರ್ಥಿನಿಯರು, ಮೈಸೂರು ಮಲ್ಲಿಗೆ ಮುಡಿದು ಕಂಗೊಳಿಸಿದರು. ಯುವಕರು ಅರಬ್ಬರ ಶೈಲಿಯ ಸೇರಿದಂತೆ ಕುರ್ತಾ, ವೇಷಭೂಷಣ ಲುಂಗಿ ಧರಿಸಿ ಭಾಗವಹಿಸಿದ್ದರು.

ಹೀಗೆ ಬೆಳಗ್ಗೆಯಿಂದ ಸಂಜೆಯ ವರೆಗೆ ಕಾಲೇಜ್ ವಿದ್ಯಾರ್ಥಿಗಳು ಸಖತ್ ಆಗಿ ಎಂಜಾಯ್ ಮಾಡಿದರು. ಕಾಲೇಜು ವಿದ್ಯಾಭ್ಯಾಸದ ಒತ್ತಡ. ಇತರೆ ಎಲ್ಲ ಕೆಲಸಗಳನ್ನು ಮರೆತ ವಿದ್ಯಾರ್ಥಿಗಳು ಟ್ರೇಡಿಶನ್ ಡೇ ದಲ್ಲಿ ಮುಳುಗಿ ಹೋಗಿದ್ದರು.

ಎಲ್ಲ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಾಲೇಜ್ನಲ್ಲಿ ಈ ದಿನ ಉತ್ತಮ ಉಡುಗೆ ಸ್ಪರ್ಧೆ ಹಾಗೂ RAMP ವಾಕ್ ಸ್ಪರ್ಧೆಯಲ್ಲಿ ಅಂತಿಮ ವರ್ಷದ ಬಿಕಾಂ ಹಾಗೂ ಬಿಬಿಎಂ ವಿಭಾಗದ ವಿದ್ಯಾರ್ಥಿಗಳಾದ ಫೈಜಲ್ ಖಾನ್, ಶಮದ್, ಸ್ವಾತಿ, ಅದೀಬಾ ನೂರೈನ್, ಅಭಿಷೇಕ್, ಸಮರ್ಥ್, ಐಶ್ವರ್ಯಾ, ಶಿಜನ್ ನಜೀ೯ ಗೆ ಪ್ರಥಮ ಬಹುಮಾನ ಲಭಿಸಿತು.

ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬಹಳ ಸಂಭ್ರಮದಿಂದ ಭಾಗವಹಿಸಿದ್ದರು. ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಪ್ರತಿ ವರ್ಷವೂ ಯುವಜನರಲ್ಲಿ ಭಾರತೀಯ ಸಂಸ್ಕೃತಿಯ ವೈವಿಧ್ಯತೆ, ಸಾಂಸ್ಕೃತಿಕ ಪ್ರಜ್ಞೆ ಮೂಡಿಸಲು ಈ ಸಾಂಪ್ರದಾಯಿಕ ದಿನಾಚರಣೆ ಆಚರಿಸುತ್ತಾ ಬಂದಿದೆ.

ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಸುಂದರವಾಗಿ ಕಾಣುತ್ತಿದ್ದು, ಸೇಲ್ಫಿ, ಕ್ಯಾಮರಾದಲ್ಲಿ ಫೋಟೋ ಶೂಟ್ ಮೂಲಕ ಅಪರೂಪದ ಈ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದರು. ಯುವಕ ಮತ್ತು ಯುವತಿಯರು ವಿವಿಧ ಹಾಡುಗಳಿಗೆ ಯಾವುದೇ ನಾಚಿಕೆ ಸಂಕೋಚವಿಲ್ಲದೇ ಹೆಜ್ಜೆ ಹಾಕಿದರು. ಈ ದಿನ ನಮ್ಮದೇ ಎಂದು ಸಾಂಪ್ರದಾಯಿಕ ದಿನಾಚಾರಣೆಯನ್ನು ಆಚರಿಸಿದರು.

ಕಾಲೇಜು ವಿದ್ಯಾರ್ಥಿಗಳಿಗೂ ಈ ಕಲ್ಚರಲ್ ಡೇ ಮೂಲಕ ನಮ್ಮ ದೇಶದ ಸಾಂಸ್ಕೃತಿಯು ಇಷ್ಟೊಂದು ಶ್ರೀಮಂತವಾಗಿದೆ ಎನ್ನುವುದು ಮನವರಿಕೆಯಾಗಿತ್ತು. ವಿದೇಶಿ ಉಡುಗೆ ತೊಡುಗೆ ಹಿಂದೆ ಬಿದ್ದಿರುವ ಯುವ ಸಮೂಹಕ್ಕೆ ಸಾಂಪ್ರದಾಯಿಕ ದಿನಾಚಾರಣೆಯು ದೇಶಿಯ ಬದುಕಿನ ಶೈಲಿಯ ಕುರಿತು ಪಾಠ ಮಾಡಿದ್ದು ವಿಶೇಷವಾಗಿತ್ತು.

Exposure to Indian Culture in shivamogga College Students wearing saree and panche got attention



