ಶಿವನಿಗೆ ಗಾರಿಗೆ ನೈವಿದ್ಯ ಮಾಡಿ ರಥ ಎಳೆದ ನಾರಿಯರು: ಮಹಿಳೆಯರು ತೇರು ಎಳೆಯುವ ಫೋಟೋಗಳು ನೋಡಿ
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಲ್ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ವಿಶೇಷ ಗಾರಿಗೆ ರಥೋತ್ಸವ ನಡೆಯುತ್ತದೆ. ವಿಶೇಷವೆಂದರೆ, ಈ ರಥೋತ್ಸವವನ್ನು ಸಂಪೂರ್ಣವಾಗಿ ಮಹಿಳೆಯರು ನಡೆಸುತ್ತಾರೆ. ಅವರು ಸ್ವತಃ ತಯಾರಿಸಿದ ಗಾರಿಗೆ ಸಿಹಿ ತಿನಿಸನ್ನು ಶಿವನಿಗೆ ನೈವೇದ್ಯ ಅರ್ಪಿಸಿ, ರಥವನ್ನು ಎಳೆಯುತ್ತಾರೆ. ಈ ಅನನ್ಯ ಪದ್ಧತಿಯು ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.
Updated on: Feb 28, 2025 | 10:41 PM

ದೇವಾಲಯ, ಮಠಮಾನ್ಯಗಳಲ್ಲಿ ಗಂಡು ಮಕ್ಕಳದ್ದೇ ಓಡಾಟ ಇರುವುದು ಹೆಚ್ಚು. ಆದರೆ ಈ ಮಠದಲ್ಲಿ ಏನಿದ್ದರೂ ಹೆಣ್ಮಕ್ಕಳದ್ದೇ ಹವಾ. ಅಲ್ಲಿ ಪ್ರತಿ ಶಿವರಾತ್ರಿಯಂದು ಶಿವನಿಗೆ ಇಷ್ಟವಾದ ಗಾರಿಗೆ ಸಿಹಿ ತಿನಿಸನ್ನು ನೈವಿದ್ಯಕ್ಕೆ ಕೊಡ್ತಾರೆ. ಜೊತೆಗೆ ರಥ ಎಳೆದು ಹೆಣ್ಮಕ್ಳೆ ಸ್ಟ್ರಾಂಗು ಗುರು ಅಂತ ತೋರಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರೊ ಕಲ್ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಶಿವನ ಆರಾಧನೆ, ಶಿವನ ಜಪ, ಶಿವನ ಜಾಗರಣೆ ಸೇರಿ ಶಿವನಿಗೆ ಎಲ್ಲಾ ಮಾದರಿಯ ಆರಾಧನೆ ಇಲ್ಲಿ ನಡೆಯತ್ತೆ. ಶಿವರಾತ್ರಿಯಂದು ನಡೆಯುವ ಈ ರಥೋತ್ಸವಕ್ಕೆ ಗಾರಿಗೆ ಉತ್ಸವ ಅಂತಲೇ ಕರೆಯಲಾಗತ್ತೆ.

ಗಾರಿಗೆ ಅಂದ್ರೆ ಈ ಭಾಗದಲ್ಲಿ ಹೆಚ್ಚಾಗಿ ತಯಾರಿಸುವ ಸಿಹಿ ತಿನಿಸು. ಗಾರಿಗೆ ಅಂದರೆ ಕಜ್ಜಾಯ ಅಂತಲೂ ಕರೆಯುತ್ತಾರೆ. ಇದೇ ತಿನಿಸು ಶಿವನಿಗೆ ಅಚ್ಚು ಮೆಚ್ಚು. ಹೀಗಾಗಿ ಗಾರಿಗೆಯನ್ನೇ ಹೆಣ್ಮಕ್ಕಳು ತಯಾರಿಸಿಕೊಂಡು ಬಂದು ಶಿವನಿಗೆ ನೈವಿದ್ಯ ಇಡ್ತಾರೆ. ಹೀಗಾಗಿ ಗಾರಿಗೆಯೇ ಇಲ್ಲಿ ಹಾಟ್ ಫೇವರಿಟ್ ಖಾದ್ಯ. ಇವುಗಳನ್ನ ಹೆಣ್ಮಕ್ಕಳು ಹೊತ್ತು ತರುವುದು ನೋಡುವುದು ಕಣ್ಣಿಗೆ ಹಬ್ಬ.

ಶಿವನ ಸನ್ನಿಧಿಯಲ್ಲಿ ಗಾರಿಗೆ ರಾಶಿಯೇ ತುಂಬಿರತ್ತೆ. ಇದರ ಜೊತೆ ಭಕ್ತರು ಶಿವಲಿಂಗದ ದರ್ಶನ ಮಾಡಿಕೊಂಡು ವಿವಿಧ ಹಣ್ಣುಗಳು, ಕರ್ಜುರ, ವಗ್ಗರಣೆ, ಗಾರಿಗೆ, ಅಲಸಂದಿ ವಡೆಯನ್ನು ಶಿವನಿಗೆ ನೈವಿದ್ಯವಾಗಿ ಅರ್ಪಿಸುತ್ತಾರೆ. ಬಳಿಕ ದೇವಸ್ಥಾನದಲ್ಲಿ ನೀಡುವ ಗಾರಿಗೆ ಪ್ರಸಾದವನ್ನು ಸ್ವೀಕರಿಸಿ ತಮ್ಮ ಉಪವಾಸ ವೃತ್ತವನ್ನು ಸಂಪನ್ನಗೊಳ್ಳಿಸ್ತಾರೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಪುರುಷ ಭಕ್ತರೇ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ತೇರು ಎಳೆಯೋದನ್ನ ಮಾಡಿದ್ರೆ, ಹೆಣ್ಮಕ್ಕಳು ಅದನ್ನ ನಿಂತು ಕೊಂಡು ನೋಡ್ತಾರೆ. ಆದರೆ ಇಲ್ಲಿನ ಪದ್ದತಿಯೇ ಬೇರೆ, ಇಲ್ಲಿ ಕಲ್ಮಠದ ರಥೋತ್ಸವನ್ನ ಹೆಣ್ಮಕ್ಕಳೇ ಎಳೆದು ಧಾರ್ಮಿಕ ಪರಂಪರೆಯನ್ನ ಮುಂದುವರೆಸ್ತಾರೆ. ಈ ಕಲ್ಮಠದಲ್ಲಿನ ಗಾರಿಗೆ ಉತ್ಸವಕ್ಕೆ ಸಹಸ್ರಾರು ಭಕ್ತರ ದಂಡೇ ಹರಿದು ಬಂದಿದೆ. ಗಾರಿಗೆ ಪ್ರಸಾದವನ್ನ ಸವೆದು ಭಕ್ತರು ಶಿವನ ಕೃಪೆಗೆ ಪಾತ್ರರಾಗಿದ್ದಂತು ಸುಳ್ಳಳ್ಳ.



















