ಭರ್ಜರಿಯಾಗಿ ಕುಸಿಯುತ್ತಿರುವ ಷೇರುಪೇಟೆ; ಬಜೆಟ್ ಪರಿಣಾಮವಲ್ಲ… ಮತ್ತೇನು ಕಾರಣ? ಇಲ್ಲಿದೆ ಡೀಟೇಲ್ಸ್
ನವದೆಹಲಿ, ಫೆಬ್ರುವರಿ 3: ಬಜೆಟ್ ಮಂಡನೆ ದಿನ ಮಿಶ್ರ ಫಲ ಕಂಡಿದ್ದ ಷೇರುಮಾರುಕಟ್ಟೆ, ಇವತ್ತು ಸೋಮವಾರ ಬೆಳಗ್ಗೆ ಭರ್ಜರಿಯಾಗಿ ಕುಸಿದಿದೆ. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಬಹುತೇಕ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿವೆ. ಈ ಕುಸಿತಕ್ಕೆ ಏನೇನು ಕಾರಣ ಇರಬಹುದು, ಈ ವಿವರ ಇಲ್ಲಿದೆ:
Updated on: Feb 03, 2025 | 11:04 AM

ಭಾರತದ ಷೇರು ಮಾರುಕಟ್ಟೆ ಇವತ್ತು (ಫೆ. 3) ಸಾಕಷ್ಟು ಕುಸಿತ ಕಾಣುತ್ತಿದೆ. ಸೆನ್ಸೆಕ್ಸ್ ಬೆಳಗಿನ ವಹಿವಾಟಿನಲ್ಲಿ 700 ಅಂಕಗಳನ್ನು ಕಳೆದುಕೊಂಡಿತು. ಬಳಿಕ ಒಂದಷ್ಟು ನಷ್ಟದ ಚೇತರಿಕೆ ಆಯಿತು. ನಿಫ್ಟಿ ಕೂಡ 200ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡಿದೆ. ಎಫ್ಎಂಸಿಜಿ ವಲಯ ಹೊರತುಪಡಿಸಿದ ಹೆಚ್ಚಿನ ಸೂಚ್ಯಂಕಗಳು ನಷ್ಟ ಕಂಡಿವೆ. ಈ ಕುಸಿತಕ್ಕೆ ಕಾರಣಗಳನ್ನು ಮುಂದೆ ಕಾಣಬಹುದು.

ಟ್ರಂಪ್ ಎಫೆಕ್ಟ್.... ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ, ಕೆನಡಾ ಮತ್ತು ಮೆಕ್ಸಿಕೋ ಮೇಲೆ ತೆರಿಗೆ ಹಾಕಿದ್ದಾರೆ. ಆ ದೇಶಗಳೂ ಕೂಡ ಪ್ರತಿಕ್ರಮ ತೆಗೆದುಕೊಳ್ಳಬಹುದಾಗಿದ್ದು, ಈ ಸುಂಕ ಯುದ್ಧದಿಂದ ಜಾಗತಿಕ ಆರ್ಥಿಕತೆ ಅಲುಗಾಡಬಹುದು. ಈ ಭಯ ಹೂಡಿಕೆದಾರರನ್ನು ಕಾಡುತ್ತಿರಬಹುದು.

ಜಾಗತಿಕ ಮಾರುಕಟ್ಟೆಗಳ ಪರಿಣಾಮ... ಇದೇ ಟ್ರಂಪ್ ವಿಚಾರವಾಗಿ ಜಾಗತಿಕವಾಗಿ ಹಲವು ಮಾರುಕಟ್ಟೆಗಳು ಕುಸಿತ ಕಂಡಿವೆ. ಜಪಾನ್ನ ನಿಕ್ಕೀ, ಕೊರಿಯಾದ ಕೋಸ್ಪಿ ಇಂಡೆಕ್ಸ್ಗಳು ನಷ್ಟ ಕಂಡಿವೆ. ಇದರ ಪರಿಣಾಮವು ಭಾರತೀಯ ಮಾರುಕಟ್ಟೆ ಮೇಲಾಗಿರಬಹುದು.

ರುಪಾಯಿ ಮೌಲ್ಯ ಕುಸಿತ... ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ಇದೇ ಮೊದಲ ಬಾರಿಗೆ 87 ಗಡಿ ದಾಟಿದೆ. ಟ್ರಂಪ್ ಅವರ ಟ್ಯಾರಿಫ್ ಕ್ರಮಗಳು ಡಾಲರ್ಗೆ ಬಲ ನೀಡಿವೆ. ಮೊದಲೇ ಹಿನ್ನಡೆಯಲ್ಲಿದ್ದ ರುಪಾಯಿ ಈಗ ಮತ್ತಷ್ಟು ಮೌಲ್ಯ ಕಳೆದುಕೊಂಡಿದೆ.

ಆರ್ಬಿಐ ಎಂಪಿಸಿ ಸಭೆ.... ಭಾರತೀಯ ರಿಸರ್ವ್ ಬ್ಯಾಂಕ್ ನಾಳೆ (ಫೆ. 4) ಎಂಪಿಸಿ ಸಭೆ ಆರಂಭಿಸುತ್ತಿದೆ. ರಿಪೋ ದರ ಇಳಿಸುವ ಸಾಧ್ಯತೆ ಇದೆ. ರಿಸರ್ವ್ ಬ್ಯಾಂಕ್ ಎಂಪಿಸಿ ಸಭೆಯ ನಿರ್ಧಾರ ಹೊರಬರುವ ಮುನ್ನ ಹೂಡಿಕೆದಾರರು ಮುನ್ನೆಚ್ಚರಿಕೆಯಾಗಿ ಷೇರುಗಳನ್ನು ಮಾರುತ್ತಿರಬಹುದು.

ವಿದೇಶೀ ಹೂಡಿಕೆಗಳ ಹೊರಹರಿವು... ಭಾರತದ ಷೇರು ಮಾರುಕಟ್ಟೆಯಿಂದ ಇತ್ತೀಚಿನ ದಿನಗಳಲ್ಲಿ ವಿದೇಶೀ ಸಾಂಸ್ಥಿಕ ಹೂಡಿಕೆಗಳು ಸತತವಾಗಿ ನಿರ್ಗಮಿಸುತ್ತಿವೆ. ಇದೇ ಟ್ರೆಂಡ್ ಇವತ್ತೂ ಮುಂದುವರಿದಿರಬಹುದು. ಕಳೆದ ನಾಲ್ಕು ತಿಂಗಳಲ್ಲಿ ಎಫ್ಐಐಗಳು 2.7 ಲಕ್ಷ ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿವೆ. ಇದು ಮಾರುಕಟ್ಟೆಯ ಹಿನ್ನಡೆಗೆ ಪ್ರಮುಖ ಕಾರಣಗಳಲ್ಲಿ ಒಂದು.



















