- Kannada News Photo gallery Kotilingeshwara Kodi Festival: Do You Know What Special About the 7 Day Fair
ಮೊದಲ ದಿನ ನವದಂಪತಿ ಜಾತ್ರೆ: 7 ದಿನ ನಡೆಯುವ ಕೊಡಿ ಹಬ್ಬ ಜಾತ್ರೆಯ ವಿಶೇಷತೆ ಏನು?
ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ಅನಾದಿಕಾಲದಿಂದಲೂ ಕೊಡಿ ಹಬ್ಬವೆಂದೇ ಪ್ರಸಿದ್ಧಿ. ಇದೀಗ ಈ ಕೊಡಿ ಹಬ್ಬ ಆರಂಭವಾಗಿದ್ದು, 7 ದಿನಗಳ ಕಾಲ ಬಹಳ ಅದ್ಧೂರಿಯಿಂದ ನಡೆಯುತ್ತದೆ. ಈ ಹಬ್ಬಕ್ಕೆ ಹೆಚ್ಚಾಗಿ ನವದಂಪತಿ ಆಗಮಿಸಿ ಕೋಟಿಲಿಂಗೇಶ್ವರನ ದರ್ಶನ ಪಡೆದುಕೊಳ್ಳುತ್ತಾರೆ.
Updated on: Dec 04, 2025 | 8:44 PM

ಕರಾವಳಿಯ ಅತಿದೊಡ್ಡ ಜಾತ್ರೆ ಆರಂಭವಾಗಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಕೊಡಿ ಹಬ್ಬವೆಂದರೆ ಹಲವು ನಂಬಿಕೆಗಳ ಪ್ರತೀಕ. ಮದುವೆ ಆಗದವರಿಗೆ ಕೋಟಿಲಿಂಗೇಶ್ವರ ಅಭಯ ನೀಡುವ ದೇವರು. ನವದಂಪತಿಗಳಿಗೆ ಸುಖ ದಾಂಪತ್ಯದ ಕನಸು ಕಟ್ಟಿಕೊಡುವ ಕೇಂದ್ರ. ಇಲ್ಲಿನ ರಥೋತ್ಸವ ಅಂದರೆ ಅದ್ದೂರಿತನಕ್ಕೆ ಇನ್ನೊಂದು ಹೆಸರು.

ಹೊಸದಾಗಿ ಮದುವೆಯಾದವರಿಗೆ ತಮ್ಮ ಸುಖ ದಾಂಪತ್ಯದ ಬಗ್ಗೆ ಸಾವಿರ ಕನಸುಗಳಿರುತ್ತವೆ. ಈ ಸನ್ನಿಧಿಯಲ್ಲಿ ದಾಂಪತ್ಯಗೀತೆ ಆರಂಭವಾದರೆ ಜೀವನ ಪೂರ್ಣ ಸುಖವಾಗಿರುತ್ತೆ ಅನ್ನೋದು ಜನರ ವಿಶ್ವಾಸ. ಹಾಗಂತಲೇ ನವ ದಂಪತಿ ಕುಂದಾಪುರದ ಕೋಟಿಲಿಂಗೇಶ್ವರ ದರ್ಶನಕ್ಕೆ ಬರುತ್ತಾರೆ.

ಕೊಡಿ ಹಬ್ಬ ಕರಾವಳಿ-ಮಲೆನಾಡು ಭಾಗದ ಅತಿದೊಡ್ಡ ಹಬ್ಬ. 7 ದಿನಗಳ ಕಾಲ ನಡೆಯುವ ಈ ರಥೋತ್ಸವದಲ್ಲಿ ಮೊದಲ ದಿನ ನವದಂಪತಿಗಳ ಜಾತ್ರೆ ನಡೆಯುತ್ತೆ. ಹೊಸದಾಗಿ ಮದುವೆಯಾದ ದಂಪತಿ ಕೈಕೈಹಿಡಿದು ಬಂದು, ನೂರಾರು ಹರಕೆ ಹೊತ್ತು ದೇವರಿಗೆ ಕೈ ಮುಗಿಯುತ್ತಾರೆ. ಪುಷ್ಕರಣಿಗೆ ಪ್ರದಕ್ಷಿಣೆ ಹಾಕಿ ಸುತ್ತಲೂ ಅಕ್ಕಿ ಚೆಲ್ಲಿ ಹರಕೆ ತೀರಿಸುತ್ತಾರೆ. ಆ ಮೂಲಕ ಹೊಸ ಜೀವನ ಆರಂಭಿಸುತ್ತಾರೆ.

ಸಂತಾನದ ಆಸೆ ಹೊತ್ತವರೇ ಹೆಚ್ಚು ಸಂಖ್ಯೆಯಲ್ಲಿ ಬರೋದ್ರಿಂದ ಇದನ್ನು ಕೊಡಿ ಹಬ್ಬ ಎಂದಲೂ ಕರೆಯಲಾಗುತ್ತದೆ. ಜಾತ್ರೆಗೆ ಬಂದವರೆಲ್ಲಾ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗುವುದು ಇಲ್ಲಿನ ಪದ್ಧತಿ. ಕಬ್ಬಿನ ಜಲ್ಲೆಯ ಕೊಡಿ ತೆಗೆದುಕೊಂಡು ಹೋಗುವುದರಿಂದ ಇದನ್ನು ಕೊಡಿ ಹಬ್ಬವೆಂದು ಕರೆಯಲಾಗುತ್ತೆ.

ಗಾತ್ರದಲ್ಲಿ ಅತಿದೊಡ್ಡದೆನಿಸಿದ ಬ್ರಹ್ಮರಥವನ್ನು ಭಕ್ತರೆಲ್ಲಾ ಸೇರಿ ಎಳೆಯುತ್ತಾರೆ. ಇಲ್ಲಿ ಶಿವ ಕೋಟಿ ಲಿಂಗ ಸ್ವರೂಪದಲ್ಲಿ ನೆಲೆ ನಿಂತಿದ್ದಾನೆ ಎನ್ನುವುದು ಜನರ ನಂಬಿಕೆ. ಗ್ರಾಮೀಣ ಜನರು ಕೊಡಿ ಹಬ್ಬಕ್ಕಾಗಿ ವರ್ಷವೆಲ್ಲಾ ಕಾಯ್ತಾರೆ. 7 ದಿನದ ಜಾತ್ರೆಯಲ್ಲಿ ನಿತ್ಯ ಪಾಲ್ಗೊಂಡು ಸಂಭ್ರಮಿಸುತ್ತಾರೆ.

ಗ್ರಾಮೀಣ ಜನರ ಬದುಕಿನಲ್ಲಿ ಕೊಡಿ ಹಬ್ಬ ಅವಿನಾಭಾವ ಸ್ಥಾನ ಪಡೆದಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಹಬ್ಬದ ವೈಭವ ಹೆಚ್ಚುತ್ತಿದೆ.



