- Kannada News Photo gallery Madhu Bangarappa Fulfills Father's Friends' Dream: 38 Fly Shivamogga to Bengaluru, taja suddi
ತಂದೆ ಬಂಗಾರಪ್ಪ ಒಡನಾಡಿಗಳ ಕನಸು ನನಸು ಮಾಡಿದ ಪುತ್ರ ಮಧು ಬಂಗಾರಪ್ಪ
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 38 ಒಡನಾಡಿಗಳು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು. ಆ ಮೂಲಕ ಅವರ ದೀರ್ಘಕಾಲದ ಕನಸು ನನಸಾಗಿದೆ. ಮಧು ಬಂಗಾರಪ್ಪ ಅವರು ತಮ್ಮ ತಂದೆಯ ಒಡನಾಡಿಗಳಿಗೆ ಈ ಅವಕಾಶ ಕಲ್ಪಿಸಿದ್ದಾರೆ. ಈ ವಿಮಾನಯಾನ ಅವರ ನೆನಪಿನಲ್ಲಿ ಉಳಿಯುವ ಒಂದು ಅನುಭವವಾಗಿದೆ.
Updated on: Mar 02, 2025 | 6:13 PM

ಮಾಜಿ ಸಿಎಂ ಎಸ್ ಬಂಗಾರಪ್ಪ ಅವರೊಂದಿಗೆ ವಿಮಾನಯಾನ ಮಾಡಬೇಕು ಎಂಬುವುದು ಅವರ ಒಡನಾಡಿಗಳ ಕನಸಾಗಿತ್ತು. ಆದರೆ ಅದು ಈಡೇರಲೇ ಇಲ್ಲ. ಆದರೆ ಇದೀಗ ಬಂಗಾರಪ್ಪ ಪುತ್ರ, ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡುವು ಮೂಲಕ ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ರಾಜ್ಯ ಕಂಡ ಅಪರೂಪದ ರಾಜಕಾರಣಿ, ಕಲರ್ ಫುಲ್ ಮ್ಯಾನ್ ಅಂದ್ರೆ ಅದು ಎಸ್ ಬಂಗಾರಪ್ಪ. ಸದಾ ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡು ರಾಜಕಾರಣ ಮಾಡಿದ ವ್ಯಕ್ತಿ ಎನ್ನುವ ಹೆಗ್ಗಳಿಕೆ ಮಾಜಿ ಸಿಎಂ ಬಂಗಾರಪ್ಪ ಅವರಿಗೆ ಇದೆ. ಬಂಗಾರಪ್ಪ ಅವರ ರಾಜಕೀಯ ಜೀವನದಲ್ಲಿ ಸೊರಬ ತಾಲೂಕಿನ ಅನೇಕರು ಅವರ ಜೊತೆ ಗಟ್ಟಿಯಾಗಿ ನಿಂತುಕೊಂಡು ಬೆಂಬಲಿಸಿದ್ದರು. ಬಂಗಾರಪ್ಪ ಅವರ ಒಡಾನಾಡಿ ಮತ್ತು ಅವರ ಕಟ್ಟಾ ಅಭಿಮಾನಗಳಿಗೆ ಒಂದು ಆಸೆಯಿತ್ತು. ಮಾಜಿ ಸಿಎಂ ಜೊತೆ ವಿಮಾನದಲ್ಲಿ ಪಯಣ ಮಾಡಬೇಕೆಂದು. ಆದರೆ ಕನಸು ನನಸು ಆಗುವ ಮೊದಲೇ ಮಾಜಿ ಸಿಎಂ ಎಲ್ಲರನ್ನೂ ಬಿಟ್ಟು ಅಗಲಿದರು.

ಇಂದು ಮಧು ಬಂಗಾರಪ್ಪ ಅವರ ಹುಟ್ಟುಹಬ್ಬ. ಅಭಿಮಾನಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ನಡುವೆ ಮಧು ಬಂಗಾರಪ್ಪ ಅವರು ತಮ್ಮ ಹುಟ್ಟುಹುಬ್ಬದ ಹಿನ್ನಲೆಯಲ್ಲಿ ತಂದೆಯ ಒಡನಾಡಿಗಳಿಗೆ ವಿಮಾನದಲ್ಲಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.

ಸೊರಬ ಕ್ಷೇತ್ರದಿಂದ 38 ಬಂಗಾರಪ್ಪ ಅಭಿಮಾನಿಗಳು ಬೆಂಗಳೂರಿನತ್ತ ವಿಮಾನದಲ್ಲಿ ಪಯಣ ಬೆಳೆಸಿದರು. ಬೆಳಗ್ಗೆಯೇ ಎಲ್ಲ ಅಭಿಮಾನಿಗಳು ಸೊರಬದಿಂದ ಶಿವಮೊಗ್ಗ ನಗರಕ್ಕೆ ಎಂಟ್ರಿ ಕೊಟ್ಟಿದ್ದರು. ಮಧ್ಯಾಹ್ನ ಶಿವಮೊಗ್ಗದಲ್ಲಿ ಊಟ ಮಾಡಿಕೊಂಡು ಇವರೆಲ್ಲರೂ ಶಿವಮೊಗ್ಗ ಏರ್ಪೋರ್ಟ್ ನತ್ತ ಪಯಣ ಬೆಳೆಸಿದ್ದರು. ಏರ್ಪೋರ್ಟ್ಗೆ ಹೋಗಿ ಅಲ್ಲಿಯ ಪರಿಸರ ನೋಡಿ ಬಂಗಾರಪ್ಪ ಅವರ ಒಡನಾಡಿಗಳು ಫುಲ್ ಖುಷ್ ಆಗಿದ್ದರು.

ಎಲ್ಲರೂ ರೈಲು ಮತ್ತು ಬಸ್ಗಳಲ್ಲಿ ಮಾತ್ರ ಪ್ರಯಾಣ ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಎಲ್ಲರೂ ಒಟ್ಟಾಗಿ ಶಿವಮೊಗ್ಗ ಏರ್ ಪೋರ್ಟ್ ಮೂಲಕ ಇಂಡಿಗೋ ವಿಮಾನದಲ್ಲಿ ಪಯಣ ಬೆಳೆಸಿದ್ದಾರೆ. ಎಸ್ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಈ ಎಲ್ಲ ಹಿರಿಯರನ್ನು ಪ್ರೀತಿ ವಿಶ್ವಾಸದಿಂದ ತಮ್ಮ ಜೊತೆ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ರಾತ್ರಿ ಹೊಟೇಲ್ ನಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅದಕ್ಕೂ ಮೊದಲು ಎಸ್ ಬಂಗಾರಪ್ಪ ಚಿಂತನೆಗಳ ಕುರಿತು ಒಂದು ಚರ್ಚೆಯ ಕಾರ್ಯಕ್ರಮವನ್ನು ಪುತ್ರ ಮಧು ಬಂಗಾರಪ್ಪ ಅವರು ಆಯೋಜಿಸಿದ್ದಾರೆ. ಹೀಗೆ ವಿಮಾನದಲ್ಲಿ ಹಾರಾಡಬೇಕೆನ್ನುವ ಎಸ್ ಬಂಗಾರಪ್ಪ ಅಭಿಮಾನಿಗಳ ಕನಸು ಇಂದು ನನಸು ಆಗಿದ್ದಕ್ಕೆ ಅವರೆಲ್ಲರ ಸಂತಸಕ್ಕೆ ಪರಿಯೇ ಇರಲಿಲ್ಲ.

ಮಾಜಿ ಸಿಎಂ ಎಸ್ ಬಂಗಾರಪ್ಪ ಒಡನಾಡಿಗಳು ಕೊನೆಗೂ ತಮ್ಮ ಬಾನಂಗಳದಲ್ಲಿ ಹಾರುವ ಕನಸು ನನಸು ಮಾಡಿಕೊಂಡಿದ್ದಾರೆ. ಆಕಾಶದಲ್ಲಿ ಹಾರುವ ವಿಮಾನ ನೋಡಿ ಬೇಸರ ಪಡುತ್ತಿದ್ದ ಒಡನಾಡಿಗಳಗೆ ಕೊನೆಗೂ ವಿಮಾನದಲ್ಲಿ ಪಯಣ ಭಾಗ್ಯ ಪುತ್ರ ಸಚಿವ ಮಧು ಕಲ್ಪಿಸಿಕೊಟ್ಟಿರುವ ಕ್ಷಣಗಳು ಮಾತ್ರ ಅವಿಸ್ಮರಣೀಯ.
























