ಪಹಲ್ಗಾಮ್ ಪ್ರವಾಸಿಗರಿಗೆ ಈಗ ‘QR’ ಕವಚ: ಸುರಕ್ಷತೆಗಾಗಿ ಜಮ್ಮು-ಕಾಶ್ಮೀರ ಸರ್ಕಾರದ ಹೈಟೆಕ್ ಹೆಜ್ಜೆ
ಸರಿಯಾಗಿ ಒಂದು ವರ್ಷದ ಹಿಂದೆ ಬೈಸರನ್ ಹುಲ್ಲುಗಾವಲು ಪ್ರವಾಸಿಗರ ರಕ್ತದಿಂದ ಕೆಂಪಾಗಿತ್ತು. ಆ ದುರಂತದ ನಂತರ ಪ್ರವಾಸಿಗರಲ್ಲಿ ಮೂಡಿದ್ದ ಆತಂಕವನ್ನು ಹೋಗಲಾಡಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿತ್ತು. ಕೇವಲ ಭದ್ರತಾ ಪಡೆಗಳನ್ನು ನಿಯೋಜಿಸುವುದು ಸಾಲದು, ಪ್ರತಿಯೊಬ್ಬ ಪ್ರವಾಸಿಗನಿಗೂ ತಾನು ಸುರಕ್ಷಿತ ವ್ಯಕ್ತಿಗಳ ನಡುವೆ ಇದ್ದೇನೆ ಎಂಬ ವಿಶ್ವಾಸ ಮೂಡಿಸಬೇಕಿತ್ತು. ಆ ವಿಶ್ವಾಸದ ಫಲವೇ ಈ QR ಕೋಡ್ ಆಧಾರಿತ ಗುರುತಿನ ಚೀಟಿ ವ್ಯವಸ್ಥೆ ಕಲ್ಪಿಸಲಾಗಿದೆ.
Updated on: Apr 21, 2026 | 10:04 AM

ತಂತ್ರಜ್ಞಾನ ಮತ್ತು ಭದ್ರತೆಯ ಸಮ್ಮಿಲನ: ಪ್ರತಿಯೊಬ್ಬರ ಕೊರಳಲ್ಲಿ ರಾರಾಜಿಸುತ್ತಿರುವ ಈ QR ಕೋಡ್ ಆಧಾರಿತ ಐಡಿ ಕಾರ್ಡ್‌ಗಳು, ಪ್ರವಾಸಿಗರಿಗೆ ನೀಡಲಿವೆ 'ತ್ವರಿತ ಗುರುತಿಸುವಿಕೆ'ಯ ಭರವಸೆ. ಪಹಲ್ಗಾಮ್‌ನ ಅತ್ಯಂತ ಸುಂದರ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ಇನ್ನು ಮುಂದೆ ಯಾರೂ ಅನಾಮಧೇಯರಾಗಿ ಓಡಾಡುವಂತಿಲ್ಲ. ಕುದುರೆ ಸವಾರರು, ಗೈಡ್‌ಗಳು ಅಥವಾ ಸಣ್ಣ ವ್ಯಾಪಾರಿಗಳಾಗಲಿ - ಪ್ರತಿಯೊಬ್ಬರ ಕೊರಳಲ್ಲೂ ಈಗ ಒಂದು ವಿಶಿಷ್ಟ ಕ್ಯೂ ಆರ್ ಕೋಡ್ ಇರಲಿದೆ.

ಏಪ್ರಿಲ್ 22ರ ದುರಂತದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಪಹಲ್ಗಾಮ್ ಅನ್ನು ಜಾಗತಿಕ ಮಟ್ಟದ ಸುರಕ್ಷಿತ ತಾಣವನ್ನಾಗಿ ಮಾಡುವ ಅಧಿಕಾರಿಗಳ ಮಹತ್ವದ ಹೆಜ್ಜೆ.

ಸುರಕ್ಷಿತ ವಾತಾವರಣದಲ್ಲಿ ನಿರಾತಂಕವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಿರುವ ಪ್ರವಾಸಿಗರು. ನಾವು ಕುಗ್ಗುವುದಿಲ್ಲ, ನಾವು ಸುಧಾರಿಸುತ್ತೇವೆ. ತಂತ್ರಜ್ಞಾನದ ಈ ಡಿಜಿಟಲ್ ಕವಚವು ಬೈಸರನ್ ಕಣಿವೆಯನ್ನು ಮತ್ತೆ ಪ್ರವಾಸಿಗರ ಸ್ವರ್ಗವನ್ನಾಗಿ ಮಾಡುತ್ತಿದೆ.

ಸ್ಥಳೀಯರ ಬೆಂಬಲ: "ಇದು ನಮ್ಮ ಸುರಕ್ಷತೆಗೂ ಅಗತ್ಯ"; ಪ್ರವಾಸೋದ್ಯಮವನ್ನು ಬಲಪಡಿಸಲು ಸರ್ಕಾರದ ಈ ಹೈಟೆಕ್ ಕ್ರಮವನ್ನು ಮುಕ್ತ ಮನಸ್ಸಿನಿಂದ ಸ್ಥಳೀಯ ವ್ಯಾಪಾರಿಗಳು ಸ್ವಾಗತಿಸಿದ್ದಾರೆ . ಕಳೆದ ವರ್ಷ ನಾವು ನಮ್ಮವರನ್ನು ಕಳೆದುಕೊಂಡೆವು, ಪ್ರವಾಸಿಗರನ್ನು ಕಳೆದುಕೊಂಡೆವು. ಆದರೆ ಈ ಹೊಸ ವ್ಯವಸ್ಥೆ ನಮಗೆ ಗೌರವ ಮತ್ತು ಸುರಕ್ಷತೆ ಎರಡನ್ನೂ ನೀಡಿದೆ ಎನ್ನುತ್ತಾರೆ ಸ್ಥಳೀಯರು

ಇದು ಕೇವಲ ಸುರಕ್ಷತೆಯಲ್ಲ, ಪ್ರವಾಸಿಗರು ಅನಧಿಕೃತ ವ್ಯಕ್ತಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸುವ ಒಂದು ಸ್ಮಾರ್ಟ್ ಫಿಲ್ಟರ್ ಕೂಡ ಹೌದು.

ಪ್ರವಾಸಿಗರು ತಮ್ಮ ಮೊಬೈಲ್ ಮೂಲಕ ಈ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ, ಅವರ ಹೆಸರು, ಫೋಟೋ ಮತ್ತು ಪೊಲೀಸ್ ವೆರಿಫಿಕೇಶನ್ ಆಗಿರುವ ದಾಖಲೆಗಳು ಕಣ್ಣಮುಂದೆ ಬರುತ್ತವೆ.

ಸೈನಿಕರ ಹದ್ದಿನ ಕಣ್ಣು: ಸ್ಥಳೀಯ ಪೊಲೀಸರು ಮತ್ತು ಭದ್ರತಾ ಪಡೆಗಳು ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯನ್ನು ಖಚಿತಪಡಿಸಿಕೊಳ್ಳುತ್ತಿರುವ ದೃಶ್ಯ. ಈ ವ್ಯವಸ್ಥೆಯು ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ, ಭದ್ರತಾ ಪಡೆಗಳಿಗೂ ದೊಡ್ಡ ಬಲ ನೀಡಿದೆ. ಸ್ಥಳೀಯ ಪೊಲೀಸರು ನಿಯತಕಾಲಿಕವಾಗಿ ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಇದರಿಂದ ಆ ಪ್ರದೇಶದಲ್ಲಿ ಇರುವ ಪ್ರತಿಯೊಬ್ಬ ಸೇವಾ ಪೂರೈಕೆದಾರನು ಅಧಿಕೃತನೇ ಅಥವಾ ಯಾರಾದರೂ ಸುಳ್ಳು ಗುರುತು ನೀಡಿ ನುಸುಳಿದ್ದಾರೆಯೇ ಎಂಬುದು ಕ್ಷಣಾರ್ಧದಲ್ಲಿ ತಿಳಿಯುತ್ತದೆ. ನೆಲದ ಮೇಲಿನ ಮಾನವ ಬುದ್ಧಿವಂತಿಕೆಗೆ ಈಗ ಡಿಜಿಟಲ್ ಬಲ ಸಿಕ್ಕಿದೆ.

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
Read More




