Samantha Ruth Prabhu: ಮತ್ತೆ ಕೈ ಕೊಟ್ಟಿದೆ ಸಮಂತಾ ರುತ್ ಪ್ರಭು ಆರೋಗ್ಯ; ಅಭಿಮಾನಿಗಳಿಗೆ ಆತಂಕ
Shaakuntalam Movie: ಸಮಂತಾಗೆ ಹುಷಾರಿಲ್ಲ ಎಂಬ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. ಈ ಸಂದರ್ಭದಲ್ಲಿ ಸಿನಿಮಾ ಕೆಲಸಗಳನ್ನು ಬಿಟ್ಟು ಮೊದಲು ವಿಶ್ರಾಂತಿ ಪಡೆಯಿರಿ ಎಂದು ಎಲ್ಲರೂ ಸಲಹೆ ನೀಡುತ್ತಿದ್ದಾರೆ.
Updated on: Apr 13, 2023 | 7:15 AM

ನಟಿ ಸಮಂತಾ ರುತ್ ಪ್ರಭು ಅವರು ‘ಶಾಕುಂತಲಂ’ ಸಿನಿಮಾದ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. ಏಪ್ರಿಲ್ 14ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಚಿತ್ರದ ರಿಲೀಸ್ ಹೊಸ್ತಿಲಿನಲ್ಲಿ ಸಮಂತಾಗೆ ಅನಾರೋಗ್ಯ ಉಂಟಾಗಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಕೆಲವೇ ತಿಂಗಳ ಹಿಂದೆ ನಟಿ ಸಮಂತಾ ಅವರು Myositis ಕಾಯಿಲೆಯಿಂದ ಬಳಲಿದ್ದರು. ಸಾಕಷ್ಟು ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆದ ಬಳಿಕ ಅವರು ಚೇತರಿಸಿಕೊಂಡರು. ಇನ್ನೇನು ಎಲ್ಲವೂ ಸರಿ ಆಯಿತು ಎನ್ನುವಾಗಲೇ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಶಾಕುಂತಲಂ’ ಸಿನಿಮಾಗೆ ಕೊನೇ ಹಂತದ ಪ್ರಮೋಷನ್ನಲ್ಲಿ ಸಮಂತಾ ಭಾಗಿ ಆಗಬೇಕಿತ್ತು. ಆದರೆ ತಮಗೆ ಜ್ವರ ಬಂದಿದೆ ಮತ್ತು ಗಂಟಲಿನ ಸಮಸ್ಯೆ ಆಗಿರುವುದರಿಂದ ಪ್ರಚಾರಕ್ಕೆ ಬರಲು ಆಗುತ್ತಿಲ್ಲ ಎಂದು ಸಮಂತಾ ಹೇಳಿದ್ದಾರೆ.

ಸಿನಿಮಾ ಕೆಲಸಗಳ ಸಲುವಾಗಿ ಸಮಂತಾ ಅವರು ಹಗಲಿರುಳು ಶ್ರಮಿಸುತ್ತಾರೆ. ಜಿಮ್ನಲ್ಲಿ ಕಾಲ ಕಳೆಯುತ್ತಾರೆ. ಭರ್ಜರಿ ಆ್ಯಕ್ಷನ್ ದೃಶ್ಯಗಳ ಸಲುವಾಗಿ ಕಠಿಣ ತರಬೇತಿ ಪಡೆಯುತ್ತಾರೆ. ಈ ಎಲ್ಲ ಕಾರಣದಿಂದ ಅವರಿಗೆ ಅನಾರೋಗ್ಯ ಉಂಟಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.

ಸಮಂತಾಗೆ ಹುಷಾರಿಲ್ಲ ಎಂಬ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. ‘ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ಅನೇಕರು ಕಮೆಂಟ್ ಮಾಡುವ ಮೂಲಕ ಸಲಹೆ ನೀಡಿದ್ದಾರೆ. ಎಲ್ಲಿ ಅವರಿಗೆ ಮತ್ತೆ Myositis ಕಾಯಿಲೆ ಮರುಕಳಿಸುತ್ತದೋ ಎಂಬ ಆತಂಕ ಅಭಿಮಾನಿಗಳಿಗಿದೆ.



















