Updated on: Aug 29, 2021 | 6:51 PM
ಒಂದೆಡೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ...ಇನ್ನೊಂದೆಡೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ಗಳ ಕೊರತೆ...ಇವುಗಳ ನಡುವೆ ಮುಂದೇನು ಯೋಚಿಸುತ್ತಿದ್ದ ಆಟೋ ರಿಕ್ಷಾ ಡ್ರೈವರ್ಗಳಿಗೆ ಸೋಲಾರ್ ಗಾಡಿ ಪರಿಚಯಿಸಲು ಮುಂದಾಗಿದೆ ವೇಗಾ (Vega) ಕಂಪೆನಿ.
ಹೌದು, ಪೆಟ್ರೋಲ್-ಡೀಸೆಲ್, ವಿದ್ಯುತ್ ಶಕ್ತಿ ಹೊರತಾಗಿ ಸೌರಶಕ್ತಿಯಿಂದ ಚಲಿಸುವ ಆಟೋ ರಿಕ್ಷಾವೊಂದನ್ನು ಪರಿಚಯಿಸಲಿದೆ ಶ್ರೀಲಂಕಾ ಮೂಲದ ವೇಗಾ ಕಂಪೆನಿ.
ಕಂಪೆನಿಯು ಇಟಿಎಕ್ಸ್ ಹೆಸರಿನಲ್ಲಿ ಪರಿಚಯಿಸುತ್ತಿರುವ ಹೊಸ ರಿಕ್ಷಾಗೆ ಸೋಲಾರ್ ಪ್ಯಾನೆಲ್ ನೀಡಿದ್ದು, ಇದು ಚಲಿಸುತ್ತಿರುವಾಗ ಅಥವಾ ನಿಲ್ಲಿಸಿದ್ದಾಗ ಸೂರ್ಯನ ಬೆಳಕಿನಿಂದ ಚಾರ್ಜ್ ಆಗಲಿದೆ. ಹೀಗಾಗಿ ಇದನ್ನು ಯಾವುದೇ ಚಾರ್ಜಿಂಗ್ ಕೇಂದ್ರಕ್ಕೆ ಹೋಗಿ ಚಾರ್ಜ್ ಮಾಡುವ ಅಗತ್ಯವಿಲ್ಲ ಎಂದು ಕಂಪೆನಿ ಹೇಳಿದೆ.
ರಿಕ್ಷಾದ ಮೇಲ್ಛಾವಣಿನಿಗೆ ಸೋಲಾರ್ ಪ್ಯಾನೆಲ್ ಅಳವಡಿಸಿದ್ದು, ಇದನ್ನು ನೇರವಾಗಿ ರಿಕ್ಷಾದಲ್ಲಿರುವ LFP ಬ್ಯಾಟರಿಗೆ ಕನೆಕ್ಟ್ ಮಾಡಲಾಗಿದೆ. ಇದರಿಂದ ಸೋಲಾರ್ ಪ್ಯಾನೆಲ್ಗೆ ಬಿಸಿಲು ತಾಗುತ್ತಿದ್ದಂತೆ ಅತ್ತ ಬ್ಯಾಟರಿ ಚಾರ್ಜ್ ಆಗಲಿದೆ. ಅದರಂತೆ ಈ ಎಲೆಕ್ಟ್ರಿಕ್ ರಿಕ್ಷಾವನ್ನು ಚಾರ್ಜ್ ಮಾಡಿಕೊಳ್ಳುವ ಅಗತ್ಯವಿಲ್ಲ.
ಆಕರ್ಷಕ ವಿನ್ಯಾಸದಲ್ಲಿರುವ ಈ ರಿಕ್ಷಾದಲ್ಲಿ ಸೋಲಾರ್ ಅಲ್ಲದೆ, ಕಾರುಗಳಲ್ಲಿ ಇರುವಂತಹ ಬೂಟ್ ಡೋರ್, ವಿಂಡ್‌ಶೀಲ್ಡ್, ಸಿಂಗಲ್ ಗೇಜ್, ಡ್ಯಾಶ್ ಲೈನ್‌ನಂತಹ ಹೋಮ್ ಆಟೋ ಲೈಟಿಂಗ್ಗಳನ್ನು ಸಹ ನೀಡಿರುವುದು ವಿಶೇಷ.
ಇನ್ನು ಸೋಲಾರ್ ಪ್ಯಾನೆಲ್ ಚಾರ್ಜಿಂಗ್ ಮೂಲಕ ಈ ರಿಕ್ಷಾವನ್ನು ಪ್ರತಿದಿನ 64 ಕಿ.ಮೀಗಳವರೆಗೆ ಚಲಾಯಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ. Vega ಕಂಪನಿಯ ಈ ಹೊಸ ಅವಿಷ್ಕಾರ ಶೀಘ್ರದಲ್ಲೇ ಶ್ರೀಲಂಕಾದ ರಸ್ತೆಗಿಳಿಯಲಿದೆ. ಆ ಬಳಿಕ ಸೋಲಾರ್ ಆಟೋ ರಿಕ್ಷಾವನ್ನು ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.
ಭಾರತದಲ್ಲಿ ಆಟೋ ರಿಕ್ಷಾಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಇದೀಗ ಬರುತ್ತಿರುವ ಹೊಸ ಮಾದರಿಯ ಸೋಲಾರ್ ರಿಕ್ಷಾ ಮುಂದಿನ ದಿನಗಳಲ್ಲಿ ಭಾರತದ ರಸ್ತೆಗಳಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.