‘ಟಾಕ್ಸಿಕ್’ ಇದು ನಿಜಕ್ಕೂ ದೊಡ್ಡವರ ಕತೆ, ಸಣ್ಣವರಿಗಲ್ಲ
Toxic movie teaser: ಯಶ್ ನಟಿಸಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜನವರಿ 08) ಬಿಡುಗಡೆ ಆಗಿದೆ. ಹಾಲಿವುಡ್ ಗುಣಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡಿರುವುದು ಟೀಸರ್ ನಿಂದಲೇ ಗೊತ್ತಾಗುತ್ತಿದೆ. ಆದರೆ ಟೀಸರ್ ನೋಡಿದವರಿಗೆ ‘ಟಾಕ್ಸಿಕ್’ ಸಿನಿಮಾ ವಯಸ್ಕರಿಗಷ್ಟೆ ಎನಿಸುವಂತಿದೆ. ಸಾಕಷ್ಟು ‘ಹಸಿ-ಬಿಸಿ’ ದೃಶ್ಯಗಳು ಸಿನಿಮಾನಲ್ಲಿ ಇರುವಂತಿದೆ.

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಇಂದು (ಜನವರಿ 08) ಬಿಡುಗಡೆ ಆಗಿದೆ. ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ಟಾಕ್ಸಿಕ್’ ಆ ನಿರೀಕ್ಷೆಗೆ ತಕ್ಕಂತೆ ಗುಣಮಟ್ಟದ ಮೇಕಿಂಗ್ ಉಳ್ಳ ಟೀಸರ್ ಅನ್ನೇ ಬಿಡುಗಡೆ ಮಾಡಿದೆ. ಯಶ್, ‘ಕೆಜಿಎಫ್’ ಸಿನಿಮಾಕ್ಕಿಂತಲೂ ಹೆಚ್ಚು ರಗಡ್ ಆಗಿ ಸಿನಿಮಾನಲ್ಲಿ ಕಾಣಿಸಿಕೊಂಡಿರುವುದು ಟೀಸರ್ನಿಂದಲೇ ತಿಳಿಯುತ್ತಿದೆ. ಸಿನಿಮಾವನ್ನು ಪಕ್ಕಾ ಹಾಲಿವುಡ್ ‘ಮಾನದಂಡ’ಗಳಿಗೆ ಅನುಗುಣವಾಗಿ ನಿರ್ಮಿಸಿರುವುದು ಟೀಸರ್ನಿಂದಲೇ ತಿಳಿಯುತ್ತಿದೆ. ಜೊತೆಗೆ ‘ಟಾಕ್ಸಿಕ್’ ಸಿನಿಮಾ ಪಕ್ಕಾ ‘ದೊಡ್ಡವರ’ ಸಿನಿಮಾ, ಈ ಸಿನಿಮಾ ಕಿರಿಯರಿಗಲ್ಲ ಎಂಬುದನ್ನು ಸಹ ಟೀಸರ್ ಸಾರಿ ಹೇಳುತ್ತಿದೆ.
ಈಗ ಬಿಡುಗಡೆ ಆಗಿರುವ ‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿಯೇ ಹಸಿ ಬಿಸಿ ದೃಶ್ಯವಿದೆ. ಯಶ್, ಸ್ಮಶಾನದ ಮುಂದೆ ಕಾರಿನಲ್ಲಿ ಯುವತಿಯೊಟ್ಟಿಗೆ ಲೈಂಗಿಕತೆಯಲ್ಲಿ ತೊಡಗಿರುವ ದೃಶ್ಯವಿದೆ. ಅದನ್ನು ಯಶ್ ಅವರ ರಾಯ ಪಾತ್ರದ ‘ಶಕ್ತಿ’ಯನ್ನು ತೋರ್ಪಡಿಸಲು ನಿರ್ದೇಶಕರು ಬಳಸಿದಂತಿದೆ. ಟೀಸರ್ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ಸಿಗುವುದು ಪಕ್ಕಾ ಎನಿಸುತ್ತಿದೆ. ಈ ದೃಶ್ಯವೊಂದೇ ಅಲ್ಲದೆ ಕಳೆದ ವರ್ಷ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಆಗಿದ್ದ ಟೀಸರ್ನಲ್ಲಿಯೂ ಸಹ ಸಾಕಷ್ಟು ಹಸಿ-ಬಿಸಿ ದೃಶ್ಯಗಳಿದ್ದವು.
ಕಳೆದ ವರ್ಷ ಬಿಡುಗಡೆ ಆಗಿದ್ದ ಟೀಸರ್ನಲ್ಲಿ ಸಾಕಷ್ಟು ವಿದೇಶಿ ಯುವತಿಯರು ಅರೆನಗ್ನರಾಗಿ, ಮಾದಕ ನೃತ್ಯ ಮಾಡುತ್ತಿರುವ ದೃಶ್ಯಗಳು, ಮಾದಕ ವಸ್ತುವನ್ನು ಬಳಸುತ್ತಿರುವ ದೃಶ್ಯಗಳು, ಅಶ್ಲೀಲ ಸಜ್ಞೆಗಳನ್ನು ಮಾಡುತ್ತಿರುವ ದೃಶ್ಯಗಳನ್ನು ಒಳಗೊಂಡಿತ್ತು. ಇದನ್ನೆಲ್ಲ ನೋಡಿದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಿಬಿಎಫ್ಸಿ ‘ಎ’ ಪ್ರಮಾಣ ಪತ್ರ ನೀಡುವುದು ಖಾತ್ರಿ ಎನ್ನಬಹುದು.
ಇದನ್ನೂ ಓದಿ:ಫ್ಯಾನ್ಸ್ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ: ಹುಟ್ಟುಹಬ್ಬಕ್ಕೂ ಮುನ್ನ ಯಶ್ ಸಂದೇಶ
ಅಸಲಿಗೆ ಇದನ್ನು ಮೊದಲೇ ಊಹಿಸಿಯೇ ಚಿತ್ರತಂಡ ಹೆಜ್ಜೆ ಇಟ್ಟಿದೆ ಅನಿಸುತ್ತದೆ. ಇದೇ ಕಾರಣಕ್ಕೆ ‘ಟಾಕ್ಸಿಕ್’ ಸಿನಿಮಾದ ಅಡಿಬರಹದಲ್ಲೇ ಇದು ಮಕ್ಕಳಿಗೆ ಅಥವಾ ಅಪ್ತಾಪ್ತರಿಗಲ್ಲ ಎಂಬ ಸುಳಿವನ್ನು ಚಿತ್ರತಂಡ ನೀಡಿದೆ. ‘ಟಾಕ್ಸಿಕ್’ ಸಿನಿಮಾದ ಅಡಿಬರಹ ಅಥವಾ ಟ್ಯಾಗ್ಲೈನ್ ‘ಎ ಫೇರಿ ಟೇಲ್ ಆಫ್ ಗ್ರೋನ್ ಅಪ್ಸ್’ (ಒಂದು ದೊಡ್ಡವರ ಕತೆ) ಎಂದಿದೆ. ಹಾಗಾಗಿ ಹೆಚ್ಚು ಹಸಿ-ಬಿಸಿ ದೃಶ್ಯಗಳನ್ನು ಚಿತ್ರೀಕರಿಸಿರುವುದು ಯೋಜಿತ ನಿರ್ಣಯವೇ ಆಗಿದೆ.
ಯಶ್ ತಮ್ಮ ಈ ವರೆಗಿನ ವೃತ್ತಿ ಜೀವನದಲ್ಲಿ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದಿಲ್ಲ. ಆದರೆ ‘ಟಾಕ್ಸಿಕ್’ನಲ್ಲಿ ಮೊದಲ ಬಾರಿಗೆ ಇಂಥಹಾ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಯಶ್ ಅಭಿಮಾನಿಗಳು, ವಿಶೇಷವಾಗಿ ಅವರ ಮಹಿಳಾ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ಗೀತು ಮೋಹನ್ದಾಸ್, ಬಂಡವಾಳ ಹೂಡಿರುವುದು ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:19 am, Thu, 8 January 26




