- Kannada News Photo gallery Year End 2024: Karnataka 2024 Disasters; Landslides, Floods, and Students Death, Kannada News
Year End 2024: ಕರ್ನಾಟಕದಲ್ಲಿ ಸಂಭವಿಸಿದ ದುರಂತಗಳು, ನೈಸರ್ಗಿಕ ವಿಕೋಪಗಳು
2024ನೇ ಇಸವಿಯಲ್ಲಿ ಕರ್ನಾಟಕದಲ್ಲಿ ಅನೇಕ ದುರಂತಗಳು ಸಂಭವಿಸಿವೆ. ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ, ವಿಜಯಪುರದಲ್ಲಿ ತೆಪ್ಪ ಮುಳುಗಡೆ, ತುಂಗಭದ್ರಾ ಜಲಾಶಯದ ಗೇಟ್ ಕಟ್, ಬಳ್ಳಾರಿಯಲ್ಲಿ ಬಾಣಂತಿಯರ ಸಾವು, ಮಂಗಳೂರಿನಲ್ಲಿ ಯುವತಿಯರ ಸಾವು ಮತ್ತು ಕೋಲಾರದ ವಿದ್ಯಾರ್ಥಿನಿಯರ ಸಾವು ಮುಂತಾದ ದುರಂತಗಳು ಜನರನ್ನು ಬೆಚ್ಚಿಬೀಳಿಸಿವೆ. ಈ ಘಟನೆಗಳಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ.
Updated on:Dec 13, 2024 | 4:08 PM

ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ, ವಿಜಯಪುರ ಜಿಲ್ಲೆಯಲ್ಲಿ ತೆಪ್ಪ ಮೊಗಜಿ ಆರು ಜನರು ನೀರು ಪಾಲಾಗಿದ್ದು, ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯದ ಕ್ರಸ್ಟ್ ಗೇಟ್ ತುಂಡಾಗಿದ್ದು ಸೇರಿದಂತೆ 2024ರ ವರ್ಷದಲ್ಲಿ ಅನೇಕ ದುರಂತಗಳು ಕರ್ನಾಟಕದಲ್ಲಿ ಸಂಭವಿಸಿವೆ. 2024ರಲ್ಲಿ ಯಾವೆಲ್ಲ ಅವಘಡಗಳು ಸಂಭವಿಸಿದವು ಇಲ್ಲಿದೆ ಓದಿ.

ಜುಲೈ 16 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು 11 ಜನ ಮೃತಪಟ್ಟಿದ್ದರು. ಘಟನೆಯಲ್ಲಿ ಮೃತಪಟ್ಟಿದ್ದ ಹೋಟೆಲ್ ಮಾಲೀಕ ಜಗನಾಥ್ ಅವರ ಪುತ್ರಿ ಎನ್. ಕೃತಿ ಅವರಿಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬಿಹೆಚ್ಇಎಲ್ನಲ್ಲಿ ಉದ್ಯೋಗ ಕಲ್ಪಿಸಿದ್ದರು.

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ರಣಮಳೆಯಾಗಿದ್ದರಿಂದ ಬೆಳಗಾವಿ ಜಿಲ್ಲೆಯ ಸಪ್ತ ನದಿಗಳು ಅಪರಾ ಪ್ರಮಾಣದಲ್ಲಿ ನೀರು ಹರಿದಿದ್ದವು. ಕೋಯ್ನಾ ಜಲಾಶಯದಿಂದ ಕೃಷ್ಣ ನದಿಗೆ ನೀರು ಬಟ್ಟಿದ್ದರಿಂದ ಗೋಕಾಕ್, ಚಿಕ್ಕೋಡಿ ತಾಲೂಕಿನ ನದಿ ತೀರದ ಗ್ರಾಮಗಳು ಮುಳುಗಡೆಯಾಗಿದ್ದವು. ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದವು.

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನರು ನೀರುಪಾಲಾಗಿದ್ದರು. ನದಿ ತೀರದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ಪೊಲೀಸರು ಬರುತ್ತಾರೆಂದು ಮಾಹಿತಿ ಸಿಕ್ಕ ಬೆನ್ನಲೇ, ಭಯದಿಂದ ತಟದಲ್ಲಿದ್ದ ತೆಪ್ಪದ ಮೂಲಕ ಎಂಟು ಜನ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಆದರೆ, ದುರ್ವೈವ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದಿತ್ತು. ಪರಿಣಾಮ ಆರು ಜನರು ಜಲಸಮಾಧಿಯಾಗಿದ್ದರು. ಇಬ್ಬರು ಈಜಿಕೊಂಡು ಹೋಗಿ ದಡ ಸೇರಿದ್ದರು.

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟಗೇಟ್ ಇದೇ ಆಗಸ್ಟ್ 10 ರಂದು ಕೊಚ್ಚಿಕೊಂಡು ಹೋಗಿತ್ತು. 19 ನೇ ಗೇಟ್ ವೊಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ ನೀರು ಹೊರ ಹೋಗ್ತಿತ್ತು. ಜಲಾಶಯದಿಂದ ಒಂದೇ ವಾರದಲ್ಲಿ ನಲವತ್ತೈದು ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿ ಹರಿದು ಹೋಗಿತ್ತು. ತುರ್ತು ಕಾರ್ಯ ಪ್ರವೃತ್ತವಾದ ಸರ್ಕಾರ ಕ್ರಸ್ಟ್ಗೇಟ್ ಅಳವಡಿಸಿ ನೀರು ಹರಿಯುವುದನ್ನು ತಡೆದಿತ್ತು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಒಂದೇ ತಿಂಗಳಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಬಾಣಂತಿಯರ ಸಾವಿಗೆ ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ವರದಿಯಲ್ಲಿ ಬಹಿರಂಗಗೊಂಡಿದೆ. ಬಳ್ಳಾರಿಯಲ್ಲಿ ಬಾಣಂತಿಯರು ಮೃತಪಟ್ಟ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಬಾಣಂತಿಯರ ಸಾವಿಗೆ ಸರ್ಕಾರ ಕಾರಣ ಎಂದು ಆರೋಪ ಮಾಡಿವೆ. ಇನ್ನು, ಸರ್ಕಾರ ಮೃತ ಬಾಣಂತಿಯರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು.

ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್ನಲ್ಲಿನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟಿದ್ದರು. ಮೈಸೂರು ಮೂಲದ ಯುವತಿಯರು ಉಚ್ಚಿಲ ಬೀಚ್ ಬಳಿಯ ರೆಸಾರ್ಟ್ನ ಈಜುಕೊಳದಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ ಮೃತಪಟ್ಟಿದ್ದರು. ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತ ದುರ್ವೈವಿಗಳು.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕೊತ್ತುರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಸುಮಾರು 54 ವಿದ್ಯಾರ್ಥಿನಿಯರು ಸಂಜೆ ಕಡಲಿನಲ್ಲಿ ಆಟವಾಡಲು ಇಳಿದಿದ್ದರು. ಅಲೆಗಳ ಅಬ್ಬರ ಹೆಚ್ಚಿದ್ದರೂ ಶಿಕ್ಷಕರು ಮುನ್ನೆಚ್ಚರಿಕೆ ಕೈಗೊಳ್ಳದೆ ಮಕ್ಕಳನ್ನು ಸಮುದ್ರದಲ್ಲಿ ಆಟ ಆಡಲು ಬಿಟ್ಟಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಏಳು ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರುಪಾಲಾಗಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡಗಳು ಯಾವುದೇ ಪರಿಕರ ಸಾಧನ ಇಲ್ಲದಿದ್ದರೂ ಮೂರು ಜನ ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನನ್ನು ರಕ್ಷಣೆ ಮಾಡಿದ್ದರು. ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿದ್ದರು.
Published On - 4:05 pm, Fri, 13 December 24




