ಕಾಂಗ್ರೆಸ್ ನವೆಂಬರ್ ಕ್ರಾಂತಿ ಬೆನ್ನಲ್ಲೆ ಬಿಜೆಪಿ ಅಲರ್ಟ್: ಸಿಎಂ ಕುರ್ಚಿ ಮೇಲೆ ನಿಗಾ, ತಂತ್ರ ರೂಪಿಸಿದ ಕೇಸರಿ ಪಡೆ
ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು.ಮುಂದಿನ ವರ್ಷ ತೆರವಾಗುವ 4 ಪರಿಷತ್ ಕ್ಷೇತ್ರಗಳ ಚುನಾವಣೆಗೆ ತಯಾರಿ ಹಾಗೂ ದಾವಣಗೆರೆಯಲ್ಲಿ ಭಿನ್ನಮತ ಬಗ್ಗೆ ಚರ್ಚಿಸಲಾಗಿದೆ. ಬೇರೆ ಯಾವೆಲ್ಲಾ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 12: ಕಾಂಗ್ರೆಸ್ (Congress) ಪಾಳಯದಲ್ಲಿ ನಡೆಯುತ್ತಿರುವ ನವೆಂಬರ್ ಕ್ರಾಂತಿಯ ಮುನ್ಸೂಚನೆ ಮತ್ತು ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆಯ ಚರ್ಚೆಗಳ ಬೆನ್ನಲ್ಲೇ ಇದೀಗ ಬಿಜೆಪಿ ಅಲರ್ಟ್ ಆಗಿದೆ. ಕಾಂಗ್ರೆಸ್‌ನ ಆಂತರಿಕ ಬೆಳವಣಿಗೆಗಳ ಮೇಲೆ ನಿಗಾ ಇರಿಸಿ, ತನ್ನ ಮುಂದಿನ ನಡೆ ಮತ್ತು ತಂತ್ರಗಳನ್ನು ರೂಪಿಸಲು ಇಂದು ರಾಜ್ಯದ ಕೇಂದ್ರ ಕಚೇರಿಯಲ್ಲಿ ಬಿಜೆಪಿಯ (bjp) ಮಹತ್ವದ ಕೋರ್ ಕಮಿಟಿ ಸಭೆ ನಡೆಯಿತು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪಕ್ಷ ಸಂಘಟನೆ, ಸರ್ಕಾರ ವಿರುದ್ಧದ ಹೋರಾಟ, ಬೆಂಗಳೂರು ಪಾಲಿಕೆ ಚುನಾವಣೆ ತಯಾರಿ, ಕೆಲ ಜಿಲ್ಲೆಗಳಲ್ಲಿನ ಭಿನ್ನಮತ ಮತ್ತು ಬಿಹಾರ ಚುನಾವಣಾ ಪ್ರಚಾರದ ಬಗ್ಗೆ ಸಮಾಲೋಚನೆ ಮಾಡಲಾಗಿದೆ. ಜೊತೆಗೆ ಕಾಂಗ್ರೆಸ್‌ನಲ್ಲಿ ಆಗಬಹುದಾದ ಸಿಎಂ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ‘ನವೆಂಬರ್ ಕ್ರಾಂತಿ’ಯ ಬಗ್ಗೆಯೂ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ
ಕಾಂಗ್ರೆಸ್‌ನ ಆಂತರಿಕ ಬೆಳವಣಿಗೆಗಳ ಮೇಲೆ ನಿರಂತರವಾಗಿ ನಿಗಾ ಇರಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಮಾತ್ರವಲ್ಲದೆ, ಕಾಂಗ್ರೆಸ್‌ನ ಚಟುವಟಿಕೆಗಳಿಗೆ ಅನುಗುಣವಾಗಿ ತಮ್ಮ ಮುಂದಿನ ರಾಜಕೀಯ ನಡೆಗಳನ್ನು ನಿರ್ಧರಿಸುವಂತೆ ಹೈಕಮಾಂಡ್‌ಗೂ ಕಾಲಕಾಲಕ್ಕೆ ಮಾಹಿತಿ ರವಾನಿಸಲು ತೀರ್ಮಾನಿಸಿದ್ದಾರೆ.
ಬಿಹಾರ ಚುನಾವಣೆ ಫಂಡಿಂಗ್ ಅಸ್ತ್ರ!
- ಕಾಂಗ್ರೆಸ್‌ನಿಂದ ಬಿಹಾರಕ್ಕೆ ಹಣ ಕಳುಹಿಸುವ ಆರೋಪ
- ಶಾಸಕ ವೀರೇಂದ್ರ ಪಪ್ಪಿಯಿಂದ 300 ಕೋಟಿ ಫಂಡಿಂಗ್ ಚರ್ಚೆ
- ಕಾಂಗ್ರೆಸ್ ಹಣಿಯಲು ತಂತ್ರ ರೂಪಿಸಿದ ಬಿಜೆಪಿ ನಾಯಕರು
ಕೋರ್ ಕಮಿಟಿ ಸಭೆಯಲ್ಲಿ ಬಿಹಾರ ಚುನಾವಣೆಗೆ ರಾಜ್ಯ ಕಾಂಗ್ರೆಸ್‌ನಿಂದ ಫಂಡಿಂಗ್ ಆಗುತ್ತಿರುವ ಆರೋಪದ ಬಗ್ಗೆಯೂ ಚರ್ಚಿಸಿದ್ದಾರೆ. ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರಿಂದ 300 ಕೋಟಿ ರೂ. ಫಂಡಿಂಗ್ ಮತ್ತು ಇತರೆ ನಾಯಕರಿಂದ ಹಣ ಕಳುಹಿಸುವ ಬಗ್ಗೆಯೂ ಮಾತುಕತೆ ಆಗಿದೆ. ಇದನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ನಾಯಕರು ತಂತ್ರಗಾರಿಕೆಯನ್ನು ರೂಪಿಸಿದ್ದಾರೆ.
ಇನ್ನು ಪ್ರಮುಖವಾಗಿ ಸರ್ಕಾರದ ಮಹತ್ವಾಕಾಂಕ್ಷಿ ಜಾತಿ ಜನಗಣತಿ ಸಮೀಕ್ಷೆ ವರದಿ ಬಹಿರಂಗವಾದರೆ ಅದಕ್ಕೆ ಬಿಜೆಪಿ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬ ಬಗ್ಗೆಯೂ ಗಹನವಾದ ಚರ್ಚೆ ಆಗಿದೆ. ಜೊತೆಗೆ, ಭ್ರಷ್ಟಾಚಾರದ ವಿಷಯ ಮತ್ತು ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಜೆಡಿಎಸ್ ಜೊತೆಗೂಡಿ ಹೋರಾಟ ಕೈಗೊಳ್ಳುವ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ದಾವಣಗೆರೆ ಭಿನ್ನಮತ ಶಮನಕ್ಕೆ ಸಂಧಾನ ಸಭೆ: ಎರಡು ಬಣಗಳ ಪ್ರತ್ಯೇಕ ವಾದ ಆಲಿಸಿದ ನಾಯಕರು
ಕೋರ್ ಕಮಿಟಿ ಸಭೆಗೂ ಮುನ್ನ ರಾಜ್ಯ ಬಿಜೆಪಿ ಕಚೇರಿಯಲ್ಲಿ ದಾವಣಗೆರೆ ಜಿಲ್ಲೆಯ ಭಿನ್ನಮತವನ್ನು ಶಮನಗೊಳಿಸಲು ಸಂಧಾನ ಸಭೆಯನ್ನು ನಡೆಸಲಾಗಿದೆ. ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸಮ್ಮುಖದಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ದಾವಣಗೆರೆ ಬಿಜೆಪಿಯ ಎರಡು ಬಣದ ನಾಯಕರ ಜೊತೆ ಪ್ರತ್ಯೇಕವಾಗಿ ಸಭೆ ಮಾಡಿದರು. ಮೊದಲಿಗೆ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಬಣದ 6 ನಾಯಕರು ಮೊದಲಿಗೆ ತಮ್ಮ ವಾದ ಮಂಡಿಸಿದ್ದಾರೆ. ಮಾಜಿ ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಬಿ.ಪಿ. ಹರೀಶ್ ಸೇರಿದಂತೆ 6 ಜನರು ರೇಣುಕಾಚಾರ್ಯ ತಂಡದ ವಿರುದ್ಧ ದೂರು ನೀಡಿದ್ದಾರೆ.
ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಸಿದ್ದೇಶ್ವರ್ ಬಿಗಿ ಪಟ್ಟು
ಸಭೆಯಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ಧೇಶ್ವರ್ ಅವರು ತಮ್ಮ ಪತ್ನಿಯ ಸೋಲಿಗೆ ರೇಣುಕಾಚಾರ್ಯ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಗಿ ಪಟ್ಟು ಹಿಡಿದರು ಎನ್ನಲಾಗಿದೆ. ಸಿದ್ಧೇಶ್ವರ್ ಪತ್ನಿ ಗಾಯತ್ರಿ ಅವರ ಸೋಲಿಗೆ ರೇಣುಕಾಚಾರ್ಯ ಬಣ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬುದು ಅವರ ಪ್ರಮುಖ ಆರೋಪವಾಗಿದೆ.
ರೇಣುಕಾಚಾರ್ಯ ಬಣದಿಂದ ನಾಯಕರಿಗೆ ಮನವರಿಕೆಗೆ ಯತ್ನ
ಸಿದ್ದೇಶ್ವರ್ ಪಕ್ಷ ಸಂಘಟನೆಗೆ ನಯಾಪೈಸೆ ಕೆಲಸ ಮಾಡಿಲ್ಲ. ಗಬ್ಬರ್ ಸಿಂಗ್ ರೀತಿ ಸಿದ್ದೇಶ್ವರ್ ಜಿಲ್ಲೆಯಲ್ಲಿ ವರ್ತಿಸುತ್ತಿದ್ದಾರೆ. ಸಿದ್ದೇಶ್ವರ್ ವಿರುದ್ಧ ಜಿಲ್ಲೆಯಲ್ಲಿ ಕಾರ್ಯಕರ್ತರು ತಿರುಗಿಬಿದ್ದಿದ್ದಾರೆ. ಅವರ ಕಿತಾಪತಿ, ಅವಾಂತರಕ್ಕೆ ಬ್ರೇಕ್ ಹಾಕಬೇಕು. ಸಿದ್ದೇಶ್ವರ್ ಮೂಲತಃ ಚಿತ್ರದುರ್ಗ ಜಿಲ್ಲೆಯವರು ವಾಪಸ್ ಹೋಗಲಿ. ಅವರು ಜಿಲ್ಲೆಯಲ್ಲಿ ಮೆಂಬರ್‌ಶಿಪ್ ಮಾಡಿಸಿಲ್ಲ. ಸಿದ್ದೇಶ್ವರ್ ಕುಟುಂಬ ರಾಜಕಾರಣ ಜಿಲ್ಲೆಯಲ್ಲಿ ಅಂತ್ಯವಾಗಲಿ. ಆಗ ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಹೋಗಲಿದೆ. ದಾವಣಗೆರೆ ಜಿಲ್ಲಾಧ್ಯಕ್ಷರ ಬದಲಾವಣೆಯನ್ನು ಮಾಡಲೇಬಾರದು ಎಂದು ಸಂಧಾನ ಸಭೆಯಲ್ಲಿ ರವೀಂದ್ರನಾಥ್, ರೇಣುಕಾಚಾರ್ಯ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಟೀಂನಿಂದ ನಾಯಕರಿಗೆ ಮನವರಿಕೆ ಯತ್ನಿಸಲಾಗಿದೆ. ಸದ್ಯ ಎರಡು ಬಣಗಳ ವಾದ ಆಲಿಸಿರುವ ನಾಯಕರು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಬಹಿರಂಗವಾಗಿ ಮಾತನಾಡದಂತೆ ಎರಡು ಬಣಗಳ ನಾಯಕರಿಗೆ ಸೂಚಿಸಿದ್ದಾರೆ.
ಪಂಚ ಸದಸ್ಯರ ಸಮಿತಿ ರಚನೆ
ಮುಂದಿನ ವರ್ಷ ತೆರವಾಗುವ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳ ಚುನಾವಣೆ ತಯಾರಿ ಸೇರಿದಂತೆ ಅಭ್ಯರ್ಥಿಗಳ ಆಯ್ಕೆಗೆ ಪಂಚ ಸದಸ್ಯರ ಸಮಿತಿ ರಚಿಸಲಾಗಿದೆ. ಆರ್.ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲು, ಸಿ.ಟಿ.ರವಿ ಸೇರಿ ಐವರು ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಂಬಂಧಿಸಿದ ಕ್ಷೇತ್ರಗಳಿಗೆ ತೆರಳಿ ಸಮಿತಿ ಅಭಿಪ್ರಾಯ ಸಂಗ್ರಹಿಸಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



