ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ: ಸಂಸದ ಸಿದ್ದೇಶ್ವರ್​ ಸ್ವಪಕ್ಷದ ನಾಯಕ ಟಾಂಗ್

ಕಾಲು ತೆಗೆಯಬೇಕು, ವಿಷಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ ಎಂದು ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ತಮ್ಮ ಜೀವ ಭಯದ ಬಗ್ಗೆ ಬಹಿರಂಗವಾಗಿಯೇ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ರೆ, ಇದಕ್ಕೆ ಸ್ವಪಕ್ಷದ ನಾಯಕ ಎಂಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ: ಸಂಸದ ಸಿದ್ದೇಶ್ವರ್​ ಸ್ವಪಕ್ಷದ ನಾಯಕ ಟಾಂಗ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2024 | 7:35 PM

ದಾವಣಗೆರೆ, (ಜನವರಿ 15): ದಾವಣಗೆರೆಯಿಂದ ತೆಗೆಯಲು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್​ಗೆ (GM Siddeshwar)  ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (MP Renukacharya) ತಿರುಗೇಟು ನೀಡಿದ್ದಾರೆ. ದಾವಣಗೆರೆಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಚಾರ್ಯ, ಸಂಸದ ಸಿದ್ದೇಶ್ವರ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ತಮಗೆ ಜೀವ ಬೆದರಿಕೆ ಇದ್ದರೆ ಪ್ರಧಾನಿ ಮೋದಿಗೆ ಪತ್ರ ಬರೆಯಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಅನ್ನದಲ್ಲಿ ವಿಷ ಹಾಕಿ ಮುಗಿಸ್ತಾರೆ ಅಂತಾ ಸಂಸದರು ಹೇಳಿಕೊಂಡಿದ್ದಾರೆ. ಜಿ.ಎಂ.ಸಿದ್ದೇಶ್ವರ ತಂದೆ ಮಲ್ಲಿಕಾರ್ಜುನಪ್ಪ ಬಗ್ಗೆ ನನಗೆ ಗೌರವವಿದೆ. ಅವರು 2 ಸಲ ಸಂಸದರಾಗಿದ್ದರು, ಸಿದ್ದೇಶ್ವರ 4 ಬಾರಿ ಸಂಸದರಾಗಿದ್ದಾರೆ. ದಾವಣಗೆರೆ ಸಂಸದ ಸಿದ್ದೇಶ್ವರ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹೀಗಾಗಿ ಈ ಬಾರಿ ದಾವಣಗೆರೆ ಜಿಲ್ಲೆಯವರಿಗೆ ಅವಕಾಶ‌ ಕಲ್ಪಿಸಲಿ. ಪಕ್ಷದ ವರಿಷ್ಠರು ದಾವಣಗೆರೆ ಲೋಕಸಭಾ ಕ್ಷೇತ್ರದ ಸರ್ವೆ ಮಾಡಲಿ. ಸರ್ವೆಯಲ್ಲಿ ಯಾರ ಹೆಸರು ಬರುತ್ತೋ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿ ಎಂದು ಹೇಳುವ ಮೂಲಕ ಈ ಬಾರಿ ಯುವಕರಿಗೆ ಅವಕಾಶಕೊಡಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಲು ತೆಗೆಯಬೇಕು, ವಿಷಹಾಕಿ ಸಾಯಿಸಲು ಸಂಚು: ಜೀವ ಭಯದ ಬಗ್ಗೆ ಸಂಸದ ಸಿದ್ದೇಶ್ವರ್ ಆತಂಕ!

ಈ ಮೂಲಕ ರೇಣುಕಾಚಾರ್ಯ ಅವರು ಪರೋಕ್ಷವಾಗಿ ದಾವಣಗೆರೆ ಲೋಕಸಭಾ ಟಿಕೆಟ್​ಗೆ ಬೇಡಿಕೆ ಇಟ್ಟಿದ್ದಾರೆ. ಇದರೊಂದಿಗೆ ಹಾಲಿ ಸಂಸದ ಜಿ.ಎಂ ಸಿದ್ದೇಶ್ವರ್​ಗೆ ತೊಡೆತಟ್ಟಿದ್ದಾರೆ. ಸಿದ್ದೇಶ್ವರ್​ ಅವರಿಗೆ ವಯಸ್ಸಿನ ಕಾರಣ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ವಿಧಾನಸಭೆ ಚುನಾವಣೆ ಸೋಲುಕಂಡಿರುವ ರೇಣುಕಾಚಾರ್ಯ, ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ಟಿಕೆಟ್​ ಗಾಗಿ ಭಾರೀ ಕಸರತ್ತು ನಡೆಸಿದ್ದಾರೆ.

ಸಿದ್ದೇಶ್ವರ್ ಹೇಳಿದ್ದೇನು?

ನನಗೆ ಜೀವ ಬೆದರಿಕೆ ಇದೆ. ನನ್ನ ತೆಗೆಯಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಕಾಲು ತೆಗೆಯಬೇಕು, ವಿಷಹಾಕಿ ಸಾಯಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಎಲ್ಲೇ ಹೋದ್ರೂ ಎಚ್ಚರದಿಂದ ಇರುತ್ತೇನೆ. ನನಗೆ ಯಾರು ಏನೇ ಕೊಟ್ಟರೂ ನಾನು ತಿನ್ನುವುದಿಲ್ಲ. ದಾವಣಗೆರೆಯಿಂದ ತೆಗೆಯಲು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಬಹಿರಂಗವಾಗಿಯೇ ಬಹಿರಂಗವಾಗಿ ಆತಂಕ ವ್ಯಕ್ತಪಡಿಸಿದ್ದರು.