ಡಿಸಿಎಂ ಡಿಕೆ ಶಿವಕುಮಾರ್ ಸಂಕಲ್ಪ ಬೆನ್ನಲ್ಲೇ ಉತ್ತರಾಧಿಕಾರಿ ದಾಳ ಉರುಳಿಸಿದ ಸಿಎಂ ಪುತ್ರ ಯತೀಂದ್ರ
ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಪಟ್ಟದ ಚರ್ಚೆ ತೀವ್ರಗೊಂಡಿದೆ. ಅತ್ತ ಡಿಸಿಎಂ ಡಿಕೆ ಶಿವಕುಮಾರ್ ಸಂಕಲ್ಪ ಬೆನ್ನಲ್ಲೇ ಇತ್ತ ಡಾ.ಯತೀಂದ್ರ ಅಹಿಂದ ನಾಯಕತ್ವದ ದಾಳ ಉರುಳಿಸಿದ್ದಾರೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಯಾರು ಎಂಬ ಪ್ರಶ್ನೆಗೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ತಂದಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ಕಾಂಗ್ರೆಸ್ನಲ್ಲಿ ಸಿಎಂ ಪಟ್ಟದ ಆಟದ ಚರ್ಚೆ ಹೊಸ ತಿರುವು ಪಡೆದುಕೊಂಡಿದೆ. ಡಿಕೆ ಶಿವಕುಮಾರ್ (DK Shivakumar) ಮುಂದಿನ ಸಿಎಂ ಎಂಬ ಚರ್ಚೆಯ ನಡುವೆ ಸಿಎಂ ಪುತ್ರ ಡಾ.ಯತೀಂದ್ರ, ಸಿದ್ದರಾಮಯ್ಯರ (Siddaramaiah) ಉತ್ತರಾಧಿಕಾರಿ ಯಾರೆಂಬ ದಾಳ ಉರುಳಿಸಿದ್ದಾರೆ. ಮತ್ತೊಂದು ಕಡೆ ಡಿಕೆ ಶಿವಕುಮಾರ್ ಇಷ್ಟಾರ್ಥ ಸಿದ್ಧಿಗೆ ರಾಯರ ಮೊರೆ ಹೋಗಿದ್ದಾರೆ. ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ‘ಉತ್ತರಾಧಿಕಾರಿ’ನಾ?
ರಾಜ್ಯ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ, ಬದಲಾವಣೆ ಚರ್ಚೆ ವಿಚಾರಕ್ಕೆ ರೋಚಕ ತಿರುವು ಸಿಕ್ಕಿದೆ. ಒಂದ್ಕಡೆ ಡಿಸಿಎಂ ಡಿಕೆ ಶಿವಕುಮಾರ್ ಮಂತ್ರಾಲಯಕ್ಕೆ ತೆರಳಿ ಸಂಕಲ್ಪ ಮಾಡಿದರೆ, ಮತ್ತೊಂದ್ಕಡೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಂದಿನ ಉತ್ತರಾಧಿಕಾರಿಯ ದಾಳ ಉರುಳಿಸಿದ್ದಾರೆ. ಹಾಗಿದ್ದರೆ ಡಿಕೆ ಶಿವಕುಮಾರ್ ಮಾಡಿರುವ ಸಂಕಲ್ಪವೇನು? ಉತ್ತರಾಧಿಕಾರಿ ದಾಳ ಉರುಳಿದ್ಹೇಗೆ? ಎಂದು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸೆಪ್ಟೆಂಬರ್ ಆಯ್ತು ಈಗ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿಯ ಮಾತು! ಮತ್ತೆ ಸಿಎಂ ಬದಲಾವಣೆ ಚರ್ಚೆ
ನವೆಂಬರ್ನಲ್ಲಿ ಕ್ರಾಂತಿ ಆಗಲಿದೆ ಅನ್ನೋದು ರಾಜ್ಯ ರಾಜಕೀಯದಲ್ಲಿ ಸದಾ ಹರಿದಾಡುವ ಚರ್ಚೆ. ಈ ಕ್ರಾಂತಿಯ ಭಾಗವಾಗಿ ಸಂಪುಟ ಪುನರ್ ರಚನೆ ಆಗುತ್ತೆ, ನಾಯಕತ್ವ ಬದಲಾವಣೆ ವಿಚಾರ ಸೇರಿವೆ ಅನ್ನೋದು ಗುಟ್ಟಾಗಿ ಏನು ಉಳಿದಿಲ್ಲ. ಹೀಗೆ ಸಿಎಂ ಕುರ್ಚಿಯ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಮುನ್ನೆಲೆಗೆ ಬರುತ್ತೆ. ಆದರೆ ಇದೀಗ ಇಡೀ ಚರ್ಚೆಗೆ ಸಿಎಂ ಪುತ್ತ ಯತೀಂದ್ರ ಹೊಸ ತಿರುವು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ಗೆ ಕೌಂಟರ್ ಎಂಬಂತೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ ತಂದಿದ್ದಾರೆ. ಈ ಮೂಲಕ ಅಹಿಂದ ಸಮುದಾಯ ಒಗ್ಗೂಡಿಸುವ ಯತ್ನಕ್ಕೆ ಕೈಹಾಕಿದ್ದಾರೆ.
ಮತ್ತೆ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಡಿಕೆ ಶಿವಕುಮಾರ್
ಈ ಬೆಳವಣಿಗೆಗಳ ಬಗ್ಗೆ ರಾಯಚೂರಿನಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಏನು ಹೇಳಿದ್ದಾರೋ ಅವರನ್ನೇ ಕೇಳಬೇಕು, ಅವರ ಬಳಿಯೇ ಹೋಗಿ ಕೇಳಿ. ನನ್ನ ಬಳಿ ಕೇಳಿದರೆ ಏನಾಗಬೇಕು. ನನ್ನ ಬಗ್ಗೆ ಯಾರೂ ಚರ್ಚೆ ಮಾಡುವ ಅಗತ್ಯವಿಲ್ಲ. ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳಿದ್ದೀವಿ, ಪಕ್ಷ ಏನು ಹೇಳುತ್ತೋ ಅದನ್ನು ಒಟ್ಟಿಗೆ ಮಾಡಿಕೊಂಡು ಹೋಗ್ತೀವೆಂದು ಹೇಳಿದ್ದೇವೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರೇ ಸಿದ್ದರಾಮಯ್ಯ ಉತ್ತರಾಧಿಕಾರಿ: ಪೋಸ್ಟ್ ವೈರಲ್
ಈ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಅವರೇ ಸಿದ್ದರಾಮಯ್ಯ ಉತ್ತರಾಧಿಕಾರಿ ಎಂಬ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಿಎಂ ಸಿದ್ದರಾಮಯ್ಯ ನಂತರ ಅಹಿಂದ ನಾಯಕರು ಯಾರು? ಉತ್ತರ ಈಗ ಸಿಕ್ಕಿದೆ ಅದುವೇ ಪ್ರಿಯಾಂಕ್ ಖರ್ಗೆ. ಸಿದ್ದರಾಮಯ್ಯನವರ ಸೈದ್ಧಾಂತಿಕತೆ ಮುನ್ನಡೆಸಬಲ್ಲ ನಾಯಕ ಪ್ರಿಯಾಂಕ್ ಎಂದು ಪೋಸ್ಟ್ಗಳು ಹರಿದಾಡುತ್ತಿವೆ.
ಇನ್ನು ಶಾಸಕ ಟಿ.ಬಿ ಜಯಚಂದ್ರ, ಸರ್ಕಾರ ಎರಡುವರೆ ವರ್ಷ ಪೂರೈಸಿದ ಬಳಿಕ, ಹೊಸ ಸ್ವರೂಪ ಕೊಡಲಾಗುತ್ತೆ ಎಂದಿದ್ದಾರೆ. ಈ ಮಾತು ಕ್ರಾಂತಿಯ ಕಿಚ್ಚಿಗೆ ತುಪ್ಪ ಸುರಿದಂತಾಗಿದೆ.
ಮಂತ್ರಾಲಯದಲ್ಲಿ ಡಿಕೆ ಶಿವಕುಮಾರ್ ಸಂಕಲ್ಪ: ಸಿಎಂ ಭವಿಷ್ಯ ನುಡಿದ ಅರ್ಚಕ!
ಸದಾ ಪ್ರಾರ್ಥನೆ ಮತ್ತು ಪ್ರತಿಫಲದ ಬಗ್ಗೆ ಮಾತನಾಡುವ ಡಿಸಿಎಂ ಡಿಕೆ ಶಿವಕುಮಾರ್, ಧೈವಭಕ್ತಿಯಲ್ಲಿ ಒಂದು ಹೆಜ್ಜೆ ಮುಂದು. ಈಗ ರಾಜಕಾರಣದಲ್ಲೂ ಮತ್ತೊಂದು ಹೆಜ್ಜೆ ಇಡಲು ಹೊರಟಿರುವ ಅವರು, ಇಂದು ಸೀದಾ ತೆರಳಿದ್ದು, ಬೇಡಿದ ವರವನು ಕರಣಿಸುವ ಕಲಿಯುಗದ ಕಾಮಧೇನು ಮಂತ್ರಾಲಯದ ರಾಯರ ಸನ್ನಿಧಿಗೆ.
ಬಳಿಕ ಪಂಚಮುಖಿ ಆಂಜನೇಯ ದೇಗುಲದಲ್ಲಿ ಮಧು ಅಭಿಷೇಕ, 108 ಮಂತ್ರಗಳ ಮೂಲಕ ವಿಶೇಷ ಪುಷ್ಪಾರ್ಚನೆ ಸಲ್ಲಿಸಿದರು. ದೀಪಾವಳಿ ಪಾಡ್ಯ, ಸ್ವಾತಿ ನಕ್ಷತ್ರದಲ್ಲಿ ಇಷ್ಟಾರ್ಥ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು. ಯಾವ ಸಂಕಲ್ಪ ಎಂಬ ಮಾಡಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ನಾನುಂಟು ಆಂಜನೇಯ ಉಂಟು ಅಂತಾ ಮಾರ್ಮಿಕವಾಗಿ ಹೇಳಿದರು. ಆದರೆ ಡಿಕೆ ಸಂಕಲ್ಪದ ರಹಸ್ಯ ಬಿಟ್ಟಿಟ್ಟ ಪಂಚಮುಖಿ ಆಂಜನೇಯ ದೇಗುಲದ ಅರ್ಚಕ ಶಾಮಾಚಾರ್ಯ, ಸಿಎಂ ಆಗಬೇಕು ಅನ್ನೋದು ಅವರ ಆಸೆ. ಇಂದು ಸಂಕಲ್ಪ ಮಾಡಿದ್ದಾರೆ ಸಿಎಂ ಆಗಿಯೇ ಆಗ್ತಾರೆ ಎಂದು ಭವಿಷ್ಯ ನುಡಿದ್ದಾರೆ.
ಡಿಕೆ ಶಿವಕುಮಾರ್ ಸಂಕಲ್ಪದ ಬೆನ್ನಲ್ಲೇ ಉತ್ತರಾಧಿಕಾರಿ ದಾಳ ಉರುಳಿದೆ. ಯತೀಂದ್ರ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸೋ ಮೂಲಕ, ಅಹಿಂದ ನಾಯಕತ್ವದ ದಾಳ ಉರುಳಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ. ಇದರ ಜೊತೆಜೊತೆಗೆ ಅಹಿಂದ ಸಮುದಾಯವನ್ನು ಒಗ್ಗೂಡಿಸಲು ಮೆಗಾ ಪ್ಲ್ಯಾನ್ ಮಾಡಿಕೊಂಡಂತೆ ಕಾಣ್ತಿರೋದಂತೂ ಸುಳ್ಳಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:41 pm, Wed, 22 October 25




