ಅನುದಾನ ಯುದ್ಧ: ಕೇಂದ್ರದ ವಿರುದ್ಧ ಮತ್ತೆ ಬೊಟ್ಟು ಮಾಡಿದ ಸಿದ್ದರಾಮಯ್ಯ, ಪ್ರಲ್ಹಾದ್ ಜೋಶಿ ಕಿಡಿ
ಕರ್ನಾಟಕಕ್ಕೆ ಅನುದಾನ ಬಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದು, ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕತೆ ಹದಗೆಟ್ಟಿದೆ. 80 ಸಾವಿರ ಕೋಟಿ ಸಾಲ ಏರಿಕೆಯಾಗಿದೆ. ಕೇಂದ್ರದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 22: ಕರ್ನಾಟಕಕ್ಕೆ ಬರಬೇಕಾಗಿದ್ದ ಅನುದಾನ ಬರುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಆದರೆ ಇದೇ ಅನುದಾನ ಸಮರಕ್ಕೆ ಮತ್ತೆ ಜೀವ ಸಿಕ್ಕಿದೆ. ಮಂಗಳವಾರ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಸ್ತಾಪಿಸಿದ ವಿಷಯ ಇಂದು ಮತ್ತಷ್ಟು ಕಿಚ್ಚು ಹಚ್ಚಿದೆ. ಸದ್ಯ ಈ ವಿಚಾರವಾಗಿ ಧ್ವನಿ ಎತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ರಾಜ್ಯ ಸರ್ಕಾರ ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಹಾಕಿಕೊಂಡಿದ್ದು, ಕೇಂದ್ರದ ವಿರುದ್ಧ ಮಾತನಾಡುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ, ರಾಜ್ಯದ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿ, ಆರ್ಥಿಕ ಸ್ಥಿತಿಗತಿಗಳನ್ನು ಹಳ್ಳಕ್ಕೆ ತಳ್ಳಿ, ಇಂದು ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡಿ ನಿಂತಿದೆ. ರಾಜ್ಯಕ್ಕೆ ಅನುದಾನ ಇಲ್ಲ ಎಂದು ಆರೋಪ ಮಾಡುವ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಪಥಸಂಚಲನ ದಿನವೇ ದಲಿತ ಸಂಘಟನೆ ರ್ಯಾಲಿ ಬಗ್ಗೆ ಕೇಂದ್ರ ಸಚಿವ ಜೋಶಿ ಹೇಳಿದ್ದೇನು?
ಸುಮಾರು 30ಕ್ಕೂ ಹೆಚ್ಚು ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ, ರಾಜ್ಯದ ಜನರ ರಕ್ತ ಹೀರುತ್ತಿರುವ ಕಾಂಗ್ರೆಸ್ ಪಕ್ಷ, ರಾಜ್ಯಕ್ಕೆ ಬರುತ್ತಿರುವ ಎಲ್ಲಾ ಹಣವನ್ನು ಅವೈಜ್ಞಾನಿಕ ಗ್ಯಾರಂಟಿಗಳಿಗೆ ಬಳಸಿಕೊಳ್ಳುವ ಮೂಲಕ ಸುಭೀಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಹಾಳುಗೆಡವಿದೆ.
80 ಸಾವಿರ ರೂ ಕೋಟಿಗಳಷ್ಟು ಸಾಲ ಏರಿಕೆ
ಹೆಚ್ಚುವರಿ ಆದಾಯವಾಗಿದ್ದ ರಾಜ್ಯದಲ್ಲಿ ಇಂದು 80 ಸಾವಿರ ರೂ ಕೋಟಿಗಳಷ್ಟು ಸಾಲ ಏರಿಕೆ, 8 ಲಕ್ಷ ಕೋಟಿಗೂ ಅಧಿಕ ಆರ್ಥಿಕ ಹೊರೆ, ಬಂಡವಾಳ ಶಾಹಿಗಳು ರಾಜ್ಯದಿಂದ ದೂರು ಹೋಗುವ ಪ್ರಸಂಗಕ್ಕೆ ಕಾರಣೀಭೂತರಾಗಿ ಇಂದು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ದೇಶದಲ್ಲಿ 60 ವರ್ಷಗಳ ಕಾಲ ಆಡಳಿತ ನಡೆಸಿದ ಯುಪಿಎ, ತನ್ನ ಅವಧಿಯಲ್ಲಿ 27 ಕ್ಕೂ ಹೆಚ್ಚು ರೀತಿಯ ತೆರಿಗೆಗಳನ್ನು, ಕಂಡ ಕಂಡ ಹಾಗೆ ಜನರ ಮೇಲೆ ವಿಧಿಸಿ, ಜನರ ಬದುಕನ್ನೇ ಮೂರಾಬಟ್ಟೆ ಮಾಡಿ, ಬೀದಿಗೆ ತಳ್ಳಿದ ದಿನಗಳು ಇತಿಹಾಸ. ಆದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಿ, 99% ವಸ್ತುಗಳ ಮೇಲಿನ ತೆರಿಗೆಯನ್ನು ಶೂನ್ಯ ಅಥವಾ 5% ಕ್ಕೆ ಇಳಿಸಿದೆ. ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಹೆಚ್ಚಿಸಿದೆ ಎಂದರು.
ಇದನ್ನೂ ಓದಿ: ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಬಾರದು, ಎಲ್ಲರಿಗೂ ಸರಿಸಮಾನವಾಗಿ ಹಂಚಬೇಕು: ಸಿಎನ್ ಬಾಲಕೃಷ್ಣ
ದುರಾಡಳಿತದಿಂದ ರಾಜ್ಯವನ್ನು ಸಿಎಂ ಸಿದ್ದರಾಮಯ್ಯನವರು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. 2023-24ರಲ್ಲಿ ಸಿಎಜಿ ವರದಿಯಲ್ಲಿ ರಾಜ್ಯ ಮಾಡಿದ ಸಾಲವು 63 ಸಾವಿರ ಕೋಟಿಗಳಷ್ಟಿಗೆ ಏರಿಕೆ ಆಗಿದೆ, ಅಲ್ಲದೆ ಮೂಲಸೌಕರ್ಯ ನಿಧಿಯಿಂದ ಇತರ ಯೋಜನೆಗಳಿಗೆ ತಿರುಗಿಸಲ್ಪಟ್ಟಿರುವುದು ಬಹಿರಂಗವಾಗಿದೆ. ಇದು ನಿಮ್ಮ ಸರ್ಕಾರದ ಕೊಡುಗೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



