ಬಿಜೆಪಿ ಸದಸ್ಯತ್ವ ಅಭಿಯಾನ: ಕಾರ್ಯಕರ್ತರಿಗೆ ಟಾರ್ಗೆಟ್ ನೀಡಿದ ಆರ್ ಅಶೋಕ್
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಕಾರ್ಯಕರ್ತರಿಗೆ ಟಾರ್ಗೆಟ್ ನೀಡಿದರು.
ಬೆಂಗಳೂರು, ಸೆಪ್ಟೆಂಬರ್ 04: ಬಿಜೆಪಿ (BJP) ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆತಿದೆ. ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಮಾತನಾಡಿ, ಈ ಬಾರಿ ಎಷ್ಟು ಮತ ಬಿಜೆಪಿಗೆ ಬಂದಿದೆ ಅದರಲ್ಲಿ ಶೇ.75 ರಷ್ಟು ಜನರು ಸದಸ್ಯರಾಗಬೇಕು ಎಂದು ಹೇಳಿದರು. ಬಿಜೆಪಿಯಲ್ಲಿ ಉಚಿತವಾಗಿ ಸದಸ್ಯತ್ವ ಮಾಡಿಕೊಳ್ಳುತ್ತದೆ. ಬಿಜೆಪಿ ಜೀವ ಇರುವುದೇ ಕಾರ್ಯಕರ್ತರಲ್ಲಿ ಎಂದರು.
ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರು ಬಿಜೆಪಿ ಸದಸ್ಯತ್ವ ಪಡೆದರು. ಎಲ್ಲರೂ 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಅಥವಾ ಈ ಕೆಳಗಿನ ರೆಫರಲ್ ಲಿಂಕ್ ಬಳಸಿ https://t.co/LAoeyYIcLQ ಬಿಜೆಪಿ ಸದಸ್ಯರಾಗಿ ವಿಕಸಿತ ಭಾರತ ನಿರ್ಮಾಣದ ಪ್ರಧಾನಿಗಳ ಸಂಕಲ್ಪಕ್ಕೆ ಭಾಗೀದಾರರಾಗಿ.#BJPMembershipDrive #SadasyataAbhiyan2024 pic.twitter.com/bFNDoqOpXc
— BJP Karnataka (@BJP4Karnataka) September 4, 2024
ಕಾಂಗ್ರೆಸ್ನವರಿಗೆ ಸದಸ್ಯರು ಎಷ್ಟಿದ್ದಾರೆ ಎಂಬುದು ಮುಖ್ಯ ಅಲ್ಲ, ಕುಟುಂಬ ಇದೆಯೋ ಇಲ್ಲವೋ ಎನ್ನುವುದೇ ಮುಖ್ಯ ಅವರಿಗೆ. ರಾಹುಲ್ ಗಾಂಧಿ ದೇಶ ಬಿಟ್ಟು ಹೋದರೆ ಏನು ಕಥೆ? ಅವರದ್ದು ಲೀಡರ್ ಬೇಸ್ ಪಕ್ಷ. ಕಾಂಗ್ರೆಸ್ನವರು 1 ರೂ. ನೀಡಿ ಸದಸ್ಯತ್ವ ಮಾಡಿಕೊಳ್ಳುತ್ತಿದ್ದರು. ಹೆಚ್ಚು ಸದಸ್ಯತ್ವ ಆಗಿದೆ ಎಂದು ತೋರಿಸಲು ಈ ತರಹ ಮಾಡುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ದೇಶವು ‘ಜಗತ್ ಒಂದೇ ಭಾರತ್’ ಧ್ಯೇಯದೊಂದಿಗೆ ಸಾಗುತ್ತಿದೆ, ಎಲ್ಲರೂ ಬಿಜೆಪಿ ಸದಸ್ಯರಾಗಿ ಎಂದ ಬಿವೈ ವಿಜಯೇಂದ್ರ
ದೇಶದ ಹಿತಕ್ಕಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ: ಸುಧಾಕರ ರೆಡ್ಡಿ
ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ, ಕಾರ್ಯಕರ್ತರೇ ಪಕ್ಷದ ಬುನಾದಿ. ದೇಶದ ಹಿತಕ್ಕಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ. ಕಾಂಗ್ರೆಸ್ ಒಂದು ಕುಟುಂಬಕ್ಕೆ ಮೀಸಲಾದ ಪಕ್ಷ. ಕುಟುಂಬ ಮೊದಲು, ಪಕ್ಷ ನಂತರ, ದೇಶ ಕೊನೆಗೆ ಇದು ಕಾಂಗ್ರೆಸ್ ನೀತಿ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ರೈತರಿಗೆ ನೀಡಬೇಕಾದ ಹಾಲಿನ ದರ ಕಡಿತ ಮಾಡಿದೆ. ಮುಡಾ ಸೇರಿದಂತೆ ಎಲ್ಲೆಡೆ ಹಗರಣ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲು ಅರ್ಹರಲ್ಲ. ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ವಾಗ್ದಾಳಿ ಮಾಡಿದರು.
ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ನವಚೈತನ್ಯ ಸಿಕ್ಕಿದೆ: ನಾರಾಯಣಸ್ವಾಮಿ
ಯಡಿಯೂರಪ್ಪನವರ ಹೋರಾಟದ ಫಲವಾಗಿ ಪಕ್ಷ ಬೆಳೆದಿದ್ದನ್ನು ನೋಡಿದ್ದೇವೆ. ಬಿವೈ ವಿಜಯೇಂದ್ರ ಅವರು ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ನವಚೈತನ್ಯ ಸಿಕ್ಕಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಲೆಕ್ಕಕ್ಕೇ ಇಲ್ಲದ ಪಕ್ಷವಾಗಿತ್ತು, ಅಲ್ಲಿ ಪ್ರಾಬಲ್ಯ ಪಡೆಯುತ್ತಿದ್ದೇವೆ. ಮೇಲು ಕೀಳು ಎಂಬ ಭೇದಭಾವ ಇಲ್ಲದೇ ಕೆಲಸ ಮಾಡಬೇಕಿದೆ. ಮನೆ ಮನೆಗೆ ಹೋಗಿ ಸದಸ್ಯತ್ವ ಅಭಿಯಾನ ಮಾಡೋಣ. ರಾಜ್ಯದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂದು ಗೊತ್ತಿದೆ. ಯಾವ ಸಂದರ್ಭದಲ್ಲೂ ಚುನಾವಣೆ ಎದುರಿಸಲು ಸಂದರ್ಭ ಬರಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಸಂಸದರಾದ ಪಿ.ಸಿ. ಮೋಹನ್, ಗೋವಿಂದ ಕಾರಜೋಳ , ಶಾಸಕ ಡಾ. ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ