ಕುರ್ಚಿ ಕದನ: ಶಾಸಕ ಇಕ್ಬಾಲ್ ಹುಸೇನ್ ಮಾತನ್ನು ಯಾರು ನಂಬಬೇಡಿ; ಡಿಕೆ ಶಿವಕುಮಾರ್
ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಜೋರಾಗಿದೆ. ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಸ್ಫೋಟಕ ಹೇಳಿಕೆ ಸದ್ಯ ಸಂಚಲನ ಸೃಷ್ಟಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಶಾಸಕ ಇಕ್ಬಾಲ್ ಹುಸೇನ್ಗೆ ಮಾತಿನ ಚಟ. ಯಾರು ಅವನ ಮಾತನ್ನು ನಂಬಲು ಹೋಗಬೇಡಿ ಎಂದು ಹೇಳಿದ್ದಾರೆ.

ದೇವನಹಳ್ಳಿ, ಡಿಸೆಂಬರ್ 13: ರಾಜ್ಯ ಕಾಂಗ್ರೆಸ್ (congress) ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಾತ್ರ ನಿಲ್ಲುತ್ತಿಲ್ಲ. ದಿನಕ್ಕೊಬ್ಬರ ಹೇಳಿಕೆ ನಾನಾ ಊಹಾಪೋಹ ಸೃಷ್ಟಿಸುತ್ತಿವೆ. ಇದೀಗ ಡಿಕೆ ಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್, ಜನವರಿ 6ರಂದು ಡಿ.ಕೆ.ಶಿವಕುಮಾರ್ (DK Shivakumar) ಸಿಎಂ ಆಗುತ್ತಾರೆ ಎಂದು ನಾಯಕತ್ವ ಬದಲಾವಣೆ ಚರ್ಚೆಗೆ ದೊಡ್ಡ ತಿರುವು ಕೊಟ್ಟಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಮಾತನ್ನು ಯಾರು ನಂಬಲು ಹೋಗಬೇಡಿ. ಅವನ ಮೇಲೆ ಮೊದಲು ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ದೇವನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಇಕ್ಬಾಲ್ ಹುಸೇನ್ಗೆ ಮಾತಿನ ಚಟ. ಯಾರು ಅವನ ಮಾತನ್ನು ನಂಬಲು ಹೋಗಬೇಡಿ ಎಂದು ಸಿಡಿಮಿಡಿಗೊಂಡಿದ್ದಾರೆ.
ನನ್ನ ಹೇಳಿಕೆಗೆ ಬದ್ಧ ಎಂದ ಶಾಸಕ ಇಕ್ಬಾಲ್ ಹುಸೇನ್
ಇನ್ನು ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 140 ಶಾಸಕರಿಗೂ ಡಿ.ಕೆ.ಶಿವಕುಮಾರ್ ಅಧ್ಯಕ್ಷರು. ಮೊದಲು ನೋಟಿಸ್ ಕೊಟ್ಟಿದ್ದಾರೆ, ಈಗಲೂ ಒಂದೆರಡು ಕೊಡಲಿ. ನೋಟಿಸ್ ಕೊಟ್ಟರೆ ನಾನು ಪಾಲನೆ ಮಾಡಬೇಕಾಗುತ್ತೆ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ
ಈ ವಿಚಾರವಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಾನು ಹೈಕಮಾಂಡ್ ಹೇಳಿದ್ದಂತೆ ಕೇಳುತ್ತೇನೆ ಎಂದಿದ್ದಾರೆ. ಆ ಮೂಲಕ ಸಿಎಂ ಬದಲಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಪರಮೇಶ್ವರ್ ಸಿಎಂ ಆಗಲಿ ಎಂದ ಸಚಿವ ವಿ.ಸೋಮಣ್ಣ
ಕಾಂಗ್ರೆಸ್ನಲ್ಲಿ ಸದ್ಯ ಸಿದ್ದರಾಮಯ್ಯನಾ? ಅಥವಾ ಹೊಸ ನಾಯಕತ್ವ ಡಿಕೆಯದ್ದಾ? ಎನ್ನುವ ಗೊಂದಲ ಕೋಲಾಹಲವನ್ನೇ ಎಬ್ಬಿಸುತ್ತಿದೆ. ಈ ನಡುವೆ ಕೇಂದ್ರ ಸಚಿವ ವಿ.ಸೋಮಣ್ಣ, ಪರಮೇಶ್ವರ್ ಸಿಎಂ ಆಗಲಿ ಎಂಬ ಅಭಿಲಾಸೆ ಹೊರಹಾಕಿದ್ದಾರೆ.
ಡಿಕೆ ಶಿವಕುಮಾರ್ಗೆ ಪಟ್ಟಾಭಿಷೇಕವಾದರೆ ನಾನೇ ಮೊದಲು ಖುಷಿ ಪಡೋದು: ಶಿವಗಂಗಾ ಬಸವರಾಜ್
ದಾವಣಗೆರೆಯಲ್ಲಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ನೀಡಿದ್ದು, ಜ.6ರಂದು ಡಿಕೆ ಶಿವಕುಮಾರ್ಗೆ ಪಟ್ಟಾಭಿಷೇಕ ಆದರೆ ನಾನೇ ಮೊದಲು ಖುಷಿ ಪಡೋದು. ಡಿ.ಕೆ.ಶಿವಕುಮಾರ್ ಅವರಿಗೆ 6 ಹಾಗೂ 9 ಅದೃಷ್ಟ ಸಂಖ್ಯೆಗಳು. ಈ ವೇಳೆ ಡಿಕೆ ಶಿವಕುಮಾರ್ ಸಿಎಂ ಆದರೆ ನಾನೇ ಮೊದಲು ಖುಷಿ ಪಡೋದು. ಡಿಕೆ ಶಿವಕುಮಾರ್ ನನ್ನ ಆರಾಧ್ಯ ದೈವ ಎಂದಿದ್ದಾರೆ.
ಇದನ್ನೂ ಓದಿ: ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಸ್ಫೋಟಕ ಹೇಳಿಕೆ ನೀಡಿದ ಶಾಸಕ ಇಕ್ಬಾಲ್ ಹುಸೇನ್
ಕಾಂಗ್ರೆಸ್ನಲ್ಲಿ ಎಲ್ಲವೂ ಅಂದುಕೊಂಡಂತಿಲ್ಲ. ಮೇಲ್ನೋಟಕ್ಕೆ ಸಿಎಂ ಹಾಗೂ ಡಿಸಿಎಂ ನಾವು ಜೋಡೆತ್ತು, ಜೊತೆ ಜೊತೆಗೆ ಇದ್ದೇವೆ ಎನ್ನುವ ಸಂದೇಶ ಸಾರುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ಹೇಳಿಕೆಗಳು, ಅದಕ್ಕೆ ಬರುವ ಪ್ರತಿಕ್ರಿಯೆ ಬೆಳವಣಿಗೆಗಳನ್ನ ಹೊಸ ದಿಕ್ಕಿಗೆ ಕೊಂಡೊಯ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Sat, 13 December 25



