ಕಲಬುರಗಿ ಪ್ರಭಾವಿ ನಾಯಕ, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ಪಡೆ
ತಮ್ಮ ಸಹೋದರ ನಿತೀನ್ ಗುತ್ತೇದಾರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದರಿಂದ ಅಸಮಾಧಾನಗೊಂಡು ಮಾಲಿಕಯ್ಯ ಗುತ್ತೇದಾರ್ ಇಂದು ಶುಕ್ರವಾರ (ಏ.19) ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಬೆಂಗಳೂರು, ಏಪ್ರಿಲ್ 19: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ (BJP) ಮತ್ತೊಂದು ಹಿನ್ನೆಡೆ ಉಂಟಾಗಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಮಾಜಿ ಸಚಿವ ಮತ್ತು ಕಲಬುರಗಿಯ ಪ್ರಭಾವಿ ನಾಯಕ ಮಾಲಿಕಯ್ಯ ಗುತ್ತೇದಾರ್ (Malikayya Guttedar) ಬಿಜೆಪಿ ತೊರೆದು ಮರಳಿ ಗೂಡಿಗೆ ಕಾಂಗ್ರೆಸ್ (Congress) ಸೇರ್ಪಡೆಯಾಗಿದ್ದಾರೆ. ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸಮ್ಮುಖದಲ್ಲಿ ಸೇರಿದರು. ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮಾಲಿಕಯ್ಯ ಗುತ್ತೇದಾರ, ಬಿಜೆಪಿ ನನ್ನನ್ನು ನಡೆಸಿಕೊಂಡ ಬಗ್ಗೆ ಬಹಳ ನೋವಿದೆ. ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆಂಬ ಅನುಭವ ಆಗಿದೆ. ಎಂ.ವೈ.ಪಾಟೀಲ್ ಕೂಡ ಕಾಂಗ್ರೆಸ್ಗೆ ಬರ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ರಾಜ್ಯದ ಉದ್ದಗಲಕ್ಕೂ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಯವರಿಗೆ ಧ್ವನಿ ಇಲ್ಲ, ಧ್ವನಿ ಕಳೆದುಕೊಂಡಿದ್ದಾರೆ. ಷರತ್ತು ಇಲ್ಲದೆ ಪಕ್ಷಕ್ಕೆ ಬರುವವರಿಗೆ ನಮ್ಮ ಸ್ವಾಗತ. ಸ್ಥಳೀಯ ಮಟ್ಟದಲ್ಲಿ ಯಾರು ಬೇಕಾದರೂ ಬರಬಹುದು.ಜೆಡಿಎಸ್ ಸಿದ್ಧಾಂತ ಬದಲಾಗುತ್ತಿದೆ. ಅದಕ್ಕಾಗಿ ಹಲವು ನಾಯಕರು ಕಾಂಗ್ರೆಸ್ಗೆ ಬರುತ್ತಿದ್ದಾರೆ ಎಂದು ಹೇಳಿದರು.
ನನ್ನದು ಮತ್ತು ಮಾಲೀಕಯ್ಯ ಗುತ್ತೇದಾರ್ ಸಂಬಂಧ 35 ವರ್ಷ ಹಳೆಯದ್ದು, ಮಾಲೀಕಯ್ಯ ಗುತ್ತೇದಾರ್ ಅವರು ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಯಾವುದೇ ಷರತ್ತು ಇಲ್ಲದೆಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.
ಇದನ್ನೂ ಓದಿ: ಮೋದಿ ಹೆಸರಲ್ಲೇ ಗೆಲ್ಲಬೇಕು, ಹಾಗಾದ್ರೆ ನೀವ್ಯಾಕೆ ಇದ್ದೀರಪ್ಪಾ; ಕಟೀಲ್ ಎದುರಲ್ಲೇ ಗುತ್ತೇದಾರ್ ವಾಗ್ದಾಳಿ
ದೇಶದಲ್ಲಿ ಬಿಜೆಪಿ 200 ಸೀಟೂ ಕೂಡ ದಾಟುವುದಿಲ್ಲ ಎಂಬ ಮಾಹಿತಿ ಇದೆ. ದಕ್ಷಿಣ ಭಾರತದ ಎಲ್ಲ ಕಡೆ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಸಿಂಗಲ್ ಡಿಜಿಟ್ಗೆ ಉಳಿದುಕೊಳ್ಳುತ್ತಾರೆ. ಕರ್ನಾಟಕ ತೆಲಂಗಾಣ ಸೇರಿ ಎಲ್ಲ ಕಡೆಯೂ ಬಿಜೆಪಿ ಸಿಂಗಲ್ ಡಿಜಿಟ್ಗೆ ಉಳಿಯಲಿದೆ. ಇದು ನಮ್ಮ ಪಕ್ಷಕ್ಕೆ ಸಿಕ್ಕಿರುವ ಮಾಹಿತಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,ಮಾಲೀಕಯ್ಯ ಗುತ್ತೇದಾರ್ ಚಿರಪರಿಚಿತರು ಹಾಗೂ ಆತ್ಮೀಯರು. ಮಾಲೀಕಯ್ಯ ಗುತ್ತೇದಾರ್ ತರಹದವರಿಗೆ ಬಿಜೆಪಿಯಲ್ಲಿ ಇರುವುದಕ್ಕೆ ಸಾಧ್ಯ ಆಗುವುದಿಲ್ಲ.ಇವರು ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು. ಮಾಲೀಕಯ್ಯ ನಮ್ಮ ಪಕ್ಷಕ್ಕೆ ಬಂದಿದ್ದರಿಂದ ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ರಾಜಕೀಯವಾಗಿ ಪರಿಣಾಮ ಉಂಟಾಗುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Fri, 19 April 24