AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಅಕ್ರಮ ಆರೋಪ ಪ್ರಕರಣ: ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ, ಸಿಎಂ ಮನೆಗೆ ಮುತ್ತಿಗೆ ಯತ್ನ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸೈಟುಗಳ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿದೆ. ಅಲ್ಲದೆ ಸಿಎಂ ಪತ್ನಿ ಹೆಸರಿನಲ್ಲೂ ಜಮೀನು ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು.

ವಿವೇಕ ಬಿರಾದಾರ
|

Updated on: Jul 03, 2024 | 2:00 PM

Share

ಬೆಂಗಳೂರು, ಜುಲೈ 03: ಮೈಸೂರು ಅಭಿವೃದ್ಧಿ ಪ್ರಾಧಿಕಾರ (Muda)ದಲ್ಲಿನ ಬಹು ಕೋಟಿ ಅಕ್ರಮ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddramaiah) ಅವರ ಪತ್ನಿಯ ಹೆಸರು ಕೇಳಿಬಂದಿರುವುದು ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿದೆ. ಸ್ವತಃ ಸಿಎಂ ಪತ್ನಿ ಹೆಸರು ಥಳಕು ಹಾಕಿಕೊಂಡಿರುವುದರಿಂದ, ಬಿಜೆಪಿ ನಾಯಕರು ಇಂದು (ಜು.03) ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆ ವೇಳೆ ತಳ್ಳಾಟ, ನೂಕಾಟ ನಡೀತು.

ವಿಪಕ್ಷ ನಾಯಕರು ಐದು ತಂಡಗಳಾಗಿ ಭ್ರಷ್ಟ ಕಾಂಗ್ರೆಸ್​ ಸರ್ಕಾರ ಅಂತ ಎಲ್ಲರೂ ಘೋಷಣೆ ಕೂಗುತ್ತಾ, , ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಒಂದು ಕಡೆ ಅರವಿಂದ್​ ಬೆಲ್ಲದ​, ಆರಗ ಜ್ಞಾನೇಂದ್ರ ತಂಡ ಹೊರಟ್ಟಿತ್ತು. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಂಡ, ಇನ್ನು ಆರ್​.ಅಶೋಕ್​, ಸುರೇಶ್​ ಕುಮಾರ್ ತಂಡ ಕೂಡ ಮುತ್ತಿಗೆ ಹಾಕಲು ಹೊರಟರು. ಇತ್ತ ಸಿ.ಟಿ.ರವಿ ಅವರ ತಂಡ ಕೂಡ ಹೊರಟಿತ್ತು. ಆದರೆ ಪ್ರತಿಭಟನೆಯನ್ನು ತಡೆಯಲು ನಿಂತಿದ್ದ ಪೊಲೀಸರು, ಸಿಎಂ ಮನೆಗೆ ಮುತ್ತಿಗೆ ಹಾಕುವ ಮುನ್ನವೇ ವಶಕ್ಕೆ ಪಡೆದರು.

ಬೆಂಗಳೂರಿನ ಶಿವಾನಂದ ಸರ್ಕಲ್​ ಬಳಿ ಪೊಲೀಸರು, ಬಿಜೆಪಿ ಕಾರ್ಯಕರ್ತರ ಮಧ್ಯೆ ತಳ್ಳಾಟ, ನೂಕಾಟ ನಡೆಯಿತು. ಪೊಲೀಸರು ಆರ್​.ಅಶೋಕ್ ಅವರನ್ನು ಜೀಪ್​ನಲ್ಲಿ ಕರೆದುಕೊಂಡು ಹೋದರು. ಬಿ.ವೈ.ವಿಜಯೇಂದ್ರ ಹಾಗೂ ಸಿ.ಟಿ.ರವಿ ಅವರನ್ನು ಬಸ್​ನಲ್ಲಿ ಕರೆದುಕೊಂಡ ಹೋದರು.

ಕಾಂಗ್ರೆಸ್​ ಸರ್ಕಾರ ಲೂಟಿ ಹೊಡೆಯೋಕೆ ಹೆಬ್ಬಾಗಿಲನ್ನೇ ತೆರೆದಿದೆ. ವಾಲ್ಮೀಕಿ ಹಗರಣದಲ್ಲಿ ನಮ್ಮ ಪ್ರತಿಭಟನೆಯ ಫಲವಾಗಿ 1 ವಿಕೆಟ್ ಹೋಗಿದೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್ ಕಿಡಿಕಾರಿದರು.

ಮುಂದೆ ಸಚಿವರು ಹಾಗೂ ಸಿಎಂ ಬುಡಕ್ಕೂ ಮುಡಾ ಹಗರಣ ಬರುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗುಡುಗಿದರು. ಸಚಿವ ಭೈರತಿ ಸುರೇಶ್​ ಅಧಿಕಾರಿಗಳನ್ನ ವರ್ಗಾವಣೆ ಮಾಡದೆ, ಸಸ್ಪೆಂಡ್​ ಮಾಡಿದ್ದಾರೆ. ಕಡತಗಳ ಜೊತೆ ಬೆಂಗಳೂರಿಗೆ ಓಡಿ ಬಂದಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಮುಡಾ ಅಕ್ರಮ ಆರೋಪ: ಬಾಮೈದ ಜಮೀನನ್ನ ಅರಿಶಿನ, ಕುಂಕಮ ರೀತಿಯಲ್ಲಿ ನನ್ನ ಹೆಂಡಿತಿಗೆ ಗಿಫ್ಟ್​​ ನೀಡಿದ್ದಾನೆ; ಸಿದ್ದರಾಮಯ್ಯ

ಮುಡಾ ಹಗರಣದಲ್ಲಿ ನೇರವಾಗಿಯೇ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಅಂತಾ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ ಆರೋಪ ಮಾಡಿದರು.

ಲಾಭದ ಆಸೆಗೆ ಸತ್ಯವನ್ನ ಮುಚ್ಚಿಹಾಕೋ ಸಂಚು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ಆರೋಪಿಸಿದರು. 3 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನ ನಿಯಮ ಬಾಹೀರವಾಗಿ ಹಂಚಿಕೆ ಮಾಡಿದ್ದಾರೆ ಹೊಸ ಬಾಂಬ್​ ಸಿಡಿಸಿದ್ದರು.

ಸಮಾಜವಾದಿ ಮುಖವಾಡ ಹಾಕಿಕೊಂಡಿರುವ ಕಡುಭ್ರಷ್ಟ ಸಿದ್ದರಾಮಯ್ಯ: ಬಿಜೆಪಿ

“ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹೊಸ ಗಾದೆ ಮಳ್ಳ ಮಳ್ಳ ಮುಡಾ ಹಗರಣದಲ್ಲಿ ನಿನ್ನ ಪಾಲೆಷ್ಟು ಅಂದರೆ, ತನ್ನ ಪತ್ನಿಯ ತವರು ಮನೆಯಿಂದ ಬಂದ ಭೂಮಿಯಷ್ಟು ಅಂದನಂತೆ.

ಮಳ್ಳ ಸಿದ್ದರಾಮಯ್ಯ ನವರೇ, ಮುಡಾದಲ್ಲಿ 50: 50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನವನ್ನು ರದ್ದುಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೈಸೂರಿನ ಜಿಲ್ಲಾಧಿಕಾರಿಗಳು ಕಳೆದ ಒಂದು ವರ್ಷದಿಂದ ನಿರಂತರವಾಗಿ 15 ಬಾರಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರೂ ನಿಮ್ಮ ‘ಆಪ್ತ’ ಸಚಿವರು ಏಕೆ ಕ್ರಮ ಕೈಗೊಳ್ಳಲಿಲ್ಲ?

ಅಸಲಿಗೆ ಸಚಿವ ಸಂಪುಟದ ಅನುಮೋದನೆ ಇಲ್ಲದೆ 50:50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲು ಅನುಮತಿ ನೀಡಿದ್ದಾದರೂ ಯಾರು? ಯಾರಿಗೆ ಲಾಭ ಮಾಡಿಕೊಡಲು ಈ ಕ್ರಮ?

ಈ ಹಿಂದೆ ಭೂಸ್ವಾಧೀನವಾಗಿರುವ ಪ್ರಕರಣಗಳಲ್ಲಿ ಈಗ ಪರಿಹಾರ ವಿತರಣೆ, ಬದಲಿ ನಿವೇಶನ, ತುಂಡು ಜಾಗ ಮಂಜೂರತಿಯನ್ನು ಪ್ರಾಧಿಕಾರದ ಅನುಮತಿ ಪಡೆಯದೆ ಮಾಡಿರುವುದು ನಿಯಮ ಲೋಪವಷ್ಟೇ ಅಲ್ಲದೆ ಪ್ರಾಧಿಕಾರಕ್ಕೆ ಅಪಾರ ಹಣಕಾಸಿನ ನಷ್ಟ ಆಗಿದೆ. ಇದಕ್ಕೆ ಯಾರು ಹೊಣೆ?

ಕೆಸರೆ ಗ್ರಾಮದಲ್ಲಿ ತಮ್ಮ ಧರ್ಮ ಪತ್ನಿ ಅವರಿಗೆ ಸೇರಿದ್ದ 3 ಎಕರೆ 16 ಗುಂಟೆ ಜಮೀನಿನ ಬದಲಾಗಿ ಮೈಸೂರು ನಗರದ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,824 ಚದರ ಅಡಿ ವಿಸ್ತೀರ್ಣದ ದುಬಾರಿ ಬೆಲೆ ಬಾಳುವ 14 ನಿವೇಶನಗಳನ್ನು ತಮ್ಮ ಪತ್ನಿ ಹೆಸರಿಗೆ ಮಂಜೂರು ಮಾಡಿಸಿಕೊಂಡಿದ್ದೀರಲ್ಲ ಇದು ಭ್ರಷ್ಟಾಚಾರವಲ್ಲದೆ ಮತ್ತೇನು ಸಿದ್ದರಾಮಯ್ಯನವರೇ?

ಸಮಾಜವಾದಿ ಮುಖವಾಡ ಹಾಕಿಕೊಂಡಿರುವ ಕಡುಭ್ರಷ್ಟ ಮಜಾವಾದಿ ಅಂದರೆ ಅದು ಸಿಎಂ ಸಿದ್ದರಾಮಯ್ಯ. ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಲೂಟಿಕೋರ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯ.” ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ