Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್ಲಿಯಿಂದ ಬಂದ ನಿಗಮ ಮಂಡಳಿ ಪಟ್ಟಿಯಲ್ಲಿ ಅಚ್ಚರಿ ಹೆಸರು, ಸಿಎಂ, ಡಿಕೆಶಿ ಶಾಕ್!

ನಿಗಮ ಮಂಡಳಿ ನೇಮಕಾತಿ ಎಲ್ಲವೂ ಫೈನಲ್ ಆಯ್ತು. ಇನ್ನೇನು ಪಟ್ಟಿ ಪ್ರಕಟ ಮಾಡುವುದೊಂದೇ ಬಾಕಿ ಎನ್ನುವಾಗಲೇ ಮತ್ತಷ್ಟು ಗೊಂದಲಗಳು ನಿರ್ಮಾಣವಾಗಿವೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ಗೆ ಮಾಹಿತಿ ಇಲ್ಲದೇ ದೆಹಲಿಯಿಂದ ಬಂದ ಪಟ್ಟಿಯಲ್ಲಿ ಕೆಲ ಹೆಸರುಗಳನ್ನು ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದಿಲ್ಲಿಯಿಂದ ಬಂದ ನಿಗಮ ಮಂಡಳಿ ಪಟ್ಟಿಯಲ್ಲಿ ಅಚ್ಚರಿ ಹೆಸರು, ಸಿಎಂ, ಡಿಕೆಶಿ ಶಾಕ್!
Follow us
ರಮೇಶ್ ಬಿ. ಜವಳಗೇರಾ
|

Updated on: Jan 21, 2024 | 6:16 PM

ಬೆಂಗಳೂರು, ಜನವರಿ 21): ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಗಳ ಮಧ್ಯೆ ಕರ್ನಾಟಕ ಕಾಂಗ್ರೆಸ್​ನಲ್ಲಿ ಕೆಲ ಗೊಂದಲಗಳು ನಿರ್ಮಾಣವಾಗಿವೆ. ಅದರಲ್ಲೂ ಪ್ರಮುಖವಾಗಿ ನಿಗಮ ಮಂಡಳಿ ನೇಮಕಾತಿ ಹೈಕಮಾಂಡ್ ಹಾಗೂ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಹೈಕಮಾಂಡ್​ಗೆ ಕಳುಹಿಸದ ಹೆಸರುಗಳು ನಿಗಮ ಮಂಡಳಿ ನೇಮಕಾತಿ ಪಟ್ಟಿಯಲ್ಲಿ ಎಂಟ್ರಿಯಾಗಿದ್ದು, ಇದು ಸಿಎಂ, ಡಿಸಿಎಂ ಶಾಕ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಅಂಬಿಗರ ಚೌಡಯ್ಯ ಕಾರ್ಯಕ್ರಮಕ್ಕೆ ಹೋಗದೇ ತಾಜ್ ವೆಸ್ಟ್ ಎಂಡ್ ನಲ್ಲಿ ಸೇರಿ ಚರ್ಚಿಸಿದರು.

ದೆಹಲಿಯಿಂದ ಬಂದಿರುವ ನಿಗಮ ಮಂಡಳಿ ಪಟ್ಟಿ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಜೊತೆ ಮಾತುಕತೆ ನಡೆಸಿದರು. ಈ ವೇಳೆ ತಾವು ಕಳುಹಿಸದ ಪಟ್ಟಿಯಲ್ಲಿ ದೆಹಲಿಯಿಂದ ಬಂದಿರುವ ಕೆಲ ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿರುವುದಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿಗೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆ, ಕಾರಣವೇನು?

ಕಲಬುರಗಿ ಭಾಗದ ಕೆಲ ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿರುವುದಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಹಿತಿಯೇ ಇಲ್ಲದೇ ಅದು ಹೇಗೆ ಕೆಲ ಕಾರ್ಯಕರ್ತರ ಹೆಸರು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಭಾಗದ ಲಲಿತ್ ರಾಘವ್, ಸಿ ನರೇಂದ್ರ, ಮಝರ್ ಖಾನ್, ಜಗದೇವ್ ಗುತ್ತೆದಾರ್ ಅವರು ಹೆಸರು ನಿಗಮ ಮಂಡಳಿ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಬೇರೆ ನಾಯಕರ ಮೇರೆಗೆ ಈ ನಾಲ್ವರಿಗೆ ಕೆಸಿ ವೇಣುಗೋಪಾಲ ಅವರು ನಿಗಮ ಮಂಡಳಿ ಹಂಚಿಕೆ ಮಾಡಿ ಅಂತಿಮ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರವಾನಿಸಿದ್ದಾರೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಭಾಗದವರ ಹೆಸರು ಸೇರ್ಪಡೆ ಹಿಂದೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ತಮ್ಮ ಜಿಲ್ಲೆಯ ಕಾರ್ಯಕರ್ತರ ಹೆಸರು ಸೇರ್ಪಡೆ ಮಾಡಿಸಿದ್ರಾ? ಅಥವಾ ಪ್ರಿಯಾಂಕ್ ಖರ್ಗೆ ಶಿಫಾರಸ್ಸು ಮಾಡಿದ್ರಾ? ಹೀಗೆ ಹಲವು ಪ್ರಶ್ನೆಗಳುಗೆ ಎಡೆಮಾಡಿಕೊಟ್ಟಿವೆ.

ಒಟ್ಟಿನಲ್ಲಿ  ನಿಗಮ ಮಂಡಳಿ  ಪಟ್ಟಿಯನ್ನು ಸಿಎಂ ತಡೆಹಿಡಿದಿದ್ದಾರೆ. ಹೀಗಾಗಿ ನಿಗಮ ಮಂಡಳಿ ನೇಮಕಾತಿ ಪಟ್ಟಿ ಬಿಡುಗಡೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ