ಬಜೆಟ್​ ಮಂಡನೆ ಬಳಿಕ ಬಿಜೆಪಿ ನಾಯಕರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸಿದ್ದರಾಮಯ್ಯ

Karnataka Budget 2024: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಶುಕ್ರವಾರ) 2024-25ನೇ ಸಾಲಿನ 3,71,383 ಕೋಟಿ ರೂ. ಗಾತ್ರದ ಬಜೆಟ್‌ ಮಂಡನೆ ಮಾಡಿದ್ದಾರೆ. ಕಳೆದ ಸಾಲಿನಲ್ಲಿ ಇದರ ಗಾತ್ರ 3,27,747 ಕೋಟಿ ರೂ.ಗಳಾಗಿತ್ತು. ಇದರೊಂದಿಗೆ ಕಳೆದ ಬಜೆಟ್​ಗಿಂತ ಈ ಬಾರಿ ಬಜೆಟ್​ 43,636 ಕೋಟಿ ರೂ.ಹೆಚ್ಚಳವಾಗಿದೆ. ಇನ್ನು ಬಜೆಟ್​ ಬಗ್ಗೆ ವಿಪಕ್ಷಗಳು ಟೀಕಿಸಿವೆ. ಇನ್ನು ತಮ್ಮ ಬಜೆಟ್​ ಬಗ್ಗೆ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬಜೆಟ್​ ಮಂಡನೆ ಬಳಿಕ ಬಿಜೆಪಿ ನಾಯಕರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Feb 16, 2024 | 4:57 PM

ಬೆಂಗಳೂರು, (ಫೆಬ್ರವರಿ 16): ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaiah) ಅವರು ಇಂದು(ಶುಕ್ರವಾರ) 2024-25ನೇ ಸಾಲಿನ ಬಜೆಟ್​ (Karnataka Budget 2024)ಮಂಡಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಕಳೆದ ಬಜೆಟ್​​ಗಿಂತ 46,630 ಕೋಟಿ ರೂ. ಬಜೆಟ್​ ಗಾತ್ರ ಹೆಚ್ಚಳವಾಗಿದೆ. ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ದಿವಾಳಿ ಅಂತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೂ ನಾವು ಅನುದಾವನ್ನು ಕೊಟ್ಟಿದ್ದೇವೆ. ಬರ ಹಿನ್ನೆಲೆ ಕೇಂದ್ರದ ಬಳಿ 18,171 ಕೋಟಿ ರೂ. ಕೇಳಿದ್ದೇವೆ. ಇದುವರೆಗೂ ಕೇಂದ್ರದಿಂದ ಒಂದು ರೂಪಾಯಿ ಸಹ ಬಂದಿಲ್ಲ. ಇದುವರೆಗೂ ಒಂದು ಮೀಟಿಂಗ್​ ಕೂಡ ಮಾಡಿಲ್ಲ, ರಾಜ್ಯದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದಿಂದ ಇಲ್ಲಿವರೆಗೆ 1 ರೂಪಾಯಿ ಕೊಟ್ಟಿಲ್ಲ. ನಾವು ಸುಳ್ಳು ಹೇಳಿದ್ರೆ ರಾಜ್ಯಪಾಲರು ಓದುತ್ತಿದ್ದರಾ? ಬಜೆಟ್​ ಕೇಳುವುದಕ್ಕೆ ಆಗದೇ ವಿಲವಿಲ ಒದ್ದಾಡಿ ಎದ್ದೋದ್ರು. ಕೋಲೆ ಬಸವನ ತರ ಅಲ್ಲಾಡಿಸುತ್ತಾರೆ. ಆದ್ರೆ, ಅಲ್ಲಿ ಕೇಳಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರಕ್ಕೆ ಕೇಳಲ್ಲ. ಪಾರ್ಲಿಮೆಂಟ್​ನಲ್ಲಿ ಯಾವತ್ತಾದರೂ ಮಾತನಾಡಿದ್ದಾರಾ? ಇವರು ಎಂಪಿಗಳಾವುದಕ್ಕೇ ನಾಲಾಯಕ್ ಎಂದು ಕರ್ನಾಟಕ ಬಿಜೆಪಿ ಸಂಸದರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್​ ನೋಡಿಲ್ಲ: ಸಿದ್ದು ಬಜೆಟ್​ಗೆ ಯಡಿಯೂರಪ್ಪ ಕೆಂಡಾಮಂಡಲ

ಬಜೆಟ್​ ಕೇಳಬಾರದೆಂದು ಪ್ಲ್ಯಾನ್​ ಮಾಡಿಕೊಂಡು ಬಂದಿದ್ರು

ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಾವು ಅಧಿಕಾರಕ್ಕೆ ಬಂದು ಇನ್ನೂ 9 ತಿಂಗಳು ಕೂಡ ಆಗಿಲ್ಲ. ನಾವು ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಕೃಷಿ, ಗ್ರಾಮೀಣಾಭಿವೃದ್ಧಿ, ಇಂಧನ ಕ್ಷೇತ್ರಕ್ಕೆ ಹಣ ಒದಗಿಸಿದ್ದೇವೆ. ಬಜೆಟ್​​ನಲ್ಲಿ ಎಲ್ಲಾ ಸಮುದಾಯಗಳಿಗೂ ಶಕ್ತಿ ತುಂಬಲಾಗಿದೆ .ಬಜೆಟ್​ನಲ್ಲಿ ಏನಿಲ್ಲ ಏನಿಲ್ಲ ಎಂದು ಬಿಜೆಪಿಗರು ಹೇಳುತ್ತಾರೆ. ಅವರ ತಲೆಯಲ್ಲಿ ಏನಿಲ್ಲ. ಅವರ ತಲೆಯಲ್ಲಿ ಮಂಜು ತುಂಬಿದೆ ಕಾಮಾಲೆ ರೋಗದವರಿಗೆ ಕಾಣುವುದೆಲ್ಲ ಹಳದಿ ಎಂಬಂತೆ. ರಾಜಕೀಯ ಮಾಡಲಿ ಬೇಡ ಅನ್ನಲ್ಲ. ಟೀಕೆ, ಆರೋಪಗಳು ಆರೋಗ್ಯಕರವಾಗಿರಬೇಕು. ಬಿಜೆಪಿ ನಾಯಕರು ಏನಿಲ್ಲ ಏನಿಲ್ಲ ಎಂದು ಶುರುಮಾಡಿದ್ರು. ಬಜೆಟ್​ ಕೇಳಬಾರದೆಂದು ಪ್ಲ್ಯಾನ್​ ಮಾಡಿಕೊಂಡು ಬಂದಿದ್ರು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಬಿಜೆಪಿ ನಾಯಕರಿಗೆ ಸಿಎಂ ಚಾಟಿ

ವಸ್ತುಸ್ಥಿತಿ ಹೇಳಿದ್ರೆ ಇವರಿಗೆ ನುಂಗಲಾರದ ತುತ್ತು. ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಹೊದ್ದರು ಅಂತ ನಮ್ಮ ಹಳ್ಳಿಕಡೆ ಗಾದೆ ಹೇಳ್ತಾರೆ . ಸತ್ಯ ಹೇಳಿದ್ರೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ./ ಕರ್ನಾಟಕಕ್ಕೆ ಆದ ಅನ್ಯಾಯ ಹೇಳುವುದು ನನ್ನ ಜವಾಬ್ದಾರಿ, ಕರ್ತವ್ಯ. ಅವರು ಕೋಲೆ ಬಸವ ರೀತಿ ತಲೆ ಅಲ್ಲಾಡಿಸದೆ ಪಾರ್ಲಿಮೆಂಟಿನಲ್ಲಿ ಕೇಳಬೇಕಿತ್ತು. ಮುನಿಸ್ವಾಮಿ‌ ಏನಾದ್ರೂ ಕರ್ನಾಟಕಕ್ಕೆ ಅನ್ಯಾಯವಾದ ಬಗ್ಗೆ ಬಾಯಿ ಬಿಟ್ಟಿದ್ದಾರಾ? ಇಷ್ಟು ಕೊಡಬೇಕಿತ್ತು, ಇಷ್ಟು ಕೊಟ್ಟಿದ್ದಾರೆ ಅಂತ ಪಾರ್ಲಿಮೆಂಟಿನಲ್ಲಿ ಮಾತನಾಡಿದ್ದಾರಾ? ಎಂಪಿ ಆಗೋಕೆ ಲಾಯಕ್ಕಾ? ನಾಲಾಯಕ್ಕಾ? ಒಂದು ದಿನವೂ ಇವರು ಬಾಯಿ ಬಿಡಲಿಲ್ಲ. ಕೇಂದ್ರದಿಂದ ಬರುವ ಹಣ ನ್ಯಾಯಯುತವಾಗಿ ಕೇಳುವುದಕ್ಕೆ ಆಗಲ್ವಾ ಎಂದು ಚಾಟಿ ಬೀಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಏನು ಕೊಟ್ಟಿಲ್ಲ

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ನಾನು ಹೇಳಿದ್ನಾ? 5,300 ಕೋಟಿ ಘೋಷಣೆ ಮಾಡಿದ್ದು ಯಾರು? ಅವರೇ ಹೇಳಿದ್ರು ಆದರೆ, ಇವತ್ತಿನವರೆಗೂ ಏನೂ ಕೊಟ್ಟಿಲ್ಲ. ಬೊಮ್ಮಾಯಿ ಬಜೆಟ್​​ ಭಾಷಣ ಬೇಕಾದರೆ ತೆಗೆದು ನೋಡಿ. ಬಿಜೆಪಿ ನಾಯಕರು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. 2023-24ರಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಹೇಳಿದವರು ಇವರೇ. ಮೋದಿಗೆ ದೀರ್ಘದಂಡ ನಮಸ್ಕಾರ ಹಾಕಿದವರು ಇವರೇ. ಬಜೆಟ್ ಭಾಷಣದಲ್ಲಿ ಸೀತಾರಾಮನ್ ಹೇಳಿದ್ದಾರೆ ನೀವು ನೋಡಬಹುದು. ಇದು ಕರ್ನಾಟಕದ ಜನರಿಗೆ ಮಾಡುವ ದ್ರೋಹ ಅಲ್ವಾ ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಬಜೆಟ್​ ಕಾಪಿ ಓದಿದ ಸಿದ್ದರಾಮಯ್ಯ

ನಿಮ್ಮ ಬಾಯಿನಲ್ಲೇ ಹೇಳಿದ್ದನ್ನೇ ಹೇಳಿದ್ರೆ ವಾಕೌಟ್ ಮಾಡ್ತೀರಾ? ಬಾಯ್ಕಾಟ್ ಮಾಡ್ತೀರಾ, ಪ್ಲೇ ಕಾರ್ಡ್ ಹಿಡಿದು ಬರ್ತಾರಾ? 36 ಸಾವಿರ ಕೋಟಿ ಗ್ಯಾರೆಂಟಿಗಳಿಗೆ ಕೊಟ್ಟಿಲ್ಲ ಎಂದು ಬಿಜೆಪಿ ಸಾಬೀತುಪಡಿಸಲು ಅಭಿವೃದ್ಧಿ ಮಾಡಿಲ್ಲ ಅಂತ ಪ್ರೂ ಮಾಡಲಿ ಎಂದು ಸವಾಲ್ ಹಾಕಿದ ಸಿದ್ದರಾಮಯ್ಯ, ಇವರ ತಲೆಯಲ್ಲಿ ರಾಜಕೀಯ ಮಂಜು ಕವಿದು ಹೋಗಿದೆ. ಇದು ಜನ‌ದ್ರೋಹದ ಕೆಲಸ. ಸಾಲ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ನಾನು ಹಣಕಾಸು ಸಚಿವನಾಗಿದ್ದೇನೆ. 1 ಲಕ್ಷದ 12 ಸಾವಿರ ಕೋಟಿ ರೂ, ಸಾಲ‌ಮಾಡಿದ್ದೀನಿ ಅಷ್ಟೆ. 80 ಸಾವಿರ ಕೋಟಿ ರೂ, ಬಿಜೆಪಿ ಸರ್ಕಾರ ಸಾಲ ಮಾಡಿತ್ತು ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ಪುಸ್ತಕವನ್ನ ಓದಿ ಹೇಳಿದರು.

ಮೋದಿ ನಮ್ಮ ಗ್ಯಾರಂಟಿ ಕದ್ದಿದ್ದಾರೆ

ನಾವು ಬೇರೆಯವರಿಗೆ ಹಣ ಕೊಡಬೇಡಿ ಎಂದು ಹೇಳುವುದಿಲ್ಲ. ನಮ್ಮನ್ನು ಉಪವಾಸ ಇರಿಸಬೇಡಿ ಎಂದು ಕೇಂದ್ರಕ್ಕೆ ಕೇಳುತ್ತಿದ್ದೇವೆ. ಈ ಅನ್ಯಾಯವನ್ನು ಪ್ರಶ್ನಿಸಿದರೆ ಬಿಜೆಪಿಯವರು ವಿರೋಧಿಸುತ್ತಾರೆ. ಬಿಜೆಪಿ ನಾಯಕರು 1 ದಿನವಾದರೂ ರಾಜ್ಯದ ಪಾಲು ಕೇಳಿದ್ದಾರಾ? ರಾಜ್ಯದ ಬಿಜೆಪಿ ಸಂಸದರು, ಶಾಸಕರು ಕೇಂದ್ರವನ್ನು ಕೇಳಿದ್ದಾರಾ?  ನಮ್ಮ ಗ್ಯಾರಂಟಿಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ರಿಂದ 55 ‌ಸಾವಿರ ರೂಪಾಯಿ ಸಿಗುತ್ತೆ. ಉಚಿತ ಬಸ್ ನಿಂದ 155 ಕೋಟಿ‌ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕೊಟ್ರೆ ಇದು ಬಿಟ್ಟಿ ಭಾಗ್ಯನಾ? 200 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಫ್ರೀ ಕೊಟ್ರೆ ಅದು ಬಿಟ್ಟಿನಾ? 1 ಕೋಟಿ 17 ಲಕ್ಷ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ಕೊಟ್ರೆ ಅದು ಬಿಟ್ಟಿ ಭಾಗ್ಯನಾ? ಬಡವರಿಗೆಲ್ಲ ಬಿಜೆಪಿ ಅವಮಾನ ಮಾಡುತ್ತಿದೆ. ಗ್ಯಾರಂಟಿ ಅನ್ನೋ ಪದವನ್ನೇ ಬಿಜೆಪಿ‌ ಕದ್ದಿದೆ. ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಾರೆ. ನಮ್ಮನ್ನ ನಕಲು ಮಾಡಿದ್ದಾರೆ. ಈಗ ನಮ್ಮನ್ನೇ ಬಿಟ್ಟಿ ಗ್ಯಾರಂಟಿ ಅಂತ ಕರೆಯುತ್ತಿದ್ದಾರೆ. ಇವರ ಮೋದಿ‌ ಗ್ಯಾರೆಂಟಿಗೆ ಏನು ಹೇಳ್ಬೇಕು ಎಂದು ಲೇವಡಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ