ಗುಜರಾತ್‌ನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು: ಸಂಚಲನ ಮೂಡಿಸಿದ ಲೆಹರ್ ಸಿಂಗ್ ಟ್ವೀಟ್
ಗುಜರಾತ್‌ನಲ್ಲಿ ನಡೆದಿರುವುದು ಕರ್ನಾಟಕಕ್ಕೂ ಮಾದರಿಯಾಗಬೇಕು ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯಾ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮುಂಬರುವ ವಿಧಾನಸಭೆ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ. ಈ ಚುನಾವಣೆಯಲ್ಲಿ ಹೊಸ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಬೇಕು. ಇದರಿಂದ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿಜಯ್ ರೂಪಾನಿ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ (lehar singh), ಗುಜರಾತಿನಲ್ಲಿ (Gujarat) ನಡೆದಿರುವುದು ಕರ್ನಾಟಕಕ್ಕೂ (Karnataka) ಮಾದರಿಯಾಗಬೇಕು ಎಂದಿದ್ದಾರೆ.
ಜಾಮ್‌ನಗರ ಉತ್ತರ ಕ್ಷೇತ್ರದಿಂದ ಕ್ರಿಕೆಟಿಗ ರವೀಂದ್ರ ಸಿಂಗ್ ಜಡೇಜಾ ಪತ್ನಿ ರಿವಾಬಾ ಜಡೇಜಾ ಕಣಕ್ಕೆ
ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ, ಮಾಜಿ ಡಿಸಿಎಂ ನಿತಿನ್ ಪಟೇಲ್ ಹಾಗೂ ಮಾಜಿ ಸಚಿವರಾದ ಭೂಪೇಂದ್ರ ಸಿನ್ಹಾ ಚುಡಸಾಮ ಮತ್ತು ಪ್ರದೀಪ್ ಸಿನ್ಹಾ ಜಡೇಜಾ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಮುಂದಿನ ಪೀಳಿಗೆಯ ಬದಲಾವಣೆಗೆ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಇದು ಶ್ಲಾಘನೀಯ ಕ್ರಮ. ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ರಾಜ್ಯದ ಹಿರಿಯ ನಾಯಕರು ಕಿರಿಯರಿಗೆ ದಾರಿಯಾಗಬೇಕು ಎಂದು ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
What has happened in Gujarat should serve as a model in Karnataka too. Former Gujarat CM @vijayrupanibjp, former Dy. CM @Nitinbhai_Patel, as well as former ministers, @imBhupendrasinh and @PradipsinhGuj, have decided not to contest the assembly polls. (1/2)
— Lahar Singh Siroya (@LaharSingh_MP) November 10, 2022
ಈ ಮೂಲಕ ಪರೋಕ್ಷವಾಗಿ ಕರ್ನಾಟಕ ಹಿರಿಯ ರಾಜಕೀಯ ನಾಯಕರು ಚುನಾವಣೆಯಿಂದ ಹಿಂದೆ ಸರಿದು ಯುವಕರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಅಲ್ಲದೇ ನಾಳೆ ರಾಜ್ಯಕ್ಕೆ ಮೋದಿ ಭೇಟಿ ಬೆನ್ನಲ್ಲೇ ಈ ಟ್ವೀಟ್ ಸಂಚಲನ ಮೂಡಿಸಿದ್ದು, ರಾಜ್ಯ ಬಿಜೆಪಿಯ ಮಾಜಿ ಸಿಎಂಗಳು, ಮಾಜಿ ಡಿಸಿಎಂಗಳು, ಮಾಜಿ ಸಚಿವರು ಚುನಾವಣೆಗೆ ಸ್ಪರ್ಧಿಸದಂತೆ ಪರೋಕ್ಷವಾಗಿ ಹೇಳಿದಂತಿದೆ.
ಚುನಾವಣಾ ಕಣದಿಂದ ಹಿಂದೆ ಸರಿದ ಘಟಾನುಘಟಿಗಳು
ವಿಜಯ್ ರೂಪಾನಿಯಷ್ಟೇ ಅಲ್ಲದೆ, ಗುಜರಾತ್‌ನ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದರ ಜೊತೆಗೆ ಬಿಜೆಪಿಯ ಹಿರಿಯ ನಾಯಕ ಬಿಜೆಪಿ ಶಾಸಕ ಭೂಪೇಂದ್ರ ಸಿಂಹ ಚುಡಾಸಮಾ ಕೂಡ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಇತರ ಕಾರ್ಯಕರ್ತರಿಗೆ ಅವಕಾಶ ಸಿಗಬೇಕೆಂದು ನಾನು ನಿರ್ಧರಿಸಿದ್ದೇನೆ. ನಾನು ಇಲ್ಲಿಯವರೆಗೆ ಒಂಬತ್ತು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನಾನು ಪಕ್ಷಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಚುಡಾಸಮಾ ತಿಳಿಸಿದ್ದಾರೆ.
ಗುಜರಾತ್‌ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಡಿಸೆಂಬರ್ 1ರಂದು 89 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ.
Published On - 3:45 pm, Thu, 10 November 22