ಕನ್ನಡ ರಾಜ್ಯೋತ್ಸವ 2021: ಭಾಷಾ ಬಿಕ್ಕಟ್ಟುಗಳ ನಡುವೆ ಕನ್ನಡದ ಉಳಿವು

Karnataka Rajyotsava 2021: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾಷಾ ಬಿಕ್ಕಟ್ಟುಗಳ ನಡುವೆ ಕನ್ನಡದ ಉಳಿವು ವಿಶೇಷ ಬರಹ ಇಲ್ಲಿದೆ. ಎರಡು ಸಾವಿರ ವರ್ಷಗಳಿಗೂ ಮಿಕ್ಕಿ ಇತಿಹಾಸವಿರುವ ಕಸ್ತೂರಿ ಕನ್ನಡ ಆರಂಭದಿಂದಲೂ ಒಂದಲ್ಲ ಒಂದು ಭಾಷೆಯಿಂದ ಸವಾಲುಗಳನ್ನು ಎದುರಿಸುತ್ತ, ಅವುಗಳಿಗೆ ತಕ್ಕ ಜವಾಬುಗಳನ್ನು ನೀಡುತ್ತ ತನ್ನತನವನ್ನು ಉಳಿಸಿಕೊಂಡು ಬಂದಿದೆ.

ಕನ್ನಡ ರಾಜ್ಯೋತ್ಸವ 2021: ಭಾಷಾ ಬಿಕ್ಕಟ್ಟುಗಳ ನಡುವೆ ಕನ್ನಡದ ಉಳಿವು
ಕನ್ನಡ ರಾಜ್ಯೋತ್ಸವ
Follow us
TV9 Web
| Updated By: shruti hegde

Updated on:Nov 01, 2021 | 2:19 PM

ಭಾಷಾ ಸಮಸ್ಯೆಗಳು, ಪರಭಾಷಾ ವ್ಯಾಮೋಹ, ಅವುಗಳ ನಡುವೆ ಕನ್ನಡದ ಉಳಿವಿನ ಪ್ರಶ್ನೆಗಳ ನಡುವಿನ ಮಾತುಗಳು ಇಂದು ನಿನ್ನೆಯದಲ್ಲ, ಲಾಗಾಯ್ತಿನಿಂದಲೂ ಕೇಳಿಬರುತ್ತಿರುವಂಥವು. ಈ ದೇಶದಲ್ಲಿ ಬಳಕೆಯಲ್ಲಿರುವ ಸರಿ ಸುಮಾರು 438 ಭಾಷೆಗಳ ನಡುವೆ ಪ್ರತಿಷ್ಠೆಯ ಹೆಸರಿನಲ್ಲಿ ವಾಗ್ವಾದಗಳು, ಜಗಳ, ದೊಂಬಿ. ಕೊನೆಗೆ ಹಿಂಸಾತ್ಮಕ ಘಟನೆಗಳೂ ನಡೆದುಹೋದ ಹಲವು ನಿದರ್ಶನಗಳು ನಮ್ಮ ಕಣ್ಮುಂದಿವೆ. ಕನ್ನಡದ ಸಂದರ್ಭಕ್ಕೆ ಬಂದರೆ ನಮಗೆ ಎದುರಾಗಿರುವ ಭಾಷಾ ಬಿಕ್ಕಟ್ಟುಗಳೇನೂ ಹೊಸದಲ್ಲ. ಎರಡು ಸಾವಿರ ವರ್ಷಗಳಿಗೂ ಮಿಕ್ಕಿ ಇತಿಹಾಸವಿರುವ ಕಸ್ತೂರಿ ಕನ್ನಡ ಆರಂಭದಿಂದಲೂ ಒಂದಲ್ಲ ಒಂದು ಭಾಷೆಯಿಂದ ಸವಾಲುಗಳನ್ನು ಎದುರಿಸುತ್ತ, ಅವುಗಳಿಗೆ ತಕ್ಕ ಜವಾಬುಗಳನ್ನು ನೀಡುತ್ತ ತನ್ನತನವನ್ನು ಉಳಿಸಿಕೊಂಡು ಬಂದಿದೆ. ತನ್ನ ಅಸ್ತಿತ್ವಕ್ಕೆ ಸವಾಲೆಸೆದ ಅನ್ಯ ಭಾಷೆಗಳನ್ನು ದೂಷಿಸದೆ ಅವುಗಳ ಸತ್ತ್ವಗಳನ್ನು ತನ್ನದಾಗಿಸಿಕೊಳ್ಳುತ್ತಲೇ ಪುಷ್ಟವಾಗುತ್ತ ನಡೆದಿರುವ ಹೆಮ್ಮೆ ನಮ್ಮ ಕನ್ನಡಕ್ಕಿದೆ.

‘ಕನ್ನಡಂ ಕತ್ತುರಿಯಲ್ತೆ!’ ಎಲ್ಲಕ್ಕೂ ಮೊದಲು ಕನ್ನಡಕ್ಕೆ ಸವಾಲೊಡ್ಡಿದ್ದು ಸಂಸ್ಕೃತ. ಅದಕ್ಕೆ ಧೃತಿಗೆಡದ ಕನ್ನಡ ಸಂಸ್ಕೃತ ಪದಗಳನ್ನು ಇದ್ದಕ್ಕಿದ್ದ ಹಾಗೆಯೇ ಅಥವಾ ಮಾರ್ಪಾಡುಗಳೊಂದಿಗೆ ಬಳಸಿಕೊಂಡು ತನ್ನ ಪದಭಾಂಡಾರವನ್ನು ತುಂಬಿಸಿಕೊಂಡಿತು! ಅವು ತತ್ಸಮ-ತದ್ಭವಗಳ ರೂಪದಲ್ಲಿ ಕನ್ನಡ ಭಾಷೆ ಹಾಗೂ ವ್ಯಾಕರಣದ ಅವಿಭಾಜ್ಯ ಅಂಗಗಳಾದವು. ಅವರು ‘ಶ್ರೀ’ ಎಂದರು, ನಾವು ‘ಸಿರಿ’ ಎಂದೆವು, ಅವರದು ‘ಕಾವ್ಯ’ ವಾದರೆ ನಮ್ಮದು ‘ಕಬ್ಬ’, ಅವರ ‘ಕಾರ್ಯ’ ನಮಗೆ ‘ಕಜ್ಜ’ವಾಯಿತು!

ಸಂಸ್ಕೃತದ ತರುವಾಯ ಯವನಭಾಷೆಗಳ ಸರದಿ. ಅರೇಬಿಕ್, ಪರ್ಷಿಯನ್, ಉರ್ದು ಹಾಗೂ ರಾಷ್ಟ್ರಭಾಷೆಯಾದ ಹಿಂದಿ ಕನ್ನಡದೊಂದಿಗೆ ಮುಖಾಮುಖಿಯಾದವು. ‘ಅನ್ಯದೇಶ್ಯ’ವೆಂಬ ಹೆಸರಿನಲ್ಲಿ ಅವುಗಳ ಪದಗಳನ್ನು ತನ್ನದಾಗಿಸಿಕೊಂಡಿತು, ಸಿರಿಗನ್ನಡ! ಅರ್ಜಿ, ಕಛೇರಿ, ಚುನಾವಣೆ, ಸರ್ಕಾರ, ಕಾಗದ, ಬಂದೂಕು, ಸಲಾಮು, ದವಾಖಾನೆಯಂತಹ ಪದಗಳು ಈ ಮೇಲಿನ ಹಿಂದುಸ್ಥಾನೀ ಭಾಷೆಗಳಿಂದ ಕನ್ನಡದ ಸಂದೂಕದೊಳಕ್ಕೆ ಜಮೆಯಾದವು. ಮುಂದೆ ಈ ನೆಲಕ್ಕೆ ಕಾಲಿಟ್ಟ ಪೋರ್ಚುಗೀಸ್ ಭಾಷೆಯೂ ಕನ್ನಡದ ಮೇಲೆ ದಬ್ಬಾಳಿಕೆ ನಡೆಸುವ ಹುನ್ನಾರ ನಡೆಸಿತು. ಆದರೆ ಅವರ ಅಲಮಾರು, ಸಾಬೂನು, ಪಾದ್ರಿ ಮುಂತಾದ ಪದಗಳು ನಮ್ಮ ಕಪಾಟು ಸೇರಿ ಭದ್ರಗೊಂಡವು!

ನಮ್ಮನ್ನಾಳಿದ ಆಂಗ್ಲರ ಭಾಷೆಯಿಂದಲೂ ಹಲವು ಪದಗಳನ್ನು ಎರವಲು ಪಡೆದ ಕನ್ನಡವು ಮತ್ತಷ್ಟು ಶ್ರೀಮಂತವಾಯಿತು. ಆದರೆ ಆಂಗ್ಲರು ದೇಶವನ್ನು ಬಿಟ್ಟುಹೋಗಿ 75 ವರ್ಷಗಳ ತರುವಾಯವೂ ಆಂಗ್ಲಭಾಷೆ ಕನ್ನಡದ ಬೆಳವಣಿಗೆಗೆ ತೊಡಕಾಗಿಯೇ ಕಂಡುಬರುತ್ತಿದೆ. ಇಂದು ಆಂಗ್ಲ ಪದಗಳನ್ನು ಕನ್ನಡದೊಂದಿಗೆ ಬೆರೆಸಿ ಮಾತನಾಡುವುದು ಕೇವಲ ದೊಡ್ಡಸ್ತಿಕೆಯ ಲಕ್ಷಣವಾಗಿ ಮಾತ್ರ ಉಳಿದಿಲ್ಲ, ಐದು ನಿಮಿಷಗಳ ಕಾಲ ಒಂದೂ ಆಂಗ್ಲ ಪದವನ್ನು ಬಳಸದೆ ಶುದ್ಧ ಕನ್ನಡದಲ್ಲಿ ಮಾತನಾಡುವವರಿಗೆ ಹತ್ತು, ಇಪ್ಪತ್ತು ಸಾವಿರ ಬಹುಮಾನ ನೀಡುವ ಸ್ಪರ್ಧೆಗಳನ್ನು ಆಯೋಜಿಸುವ ಮಟ್ಟಕ್ಕೆ ನಮ್ಮೊಳಗೆ ಆಂಗ್ಲಭಾಷೆಯು ಬೆರೆತು ಹೋಗಿದೆ! ಸುಲಭವಾಗಿ ಕನ್ನಡದ ಪದಗಳನ್ನು ಆಡಬಹುದಾದ ಸಂದರ್ಭಗಳಲ್ಲಿಯೂ ತಿಣುಕಾಡಿ ತಿಣುಕಾಡಿ ಆಂಗ್ಲಪದಗಳನ್ನು ಬಳಸಿ ದಣಿಯುತ್ತೇವೆ. ‘ನನಗೆ ಗೊತ್ತಿಲ್ಲ’ ಎಂದು ಸುಲಭ ಕನ್ನಡದಲ್ಲಿ ಹೇಳುವ ಬದಲು, ‘ನನಗೆ ಐಡಿಯಾ ಇಲ್ಲ’, ‘ಐ ಡೋಂಟ್ ನೊ’ ಎಂದೆಲ್ಲ ಕಷ್ಟಪಟ್ಟು ಹೇಳುತ್ತೇವೆ.ಇನ್ನೂ ಕೆಲವರಿಗೆ ಮಾತಿಗೆ ಮೊದಲು, ಎಕ್ಚುವಲಿ ಎಂದೋ ಯೂ ಸೀ ಎಂದೋ ಪಲುಕುವ ಕಾಯಿಲೆ!

ಅನ್ಯ ಭಾಷಿಕರೊಂದಿಗೆ ವ್ಯವಹರಿಸುವಾಗ ಅವರು ಕನ್ನಡವನ್ನು ಕಲಿಯಲು ಅವಕಾಶವನ್ನೇ ಕೊಡದವರಂತೆ ಅವರಿಗಿಂತ ಮುಂದಾಗಿ ಅವರ ಭಾಷೆಯಲ್ಲಿ ವ್ಯವಹರಿಸುವ ಬುದ್ಧಿವಂತಿಕೆಯನ್ನು ಪ್ರದರ್ಶಿ ಅವರು ಕನ್ನಡ ಮಾತನಾಡಲು ಕಲಿಯುವ ಅವಕಾಶವನ್ನೇ ತಪ್ಪಿಸಿಬಿಡುತ್ತೇವಲ್ಲ! ಜರ್ಮನಿಯಲ್ಲಿ ಹುಟ್ಟಿ, ಕನ್ನಡ ನಾಡಿಗೆ ಬಂದು, ಕನ್ನಡವನ್ನು ಕಲಿತು, ಕನ್ನಡ-ಇಂಗ್ಲಿಷ್ ನಿಘಂಟೂ ಸೇರಿದಂತೆ ಮೌಲಿಕ ಕೃತಿಗಳನ್ನು ಕನ್ನಡದಲ್ಲಿ ರಚಿಸಿದ ರೆ|| ಕಿಟೆಲ್ ಅವರ ಕೊನೆಗಾಲದಲ್ಲಿ ಕನ್ನಡಿಗರೊಬ್ಬರು ಭೇಟಿಯಾದರಂತೆ. ಇವರು ಕಿಟೆಲ್ ಅವರೊಂದಿಗೆ ಆಂಗ್ಲಭಾಷೆಯಲ್ಲಿ ಮಾತನಾಡಲು ಹವಣಿಸಿದಾಗ ಕಿಟೆಲ್ ಅವರು, “ಕನ್ನಡದಲ್ಲಿ ಮಾತನಾಡಿ ನನ್ನನ್ನು ಪುನೀತನನ್ನಾಗಿ ಮಾಡಿ” ಎಂದು ಪ್ರಾರ್ಥಿಸಿಕೊಂಡರಂತೆ! ಅನ್ಯಭಾಷಿಕರಾದ ಕಿಟೆಲ್‍ ಅವರಿಗಿದ್ದ ಕನ್ನಡಪ್ರೇಮ ಕನ್ನಡಿಗರಾದ ನಮಗೆ ಇಂದಿಗೂ ಇಲ್ಲವಾಗಿರುವುದು ವಿಪರ್ಯಾಸ.

ನಮ್ಮ ಉದಾಸೀನತೆಯ ಪರಿಣಾಮವಾಗಿ ಮರಾಠಿಯೇ ಮುಂತಾದ ಅನ್ಯ ಭಾಷಿಕರು ನಮ್ಮ ನೆಲವೇ ತಮ್ಮದೆಂದು ವಾದಿಸುತ್ತಾರೆ. ಸರ್ಕಾರಿ ಕಟ್ಟಡದ ಮೇಲೆ ಎಮ್.ಇ.ಎಸ್. ಧ್ವಜವನ್ನು ಹಾರಿಸುತ್ತಾರೆ. ಅವರಂತೆಯೇ ತಮಿಳು, ತೆಲಗು, ಕೊಂಕಣಿ ಭಾಷಿಕರೂ ತಕರಾರು ತೆಗೆದ ಸಂದರ್ಭಗಳಿಗೇನೂ ಕೊರತೆಯಿಲ್ಲ.

ಇವುಗಳನ್ನೆಲ್ಲ ಸಮರ್ಥವಾಗಿ ಎದುರಿಸಿ ಉಳಿಯಬಲ್ಲ ಬೆಳೆಯಬಲ್ಲ ಚೈತನ್ಯ ಕನ್ನಡಕ್ಕಿದೆ. ಕನ್ನಡಕ್ಕಿರುವಂತಹ ಜಾನಪದ ನೆಲೆಗಟ್ಟು ಅನ್ಯಭಾಷೆಗಳಿಗಿಲ್ಲ. ಹೊಸಗನ್ನಡ ಸಂದರ್ಭದಲ್ಲಿಯೂ ಬೇಂದ್ರೆ, ಕುವೆಂಪು, ಕಂಬಾರರಂಥವರು ದೇಶೀ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿ. ಪ್ರಗತಿಶೀಲ, ನವೋದಯ, ನವ್ಯ, ನವ್ಯೋತ್ತರ, ದಲಿತ, ಬಂಡಾಯ ಹೀಗೆ ಕನ್ನಡ ಸಾಹಿತ್ಯದ ವೈವಿಧ್ಯಮಯವಾದ ದಾರಿಗಳು ಕನ್ನಡದ ಪ್ರಯೋಗಶೀಲತೆಗೆ ಸಾಕ್ಷಿಯಾಗಿವೆ. ತನ್ನನ್ನು ಪ್ರಯೋಗಕ್ಕೆ ಒಡ್ಡಿಕೊಂಡ ಭಾಷೆ ಬೆಳೆಯುತ್ತದೆ ಎಂಬುದಕ್ಕೆ ಕನ್ನಡವೇ ಉತ್ತಮ ನಿದರ್ಶನವಾಗಿದೆ. ಎದುರಾದ ಹತ್ತು ಹಲವು ಬಿಕ್ಕಟ್ಟುಗಳ ನಡುವೆಯೂ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿಕೊಂಡ ಹೆಮ್ಮೆ ಕನ್ನಡಕ್ಕಿದೆ.

ಕನ್ನಡಕ್ಕೆ ನಿಜವಾದ ಅಪಾಯವಿರುವುದು ಹೊರಗಿನಿಂದಲ್ಲ. ಅದು ನಮ್ಮೊಳಗೇ ಇದೆ. ಮೊದಲನೆಯದಾಗಿ ಶಿಕ್ಷಣದ ಉದ್ದೇಶದ ಕುರಿತಾಗಿ ನಮ್ಮಲ್ಲಿ ಬೇರೂರಿರುವ ತಪ್ಪುಗ್ರಹಿಕೆ. ಶಿಕ್ಷಣವು ಕೇವಲ ನೌಕರಿಗಾಗಿ. ಆಂಗ್ಲಭಾಷೆ ಮತ್ತು ಮಾಧ್ಯಮಲ್ಲಿ ಕಲಿತರೆ ಉದ್ಯೋಗ ಖಾತ್ರಿ ಎಂಬ ತಪ್ಪು ತಿಳುವಳಿಕೆ ನಮ್ಮಲ್ಲಿ ಬೇರೂರಿರುವುದು ಒಂದು ದುರಂತವೇ ಸರಿ. ಪ್ರಸ್ತುತ ಉನ್ನತ ಹುದ್ದೆಯಲ್ಲಿರುವವರೆಲ್ಲರೂ ಆಂಗ್ಲ ಮಾಧ್ಯಮದಲ್ಲಿ ಕಲಿತವರೇ ಎನ್ನುವ ಭ್ರಮಾಲೋಕದಲ್ಲಿ ಕೆಲವರಿದ್ದಾರೆ. ಭಾರತರತ್ನ ಪ್ರೊ. ಯು. ಆರ್. ರಾವ್ ಅವರಂತಹ ವಿಜ್ಞಾನಿಗಳು ಓದಿದ್ದು ಕನ್ನಡ ಮಾಧ್ಯಮದಲ್ಲಿಯೇ ಎನ್ನುವುದನ್ನು ನಾವೆಲ್ಲರೂ ಮನಗಾಣಬೇಕಿದೆ. ಇನ್ನೂ ಕೆಲವರಿಗೆ ತಮಗೆ ಆಂಗ್ಲಭಾಷೆ ಅರ್ಥವಾಗದಿದ್ದರೂ ಪರವಾಗಿಲ್ಲ, ತಮ್ಮ ಮಕ್ಕಳು ಆಂಗ್ಲಭಾಷೆಯಲ್ಲಿ ಮಾತನಾಡಿ ತಮನ್ನು ಪುನೀತರನ್ನಾಗಿ ಮಾಡಬೇಕೆಂಬ ಅವ್ಯಕ್ತ ಬಯಕೆ! ನಮ್ಮ ಆಂಗ್ಲಭಾಷಾ ವ್ಯಾಮೋಹ ಯಾವ ಮಟ್ಟವನ್ನು ತಲುಪಿದೆ ಎಂದರೆ ಕನ್ನಡ ಸಾಹಿತ್ಯ ಪರಿಷತ್ತು ಇರುವಂತೆ ಕರ್ನಾಟಕದಲ್ಲಿ ಆಂಗ್ಲ ಸಾಹಿತ್ಯ ಪರಿಷತ್ತು ಬೇಕು ಎನ್ನುವ ಭೂಪರೂ ನಮ್ಮಲ್ಲಿದ್ದಾರೆ!

ಇನ್ನೊಂದು ಅಪಾಯವೆಂದರೆ ಸೆಂಟ್ರಲ್ ಸಿಲೆಬಸ್ ನೆಪದಲ್ಲಿ ಆಂಗ್ಲಮಾಧ್ಯಮ ಶಾಲೆಗಳು ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ತಲೆ ಎತ್ತುತ್ತಿರುವುದು. ಮಹಾನಗರಗಳಲ್ಲಿ ಬಹುಭಾಷಾ ಮಾತೃಭಾಷೆಯ ಮಕ್ಕಳಿರುವುದರಿಂದ ಇಂತಹ ಶಾಲೆಗಳಿರಲಿ ಎಂದು ಒಪ್ಪಿಕೊಳ್ಳೋಣ. ಸಾಮಾನ್ಯವಾಗಿ ಒಂದೇ ಮಾತೃಭಾಷೆ- ಕನ್ನಡ ಇರುವ ಹಳ್ಳಿಗಳಿಗೆ ಆಂಗ್ಲಮಾಧ್ಯಮ ಶಾಲೆಗಳೇಕೆ ಬೇಕೆಂಬುದೇ ಒಗಟಾಗಿದೆ. ಸಾವಿರಗಟ್ಟಲೆ ಶುಲ್ಕ ತೆತ್ತು ಇಂತಹ ಶಾಲೆಗಳಿಗೆ ಮಕ್ಕಳನ್ನು ಕಳಿಸುವ ಪಾಲಕರು ತಮ್ಮ ಮಕ್ಕಳನ್ನು ಕನ್ನಡದಿಂದ ಮಾತ್ರ ವಿಮುಖಗೊಳಿಸುತ್ತಿಲ್ಲ. ನಮ್ಮ ಸಂಸ್ಕೃತಿಯಿಂದಲೇ ವಿಮುಖಗೊಳಿಸುತ್ತಿದ್ದಾರೆ.

ಆದ್ದರಿಂದ ತಾಯಿಯಷ್ಟೇ ತಾಯಿಭಾಷೆಯನ್ನೂ ಪ್ರೀತಿಸಬೇಕು. ತಾಯಿಭಾಷೆಯನ್ನು ಮರೆತರೆ ತಾಯಿಯನ್ನೇ ಮರೆತಂತೆ. ಪ್ರಾಥಮಿಕ ಹಂತದವರೆಗೆ ತಾಯಿಭಾಷೆಯಲ್ಲಿಯೇ ನಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಬೇಕು. ಆ ಮೂಲಕ ಕನ್ನಡದ ಬೆಳವಣಿಗೆಯ ವಿಷಯದಲ್ಲಿ ಕನ್ನಡಿಗರಾದ ನಾವು ನಮ್ಮ ಕರ್ತವ್ಯವನ್ನು ಪಾಲಿಸಬೇಕು. ದಿನಗಳೆದಂತೆ ಬಿಕ್ಕಟ್ಟುಗಳು ಹೆಚ್ಚುತ್ತಿರುವುದು ನಿಜ. ಆದರೆ ಬಿಕ್ಕಟ್ಟುಗಳ ನಡುವೆಯೂ ಕನ್ನಡನಾಡಿನಲ್ಲಿ ಆಳವಾಗಿ ಬೇರುಬಿಟ್ಟಿರುವ ಕನ್ನಡವು ಬೆಳೆಯುತ್ತಲೇ ಇದೆ. ಬೆಳೆಯಲೇಬೇಕು ಎಂಬ ಸದಾಶಯವನ್ನು ಕನ್ನಡಿಗರೆಲ್ಲರೂ ಇಟ್ಟುಕೊಳ್ಳೋಣ. ಸಿರಿಗ್ನನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಲೇಖಕ ನಾಗಪತಿ ಹೆಗಡೆ ಅವರ ಪರಿಚಯ

ಉತ್ತರಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಹುಳಗೋಳ ಗ್ರಾಮದವರು. ಜನತಾ ವಿದ್ಯಾಲಯ, ಕುಳವೆ-ಬರೂರು ಇಲ್ಲಿ ಶಿಕ್ಷಕರು. ಉತ್ತರಾರ್ಧ, ಹಗಲುಗನ್ನಡಿಯಲ್ಲಿ ಕನಸು (ಕಥೆ), ವೀರಪುಲಿಕೇಶಿ ಮತ್ತು ಇತರ ನಾಟಕಗಳು, ಸಂಕೀರ್ಣ (ಪ್ರಬಂಧ) ಸೇರಿದಂತೆ 16 ಕೃತಿಗಳನ್ನು ರಚಿಸಿದ್ದಾರೆ. 32 ಕೃತಿಗಳನ್ನು ಸಂಪಾದಿಸಿದ್ದಾರೆ. ತಮ್ಮ ನಮ್ರತಾ ಪ್ರಕಾಶನದಿಂದ 22 ಕೃತಿಗಳನ್ನು ಪ್ರಟಿಸಿದ್ದಾರೆ. ಗುರುವಂದನಾ ಅಡಕಮುದ್ರಿಕೆ ಹೊರತಂದಿದ್ದಾರೆ. ಶಿಕ್ಷಣ ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಎಮ್.ವಿ.ಎಲ್.ಎ. ಟ್ರಸ್ಟ್ ಮುಂಬೈ ಇದರ ಗ್ಲೋಬಲ್ ಟೀಚರ್ ಪ್ರಶಸ್ತಿ, ಸಾಹಿತ್ಯಕ್ಕಾಗಿ ಕೋಲ್ಕತ್ತಾ ಭಾರತೀಯ ಭಾಷಾ ಪರಿಷತ್ತಿನ ರಾಷ್ಟ್ರೀಯ ಯುವ ಪುರಸ್ಕಾರ, ಅತ್ತಿಮಬ್ಬೆ ಪ್ರತಿಷ್ಠಾನ ಮತ್ತು ಮೈಸೂರು ಲೇಖಕಿಯರ ಸಂಘ, ಕರಾವಳಿ ಮುಂಜಾವು, ಮೈಸೂರು ಅಸೋಸಿಯೇಶನ್ ಮುಂಬೈ ಇವರ ನೇಸರು ಜಾಗತಿಕ ಕಥಾಸ್ಪರ್ಧೆ, ಉತ್ಥಾನ, ಅನಂತ ಪ್ರಕಾಶ ಮುಂತಾದ ಕಥಾಸ್ಪರ್ಧೆಗಳ ಬಹುಮಾನಗಳು ಸಂದಿವೆ.

ಇದನ್ನೂ ಓದಿ:

Karnataka Rajyotsava 2021: ಕನ್ನಡಕ್ಕಿದೆ ಪ್ರಾದೇಶಿಕತೆಯ ಛಾಪು; ಆಯಾ ಸ್ಥಳ, ಜನಾಂಗಕ್ಕೆ ಅನುಗುಣವಾಗಿ ಬದಲಾಗುತ್ತದೆ ಆಡುನುಡಿ

Kannada Rajyotsava: 2020-21ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ವಿವರ ಇಲ್ಲಿದೆ

Published On - 7:22 am, Mon, 1 November 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?