Sign In

By signing in or creating an account, you agree with Associated Broadcasting Company's Terms & Conditions and Privacy Policy.

New Book: ಅಚ್ಚಿಗೂ ಮೊದಲು; ಎನ್ಎಸ್ ಶ್ರೀಧರಮೂರ್ತಿಯವರ ‘ಅಂದದ ಹೆಣ್ಣಿನ ನಾಚಿಕೆ’ ಕೃತಿ ಸದ್ಯದಲ್ಲೇ

AIR : ಈಗ ಆಕಾಶವಾಣಿಗೆ ತಾನು ಕಳೆದುಕೊಂಡಿದ್ದು ಏನು ಎನ್ನುವುದು ಖಚಿತವಾಯಿತು. ಡಾ.ಬಿ.ವಿ.ಕೇಸ್ಕರ್ ಅವರ ಅವಧಿಯಲ್ಲಿಯೇ ಚಿತ್ರಗೀತೆಗಳ ಜನಪ್ರಿಯತೆಯನ್ನು ಬಳಸಿಕೊಳ್ಳಲು ಪ್ರತ್ಯೇಕ ಕೇಂದ್ರ ಬೇಕು ಎಂಬ ನಿರ್ಧಾರವನ್ನು ಮಾಡಿತು.

New Book: ಅಚ್ಚಿಗೂ ಮೊದಲು; ಎನ್ಎಸ್ ಶ್ರೀಧರಮೂರ್ತಿಯವರ ‘ಅಂದದ ಹೆಣ್ಣಿನ ನಾಚಿಕೆ’ ಕೃತಿ ಸದ್ಯದಲ್ಲೇ
ಲೇಖಕ ಎನ್. ಎಸ್. ಶ್ರೀಧರಮೂರ್ತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 07, 2022 | 12:33 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ : ಅಂದದ ಹೆಣ್ಣಿನ ನಾಚಿಕೆ (ಪ್ರಬಂಧ ಸಂಕಲನ) ಲೇಖಕ : ಎನ್.ಎಸ್.ಶ್ರೀಧರ ಮೂರ್ತಿ ಪುಟ : 164  ಬೆಲೆ: ರೂ. 165 ಪ್ರಕಾಶನ : ಮಡಿಲು

ಬರವಣಿಗೆಯ ಆರಂಭದ ದಿನಗಳಿಂದಲೂ ಕೂಡ ನಾನು ಪ್ರಬಂಧಗಳನ್ನು ಬರೆದವನಲ್ಲ. ಶಾಲಾ-ಕಾಲೇಜ್‌ಗಳ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಷ್ಟೇ ಆ ಕಾಲದ ಅನುಭವ! ವಿಮರ್ಶೆಯಿಂದಲೇ ನನ್ನ ಬರವಣಿಗೆ ಆರಂಭವಾಗಿದ್ದು. ಸೃಜನಶೀಲ ಬರವಣಿಗೆ ಎಂದರೆ ಕಥೆ-ಕವಿತೆಗಳನ್ನು ಬರೆದಿದ್ದು. ಪಿ.ಯು.ಸಿ ದಿನಗಳಿಂದಲೂ ಕಾದಂಬರಿ ಬರವಣಿಗೆ ಕುರಿತು ನನಗೆ ಆಕರ್ಷಣೆ. ಈಗಲೂ ಅದೇ ನನ್ನ ಪ್ರಧಾನ ಅಭಿವ್ಯಕ್ತಿ ಮಾಧ್ಯಮ ಎನ್ನಿಸುವುದು ಉಂಟು. ಆದರೆ ನಾನು ಬಹುಕಾಲ ಕಥೆ-ಕಾದಂಬರಿಗಳೇ ಪ್ರಧಾನವಾಗಿದ್ದ ಪತ್ರಿಕೆಗಳಿಗೆ ಸಂಪಾದಕನಾಗಿದ್ದವನು. ಹೀಗಾಗಿ ನನ್ನಲ್ಲಿ ರೂಪುಗೊಂಡಿದ್ದ ಅನೇಕ ಕಥೆ-ಕಾದಂಬರಿಗಳು ರೂಪುಗೊಳ್ಳಲಾಗದೆ ಹೋದವು. ಬರಹದ ಯಾವ ಹಂತದಲ್ಲಿಯೂ ಪ್ರಬಂಧ ಬರೆಯ ಬಲ್ಲೆ ಎಂದು ನನಗೆ ಅನ್ನಿಸಿರಲಿಲ್ಲ. ಈ ಕುರಿತು ಮೊದಲು ಪ್ರಸ್ತಾಪ ಮಾಡಿದ್ದು ನನ್ನ ಹೆಂಡತಿ ರಾಧಾ. ಅವಳಿಗೆ ಪ್ರಬಂಧ ಪ್ರಿಯವಾದ ಪ್ರಕಾರ. ‘ನೀವು ಏಕೆ ಪ್ರಬಂಧ ಬರೆಯ ಬಾರದು?’ ಎಂದು ಕೇಳುತ್ತಿದ್ದಳು. ಅದಕ್ಕೆ ನಾನು ನೀಡುತ್ತಿದ್ದ ಉತ್ತರ ‘ನನ್ನ ವ್ಯಕ್ತಿತ್ವವೇ ಅದಕ್ಕೆ ಹೊಂದುವಂತಹದಲ್ಲ’ ಎನ್ನುವುದು ಹೀಗೆ ಅನ್ನಿಸಲು ಮುಖ್ಯ ಕಾರಣ ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇರುವ ಲವಲವಿಕೆಯ ವ್ಯಕ್ತಿತ್ವ ನನ್ನದಲ್ಲ ಎನ್ನುವುದು. ಹೀಗಿರುವಾಗ ಒಮ್ಮೆ ನನ್ನ ಹಿರಿಯ ಮಿತ್ರರಾದ ಎಸ್.ದಿವಾಕರ್ ಅವರು ಯಾವುದೋ ಮಾತಿನ ನಡುವೆ ‘ಒಂದು ಪ್ರಬಂಧ ಕೊಡಿ’ ಎಂದರು. ಆಗ ಅವರು ‘ಉಷಾ ಕಿರಣ’ ಪತ್ರಿಕೆಯಲ್ಲಿ ಇದ್ದರು. ‘ಪ್ರಬಂಧ ನನ್ನ ಪ್ರಕಾರ ಅಲ್ಲ’ ಎಂದು ಎಷ್ಟು ಹೇಳಿದರೂ ಅವರು ಒಪ್ಪಲಿಲ್ಲ. ಕೊನೆಗೆ ಅರ್ಧ ಮನಸ್ಸಿನಿಂದಲೇ ‘ಬಂಗಾರವೆನ್ನುವುದು ಬಣ್ಣನೆಯ ಮಾತಲ್ಲ’ ಎಂಬ ಪ್ರಬಂಧ ಕೊಟ್ಟೆ. ಅದನ್ನು ಅವರು ಪ್ರಕಟಿಸಿದರು. ಅದು ಎಲ್ಲರ ಮೆಚ್ಚುಗೆ ಪಡೆದಾಗ, ನಾನು ಈ ಮಾಧ್ಯಮದಲ್ಲಿಯೂ ಬರೆಯ ಬಲ್ಲೆ ಎಂಬ ಆತ್ಮ ವಿಶ್ವಾಸ ರೂಪುಗೊಂಡಿತು. ಮುಂದೆ ಮಂಗಳ ವಾರ ಪತ್ರಿಕೆಯಲ್ಲಿ ‘ಅಂದದ ಹೆಣ್ಣಿನ ನಾಚಿಕೆ’ ಪ್ರಬಂಧವನ್ನು ನನ್ನ ಅಂಕಣದಲ್ಲಿ ಬರೆದಾಗ ಹಿರಿಯರಾದ ಡಾ.ಸಿ.ಪಿ.ಕೆಯವರು ‘ಅಂದವಾದ ಬರವಣಿಗೆ’ ಎಂದು ಪ್ರೋತ್ಸಾಹ ನೀಡಿದ್ದರು. ಇವೆಲ್ಲವೂ ನಾನು ಆಗಾಗ ಪ್ರಬಂಧ ಬರೆಯುವುದಕ್ಕೆ ಕಾರಣವಾಯಿತು. ಎನ್.ಎಸ್. ಶ್ರೀಧರಮೂರ್ತಿ, ಪತ್ರಕರ್ತರು

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಇತಿಹಾಸದ ಕುತೂಹಲಕರ ಅಧ್ಯಾಯ ಹಾರ್ಮೋನಿಯಂ ಹಗರಣ

ಚಿತ್ರಗೀತೆಗಳಿಗೆ ಮಾತ್ರವಲ್ಲ ಕಳೆದ ಶತಮಾನದಲ್ಲಿ ಲಭ್ಯವಿದ್ದ ಏಕೈಕ ಜನಪ್ರಿಯ ಸಂಪರ್ಕ ಸಾಧನ ಎಂದರೆ ರೇಡಿಯೋ.. ವಾರ್ತೆಯಿಂದ ಮನೋರಂಜನೆಯವರೆಗೂ ಎಲ್ಲಾ ವರ್ಗದ ಜನರೂ ಅದನ್ನು ಅವಲಂಭಿಸಿದ್ದರು. ಭಾರತದಲ್ಲಿ ಕೂಡ ಖಾಸಗಿಯಾಗಿ ಆರಂಭವಾದ ಇದನ್ನು ೧೯೩೦ರ ಏಪ್ರಿಲ್ ೧ರಂದು ಆಗಿನ ಬ್ರಿಟಿಷ್ ಸರ್ಕಾರ ತನ್ನ ಹಿಡಿತಕ್ಕೆ ತೆಗೆದು ಕೊಂಡು ‘ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್’ ಎಂದು ಕರೆಯಿತು. ಆಗ ಇದು ಉದ್ಯಮವಾಗಿ ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ಇತ್ತು.

ಮೈಸೂರಿನಲ್ಲಿ ಆಕಾಶವಾಣಿಯನ್ನು ೧೯೩೫ರ ಸೆಪ್ಟಂಬರ್ ೩೦ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಶಾಸ್ತçದ ಪ್ರಾಧ್ಯಾಪಕರಾದ ಡಾ.ಗೋಪಾಲ ಸ್ವಾಮಿಯವರು ೨೦ ವ್ಯಾಟ್ ಟ್ರಾನ್ಸಮೀಟರ್‌ನೊಂದಿಗೆ ತಮ್ಮ ಮನೆಯಲ್ಲಿಯೇ ಆರಂಭಿಸಿದ್ದರು. ೧೯೪೧ರಲ್ಲಿ ಮೈಸೂರು ಸರ್ಕಾರ ಅದನ್ನು ತನ್ನ ವ್ಯಾಪ್ತಿಗೆ ತೆಗೆದು ಕೊಂಡಿತು. ಈ ವೇಳೆಗಾಗಲೇ ೧೯೩೫ರ ಜೂನ್ ೮ರಿಂದ ರೇಡಿಯೋ ಕೇಂದ್ರಗಳಿಗೆ ಆಲ್ ಇಂಡಿಯಾ ರೇಡಿಯೋ ಅಥವಾ ಆಕಾಶವಾಣಿ ಎಂಬ ಹೆಸರು ಇಡಲಾಗಿತ್ತು. ಮೈಸೂರು ಕೂಡ ಆ ಜಾಲದಲ್ಲಿ ಸೇರಿ ಕೊಂಡಿತು. ೨೦ ವ್ಯಾಟ್ ವ್ಯಾಪ್ತಿ ಇದ್ದಿದ್ದು ಕ್ರಮೇಣ ೨೫೦ ವ್ಯಾಟ್ ವ್ಯಾಪ್ತಿಗೆ ಹಿಗ್ಗಿತು. ಇದರಿಂದ ಹೆಚ್ಚಿನವರನ್ನು ಆಕಾಶವಾಣಿ ತಲುಪಲು ಆರಂಭಿಸಿತು.

ಆದರೆ ಆಕಾಶವಾಣಿಯ ಆರಂಭಿಕ ದಿನಗಳಿಂದಲೇ ಇಲ್ಲಿ ಚಿತ್ರಗೀತೆಗಳಿಗೆ ಪ್ರೋತ್ಸಾಹ ಸಿಗಲಿಲ್ಲ. ಇದಕ್ಕೆ ಕಾರಣ ‘ಹಾರ‍್ಮೋನಿಯಂ ಹಗರಣ’ ರಂಗಭೂಮಿಯ ಕಾಲದಿಂದಲೂ ಹಾರ‍್ಮೋನಿಯಂ ಭಾರತೀಯ ಸಂಗೀತದ ಆಧಾರ ವಾದ್ಯವಾಗಿ ಬೆಳೆಯಿತು. ಚಿತ್ರರಂಗಕ್ಕೆ ಬಂದ ಮೇಲೆ ಕೂಡ ಅದೇ ಪದ್ದತಿ ಮುಂದುವರೆಯಿತು. ಹಾರ‍್ಮೋನಿಯಂ ಬಳಕೆ ಇಲ್ಲದ ಯಾವ ಆರಂಭಿಕ ಚಿತ್ರಗಳನ್ನು ನೀವು ನೋಡಲಾರಿರಿ. ವಿಚಿತ್ರವೆಂದರೆ ಇದೇ ಕಾರಣಕ್ಕೆ ಚಿತ್ರಗೀತೆಗಳು ಕೆಲ ಕಾಲ ಆಕಾಶ ವಾಣಿಯಿಂದ ಬಹಿಷ್ಕಾರವನ್ನು ಎದುರಿಸ ಬೇಕಾಯಿತು. ಇದು ಆರಂಭವಾಗಿದ್ದು ಹೀಗೆ ಪಾಶ್ಚಿಮಾತ್ಯ ಸಂಗೀತ ತಜ್ಞ ಜಾನ್ ಫೌಲ್ಡ್ ಎಂಬಾತ ಭಾರತೀಯ ರೇಡಿಯೋ ಸಂಗೀತದಲ್ಲಿ ಹಾರ‍್ಮೋನಿಯಂ ಬಳಕೆಯನ್ನು ವಿರೋಧಿಸಿ ಹಾರ್ಮೋನಿಯಂನಲ್ಲಿರುವ ೧೨ ಸ್ಕೇಲ್‌ಗಳ ಸಂಯೋಜನೆ ಭಾರತೀಯ ಸಂಗೀತದ ಆಧಾರ ಶ್ರುತಿಯನ್ನು ಹಿಡಿಯಲು ಸೂಕ್ತವಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಶಾಸ್ತ್ರದ ಆಧಾರವೂ ಇತ್ತು. ಹಾರ‍್ಮೋನಿಯಂನ ಲಕ್ಷಣಗಳನ್ನೇ ಗಮನಿಸಿದರೆ ನಮಗೆ ಭಾರತೀಯ ಸಂಗೀತದ ಅನನ್ಯತೆಗಳು ಅರಿವಿಗೆ ಬರುತ್ತವೆ. ಹಾರ‍್ಮೋನಿಯಂ ತನ್ನ ಶ್ರುತಿಯನ್ನು ೧೨ ಸಮ ಭಾಗವನ್ನಾಗಿ ಮಾಡಿದೆ. ಇಲ್ಲಿ ಸ್ಥಿರ ಶ್ರುತಿಗೆ ಅವಕಾಶವೇ ಇಲ್ಲ. ಹೀಗಾಗಿ ಕೆಲವು ಸ್ವರಗಳನ್ನು ತೋರಿಸಲು ಬರುವುದೇ ಇಲ್ಲ.

ಉದಾಹರಣೆಗೆ ರಾಗ ಬಾಗೇಶ್ರೀಯಲ್ಲಿ ಬರುವ ಶುದ್ಧ ರಿಷಭ ಮಧ್ಯಮಕ್ಕೆ ಹತ್ತಿರವಾದದ್ದು. ಇದನ್ನು ನುಡಿಸಲು ಹಾರ‍್ಮೋನಿಯಂನಲ್ಲಿ ಅವಕಾಶವೇ ಇಲ್ಲ. ಇದು ವಾದ ವಿವಾದದ ಸ್ವರೂಪವನ್ನು ಪಡೆದು ೧೯೪೦ರ ಮಾರ್ಚಿ ೧ರಿಂದ ಆಕಾಶ ವಾಣಿಯಲ್ಲಿ ಹಾರ‍್ಮೋನಿಯಂ ಬಳಸುವುದನ್ನು ನಿಷೇಧಿಸಲಾಯಿತು. ಈ ವಾದ್ಯವನ್ನು ಹರಾಜಿನಲ್ಲಿ ಮಾರಿ ಬಿಡಿ ನಾಟಕ ಇರಲಿ, ಸರ್ಕಸ್‌ನಲ್ಲಿ ಕೂಡ ಬಳಸ ಕೂಡದು ಎಂಬ ಘೋಷಣೆಗಳು ಕೇಳಿ ಬಂದವು. ಆದರೆ ಅಷ್ಟು ಹೊತ್ತಿಗಾಗಲೇ ಹಾರ‍್ಮೋನಿಯಂ ಭಾರತೀಯ ಸಂಗೀತದ ಆಧಾರ ವಾದ್ಯವಾಗಿ ಹೋಗಿತ್ತು. ಅದಕ್ಕೆ ಪರ್ಯಾಯವಾದ ಬೇರೆ ವಾದ್ಯಗಳು ಇರಲಿಲ್ಲ. ರವೀಂದ್ರ ನಾಥ್ ಟ್ಯಾಗೂರ್, ಡಾ. ಜಾಕೀರ್ ಹುಸೇನ್, ಟಿ. ಲಕ್ಷ್ಮಣ  ಪಿಳೈ ಮೊದಲಾದ ವಿದ್ವಾಂಸರು ಹಾರ‍್ಮೋನಿಯಂ ಬಹಿಷ್ಕಾರವನ್ನು ಬೆಂಬಲಿಸಿದರು. ಇದನ್ನು ವಿರೋಧಿಸಿಯೂ ಸಾಕಷ್ಟು ಪ್ರತಿಭಟನೆಗಳು ನಡೆದವು.

ಈಗ ಹಾರ‍್ಮೋನಿಯಂನ ಹಿನ್ನೆಲೆಯನ್ನು ಕೊಂಚ ನೋಡೋಣ. ೧೪೯೮ರಲ್ಲಿ ವಾಸ್ಕೋ ಡ ಗಾಮಾ ಗುಡ್ ಹೋಪ್ ಭೂಶಿರದ ಮಾರ್ಗವಾಗಿ ಕೇರಳದ ಕಲ್ಲಿ ಕೋಟೆಗೆ ಬಂದು ಇಳಿದ ನಂತರ ಪೋರ್ಚಿಗೀಸರು, ಡಚ್ಚರು, ಸ್ಪ್ಯಾನಿಷ್​ರು, ಫ್ರೆಂಚರು, ಬ್ರಿಟೀಷರು ಮೊದಲಾದ ವಿದೇಶಿಯರು ಬಂದಿಳಿದರು. ಅಂತಿಮವಾಗಿ ಬ್ರಿಟೀಷರು ಇಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಪೋರ್ಚಿಗೀಸರು ಬಂದಾಗ ಅಲೂಗಡ್ಡೆ, ಮಸಾಲೆ, ಕರಿಮೆಣಸು ಮೊದಲಾದ ಪದಾರ್ಥಗಳನ್ನ ತಂದಿದ್ದರು. ಅದರ ಜೊತೆಗೆ ಹಾರ‍್ಮೋನಿಯಂ ಅನ್ನು ಕೂಡ ತಂದರು. ಇದು ಭಾರತಕ್ಕೆ ಬಂದಾಗ ಹಾರ‍್ಮೋನಿಯಂ ಆಗಿರಲಿಲ್ಲ. ಚರ್ಚ್ ಆರ್ಗನ್ ಎನ್ನಿಸಿ ಕೊಂಡಿತ್ತು. ಚರ್ಚ್​ಗಳಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಪಕ್ಕ ವಾದ್ಯವಾಗಿ ಬಳಕೆ ಆಗುತ್ತಿತ್ತು. ಇದು ಭಾರತೀಯರನ್ನು ಆಕರ್ಷಿಸಲು ಕಾರಣವೆಂದರೆ ನಮ್ಮಲ್ಲಿನ ಎಲ್ಲಾ ವಾದ್ಯಗಳಿಗಿಂತಲೂ ಭಿನ್ನವಾಗಿತ್ತು. ಇಲ್ಲಿ ಉಳಿದ ಭಾರತೀಯ ವಾದ್ಯಗಳಂತೆ ಊದುವುದೂ, ಮೀಟುವುದೋ ಇಲ್ಲ. ಇನ್ನೂ ವಿಶೇಷ ಎಂದರೆ ದನಿ ಹೊರಡುವುದು ಕೂಡ ಒತ್ತಲ್ಪಟ್ಟ ಕೀಯಿಂದ ಅಲ್ಲ. ಅಲ್ಲಿದ್ದ ಗಾಳಿ ಈ ಒತ್ತಡದಿಂದ ಚಲಿಸುತ್ತಾ ಇನ್ನೆಲ್ಲೋ ಇರುವ ನಿರ್ದಿಷ್ಟ ಕೀಯ ಸನ್ನೆಯ ಕಿಂಡಿ ತೆರೆದು ಕೊಂಡು ಹೊರ ಬೀಳುತ್ತದೆ. ವ್ಯಕ್ತಿ ಮತ್ತು ದನಿಯ ನಡುವಿನ ಇಲ್ಲಿನ ಸಂಬಂಧವೇ ಭಿನ್ನವಾಗಿತ್ತು. ಕ್ರಿ.ಶ ೧೪೯೦ಕ್ಕೆ ಈ ವಾದ್ಯ ಭಾರತಕ್ಕೆ ಬಂದಿತು. ಕ್ರಿ.ಶ ೧೫೦೭ರ ಹೊತ್ತಿಗೆ ಆಗಲೇ ದೇಶಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿತು. ಇದಕ್ಕೆ ಮುಖ್ಯ ಕಾರಣ ಎಷ್ಟು ದೂರಕ್ಕೆ ಬೇಕಾದರೂ ಸಾಗಿಸಬಲ್ಲ ಗಟ್ಟಿಮುಟ್ಟುತನ, ಸಮೂಹ ವಾದ್ಯಕ್ಕೆ ಬೇಕಾಗುವ ಎಲ್ಲಾ ಗುಣ ಲಕ್ಷಣಗಳು, ಕಲಿಯುವುದು ಉಳಿದ ವಾದ್ಯಗಳಿಗೆ ಹೋಲಿಸಿದರೆ ಸುಲಭ ಆಗಿರುವುದು. ಸಮಸ್ಯೆ ಇದ್ದಿದ್ದು ಆಧಾರ ಶ್ರುತಿಯದು.

ಭಾರತೀಯ ಎಲ್ಲಾ ವಾದ್ಯಗಳಲ್ಲಿಯೂ ಆಧಾರ ಶ್ರುತಿ ಇದ್ದೇ ಇರುತ್ತಿತ್ತು. ಹಾರ‍್ಮೋನಿಯಂನಲ್ಲಿ ಅದಕ್ಕೆ ಅವಕಾಶವೇ ಇರಲಿಲ್ಲ. ಕ್ರಮೇಣ ಇದಕ್ಕೂ ಪರಿಹಾರ ಕಂಡು ಹಿಡಿಯಲಾಯಿತು. ಮೂರು ಸಪ್ತಕಗಳಿಗೆ ಸ್ವರ ವಿನ್ಯಾಸವನ್ನು ಜೋಡಿಸಲಾಯಿತು. ಕ್ರಮೇಣ ಕೆಲವು ಮುಖ್ಯ ಬದಲಾವಣೆಗಳೂ ಸಂಭವಿಸಿದವು. ಪಾಶ್ಯಾತ್ಯರಂತೆ ಹತ್ತು ಬೆರಳನ್ನು ಬಳಸುವ ಬದಲು ಐದು ಬೆರಳನ್ನು ಬಳಸಿ ಇನ್ನೊಂದು ಕೈಯಿಂದ ಗಾಳಿ ತುಂಬುವAತೆ ವಿನ್ಯಾಸವಾಯಿತು. ಸುಮಾರು ಇನ್ನೂರು ವರ್ಷಗಳ ಕೆಳಗೆ ಕೊಲ್ಕತ್ತದ ಡ್ವಾರ್ಕಿನ್ ಎಂಬ ಸಂಸ್ಥೆ ಹಾರ‍್ಮೋನಿಯಂನ ವ್ಯವಸ್ಥಿತ ಸುಧಾರಣೆಗೆ ಕೈ ಹಾಕಿತು ಎನ್ನುವ ಅಭಿಪ್ರಾಯವಿದೆ. ಈ ವೇಳೆಗಾಗಲೇ ದೇಶದ ಹಲವು ಹತ್ತು ಕಡೆ ಸುಧಾರಣೆಯ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಈಗ ಎಲ್ಲರ ಅಭಿಪ್ರಾಯವೂ ಸೆರಿದ ಸುಧರಣೆ ವ್ಯವಸ್ಥಿತವಾಗಿ ನಡೆಯಿತು. ಈಗ ಹಾರ‍್ಮೋನಿಯಂ ಭಾರತೀಯ ವಾದ್ಯವೇ ಆಗಿ ಬಿಟ್ಟಿತು. ಪೋರ್ಚಿಗೀಸರಿಗೇ ಈ ವಾದ್ಯ ಅಪರಿಚಿತವಾಗಿ ಬಿಟ್ಟಿತು. ರಂಗಭೂಮಿಯ ಆರಂಭಿಕ ದಿನಗಳಿಂದಲೂ ಆಧಾರ ವಾದ್ಯವಾಗಿ ಒದಗಿ ಬಂದಿದ್ದು ಹಾರ‍್ಮೋನಿಯಂ. ಈ ಎಲ್ಲಾ ವಿಚಾರಗಳು ಚರ್ಚೆಗೆ ಬಂದಿದ್ದರೂ ಚಿಕ್ಕ ಶಾಸ್ತ್ರದ ಕಾರಣಕ್ಕೆ ಮಹತ್ವ ಸಿಕ್ಕಿ ಬಿಟ್ಟಿತ್ತು.

ಆಕಾಶವಾಣಿಯಿಂದ ಹಾರ‍್ಮೋನಿಯಂಗೆ ಗೇಟ್ ಪಾಸ್ ಸಿಕ್ಕಿದ್ದರೂ ಹಾರ‍್ಮೋನಿಯಂ ಬಳಸಿದ ಚಿತ್ರಗೀತೆಗಳಿಗೆ ಅವಕಾಶವಿತ್ತು. ಈ ಕುರಿತು ಯಾರೂ ಅಷ್ಟಾಗಿ ಗಮನ ಹರಿಸಿರಲಿಲ್ಲ. ಡಾ.ಬಿ.ವಿ.ಕೇಸ್ಕರ್ ಅವರು ವಾರ್ತಾ ಪ್ರಸಾರ ಸಚಿವರಾದಾಗ (೧೯೫೨-೧೯೬೧) ಈ ಸಂಗತಿಗೆ ಮಹತ್ವ ಬಂದಿತು. ಹಾರ‍್ಮೋನಿಯಂ ಅನ್ನು ಚಿತ್ರಗೀತೆಗಳು ಬಳಸುವುದರಿಂದ ಅವುಗಳಿಗೂ ಆಕಾಶವಾಣಿಯಲ್ಲಿ ಅವಕಾಶವಿಲ್ಲ ಎಂಬ ತೀರ್ಮಾನವನ್ನು ೧೯೫೩ರಲ್ಲಿ ತೆಗೆದು ಕೊಳ್ಳಲಾಯಿತು. ಆ ವೇಳೆಗಾಗಲೇ ಚಿತ್ರಗೀತೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿದ್ದವು. ಇದು ದೊಡ್ಡ ಪ್ರಮಾಣದ ಪ್ರತಿಭಟನೆಗೆ ಕಾರಣವಾಯಿತು. ಕೊನೆಗೆ ಕೀಳು ಮಟ್ಟದಲ್ಲದ ಭಾರತೀಯ ಸಂಸ್ಕೃತಿಗೆ ಪೂರಕವಾದ ಚಿತ್ರಗೀತೆಗಳನ್ನು ಪ್ರಸಾರ ಮಾಡ ಬಹುದು ಎನ್ನುವ ವಿನಾಯತಿ ದೊರಕಿತು. ಆದರೆ ಇದಕ್ಕೆ ಮಾನದಂಡ ಯಾವುದು? ಆಕಾಶವಾಣಿಯಲ್ಲಿ ಈ ಅಸ್ಪಷ್ಟತೆ ಬಹುಕಾಲ ಮುಂದವರೆದಿತ್ತು. ೧೯೫೫ರಲ್ಲಿ ‘ಸಿನಿಮಾ ಹಾಡುಗಳನ್ನೇ ನಿಲ್ಲಿಸಿ ಬಿಡಿ, ಹೊರ ಹಾಕಿ’ ಎನ್ನುವ ಹೇಳಿಕೆಯನ್ನು ಕೇಸ್ಕರ್ ಕೊಟ್ಟರು.

ಕೆಲ ಕಾಲ ಚಿತ್ರಗೀತೆಗಳೇ ಪ್ರಸಾರವಾಗದ ಸ್ಥಿತಿ ಕೂಡ ಬಂದಿತು. ಕೊನೆಗೆ ಭಕ್ತಿ ಪ್ರಧಾನ ಗೀತೆಗಳಿಗೆ ಅವಕಾಶವಿರಲಿ ಎಂಬ ಒಪ್ಪಿಗೆ ಸಿಕ್ಕಿತು. ೧೯೬೧ರವರೆಗೂ ಅಂದರೆ ಕೇಸ್ಕರ್ ಅವರು ವಾರ್ತ ಸಚಿವರಾಗಿ ಇರುವವರೆಗೂ ಆಕಾಶವಾಣಿಯಲ್ಲಿ ಚಿತ್ರಗೀತೆಗಳು ಪ್ರಸಾರವಾಗುವುದರ ಕುರಿತು ಇರುವ ಗೊಂದಲ ಮುಂದುವರೆದೇ ಇತ್ತು. ಅವರ ನಂತರ ಗೋಪಾಲ ರೆಡ್ಡಿಯವರು ಸಚಿವರಾದ ನಂತರ ಚಿತ್ರಗೀತೆಗಳ ಬಹಿಷ್ಕಾರ ಹೊರಟು ಹೋಯಿತು. ಆದರೆ ಹಾರ‍್ಮೋನಿಯಂ ಬಹಿಷ್ಕಾರ ಮುಂದುವರೆಯಿತು. ಅವರೂ ಕೂಡ ಎಂತಹ ಪ್ರತಿಭಟನೆಗಳಿಗೂ ಬಗ್ಗದೆ ಹೋದ ಕಾರಣ ಚಿತ್ರಗೀತೆಗಳ ಕುರಿತು ಆತಂಕ ಇದ್ದೇ ಇತ್ತು.ಅವರ ನಂತರ ಸಚಿವರಾಗಿ ಬಂದ ಕೆ.ಕೆ.ಶಹಾ ಎಲ್ಲರ ಅಭಿಪ್ರಾಯಗಳನ್ನು ಪರಿಶೀಲಿಸಿ ೧೯೭೧ರಲ್ಲಿ ಹರ‍್ಮೊನಿಯಂ ಕುರಿತೇ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಿದರು. ಹಲವು ತಜ್ಞರು ಅಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಹಾರ‍್ಮೋನಿಯಂ ಭಾರತೀಯ ವಾದ್ಯ ಎನ್ನುವುದು ಇಲ್ಲಿ ತೀರ್ಮಾನವಾಗಿ ಆಕಾಶವಾಣಿಯಲ್ಲಿ ೩೧ ವರ್ಷಗಳ ಸುದೀರ್ಘ ಅಂತರದ ನಂತರ ಅವಕಾಶವನ್ನು ಪಡೆಯಿತು. ಶ್ರೇಷ್ಠ ಹಾರ‍್ಮೋನಿಯಂ ವಾದಕರ ಏಕವ್ಯಕ್ತಿ ಪ್ರದರ್ಶನಕ್ಕೂ ಅವಕಾಶ ಸಿಕ್ಕಿತು. ಆದರೆ ಅಷ್ಟರ ಒಳಗಾಗಲೇ ಚಿತ್ರಗೀತೆಗಳು ಆಕಾಶ ವಾಣಿಯ ಅವಿಭಾಜ್ಯ ಅಂಗಗಳಾಗಿ ಬಿಟ್ಟಿದ್ದವು ಎನ್ನುವುದು ಇನ್ನೊಂದು ರೋಚಕ ಕಥೆ.

ಸಮೂಹ ಮಾಧ್ಯಮಗಳ ಅಗತ್ಯ ಸ್ವಾತಂತ್ರ್ಯಾನಂತರ ಹೆಚ್ಚಾಗುತ್ತಾ ಹೋಯಿತು. ಸಾಕ್ಷರತೆಯ ಪ್ರಮಾಣ ಕೂಡ ಹೆಚ್ಚಾಗಿ ಜನ ನಿತ್ಯ ಸುದ್ದಿಗಳಿಗೆ ಗಮನ ಕೊಡಲು ಶುರು ಮಾಡಿದರು. ಆಕಾಶ ವಾಣಿಯ ಜನಪ್ರಿಯತೆಯೂ ಹೆಚ್ಚಿತು. ಇನ್ನೊಂದು ಕಡೆ ಚಲನಚಿತ್ರ ಕೂಡ ದಿನದಿಂದ ದಿನಕ್ಕೆ ಜನಪ್ರಿಯ ಮಾಧ್ಯಮವಾಗಿ ಬೆಳೆಯುತ್ತಾ ಇತ್ತು. ಚಿತ್ರಗೀತೆಗಳಿಗೆ ಬೇಡಿಕೆ ಹೆಚ್ಚುತ್ತಲೇ ಇತ್ತು. ಆದರೆ ಸರ್ಕಾರದ ಅಸ್ಪಷ್ಟ ನೀತಿ ಚಿತ್ರಗೀತೆಗಳ ಪ್ರಸಾರಕ್ಕೆ ಸಮಸ್ಯೆಯನ್ನು ಉಂಟು ಮಾಡಿತ್ತು. ಇದರ ಲಾಭವನ್ನು ಪಡೆದು ಕೊಂಡಿದ್ದು ರೇಡಿಯೋ ಸಿಲೋನ್. ೧೯೨೫ರ ಡಿಸಂಬರ್ ೧೬ರಂದು ಕೊಲೊಂಬೋ ರೇಡಿಯೋ ಎಂದು ಆರಂಭವಾದ ಇದು ಏಷ್ಯದ ಮೊಟ್ಟ ಮೊದಲ ರೇಡಿಯೋ ಕೇಂದ್ರ, ಬಿಬಿಸಿ ನಂತರ ಜಗತ್ತಿನಲ್ಲಿಯೇ ಸ್ಥಾಪಿತವಾದ ಎರಡನೇ ರೇಡಿಯೋ ಕೇಂದ್ರ. ಮೀಡಿಯಂ ವೇವ್‌ನಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇದು ಆರಂಭವಾದರೂ ಬಹುಬೇಗ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು. ೧೯೪೯ರಲ್ಲಿ ಇದು ಸರ್ಕಾರದ ಒಡೆತನಕ್ಕೆ ಬಂದಿತು. ಇದರ ಶಕ್ತಿಶಾಲಿ ತರಂಗಗಳು ಭಾರತದ ಬಹುತೇಕ ಕಡೆ ಈ ಕೇಂದ್ರ ಕೇಳುವಂತೆ ಮಾಡಿದವು. ಭಾರತದಲ್ಲಿ ಹಾರ‍್ಮೋನಿಯಂ ಗೊಂದಲದಿಂದ ಚಿತ್ರಗೀತೆಗಳು ಬಹಿಷ್ಕಾರ ಎದುರಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಗಡಿಯಾಚೆ ಕಾರ್ಯ ನಿರ್ವಹಿಸುತ್ತಿದ್ದ ರೇಡಿಯೋ ಸಿಲೋನ್‌ನಿಂದ ಚಿತ್ರಗೀತೆಗಳನ್ನು ಪ್ರಸಾರ ಮಾಡಿದರೆ ಹೇಗೆ ಎಂದು ಭಾರತೀಯ ಚಿತ್ರರಂಗದ ಕೆಲವು ಪ್ರಮುಖರು ಯೋಚಿಸಿದರು.

೧೯೫೦ರಲ್ಲಿ ಡಾನ್ ಮೋಲಿಯಾ, ಫ್ರಾಂಕ್ ಚೌಧರಿ, ಎಸ್.ಹರಿಹರನ್ ಚಿತ್ರರಂಗದ ಪರವಾಗಿ ರೇಡಿಯೋ ಸಿಲೋನ್ ಬಳಿ ಮಾತುಕತೆ ನಡೆಸಿ ಚಿತ್ರಗೀತೆಗಳನ್ನು ಒದಗಿಸುವ ಹೊಣೆಯನ್ನು ಹೊತ್ತರು. ಮೊದಲ ದಿನದಿಂದಲೇ ಇಲ್ಲಿ ಚಿತ್ರಗೀತೆಗಳ ಪ್ರಸಾರ ಅಪಾರ ಜನಪ್ರಿಯತೆಯನ್ನು ಪಡೆದು ಕೊಂಡಿತು. ಅಷ್ಟೇ ಅಲ್ಲ ಪ್ರಾಯೋಜಕರ ಬೆಂಬಲ ಕೂಡ ದೊರಕಿತು. ಇಲ್ಲಿಂದ ಪ್ರಸಾರವಾಗುತ್ತಿದ್ದ ‘ಬಿನಾಕಾ ಗೀತ್ ಮಾಲ್’ ಜನಪ್ರಿಯತೆಯ ತುತ್ತ ತುದಿಗೆ ಏರಿತು. (ಇದು ಕಂಪನಿ ಹೆಸರು ಬದಲಾದ ಮೇಲೆ ಸಿಬಾಕ ಗೀತ್ ಮಾಲ್ ಆಗಿತ್ತು) ೧೯೫೨ರಲ್ಲಿ ಆರಂಭವಾದ ಈ ಕಾರ್ಯಕ್ರಮ ೧೯೮೮ರವರೆಗೆ ರೇಡಿಯೋ ಸಿಲೋನ್ ಮೂಲಕ ಪ್ರಸಾರವಾಯಿತು. ೧೯೮೯ರಲ್ಲಿ ವಿವಿಧ ಭಾರತಿಗೆ ಬದಲಾಗಿ ೧೯೯೪ರವರೆಗೂ ಅಲ್ಲಿ ಪ್ರಸಾರವಾಯಿತು. ಜನಪ್ರಿಯತೆಯ ಆಧಾರದ ಮೇಲೆ ಇಲ್ಲಿ ನಡೆಯುತ್ತಿದ್ದ ನಂಬರ್ ಗೇಮ್ ಅನ್ನು ಜನ ಕುತೂಹಲದಿಂದ ಗಮನಿಸುತ್ತಾ ಇದ್ದರು. ೧೮ ಸಾವಿರದಿಂದ ಆರಂಭವಾದ ಈ ಕಾರ್ಯಕ್ರಮದ ಕೇಳುಗರ ಸಂಖ್ಯೆ ಜನಪ್ರಿಯತೆಯ ಶಿಖರದಲ್ಲಿ ಎರಡು ಲಕ್ಷವನ್ನು ದಾಟಿತ್ತು. ಅಮೀನ್ ಸಯಾನಿ ಈ ಕಾರ್ಯಕ್ರಮವನ್ನು ನಡೆಸಿ ಕೊಡುವ ಮೂಲಕ ಜನಪ್ರಿಯತೆಯ ತುತ್ತ ತುದಿಯನ್ನು ತಲುಪಿದರು. ೧೨ ಡಿಸಂಬರ್ ೧೯೭೭ರಂದು ಮುಂಬೈನಲ್ಲಿ ಈ ಕಾರ್ಯಕ್ರಮದ ಬೆಳ್ಳಿ ಹಬ್ಬದ ಕಾರ್ಯಕ್ರಮ ನಡೆದಾಗ ಇಡೀ ಬಾಲಿವುಡ್ ಅಲ್ಲಿ ಸೇರಿತ್ತು. ಇದು ಕಾರ್ಯಕ್ರಮ ಪಡೆದು ಕೊಂಡಿದ್ದ ಜನಪ್ರಿಯತೆಗೆ ದೊಡ್ಡ ನಿದರ್ಶನ. ಭಾರತೀಯ ಚಿತ್ರ ಸಂಗೀತ ಯಾನದಲ್ಲಿ ಈ ಅರ್ಥದಲ್ಲಿ ‘ಬಿನಾಕಾ ಗೀತ್ ಮಾಲಾ’ಕ್ಕೆ ಬಹಳ ಪ್ರಮುಖ ಸ್ಥಾನವಿದೆ.

ಈಗ ಆಕಾಶವಾಣಿಗೆ ತಾನು ಕಳೆದುಕೊಂಡಿದ್ದು ಏನು ಎನ್ನುವುದು ಖಚಿತವಾಯಿತು. ಡಾ.ಬಿ.ವಿ.ಕೇಸ್ಕರ್ ಅವರ ಅವಧಿಯಲ್ಲಿಯೇ ಚಿತ್ರಗೀತೆಗಳ ಜನಪ್ರಿಯತೆಯನ್ನು ಬಳಸಿಕೊಳ್ಳಲು ಪ್ರತ್ಯೇಕ ಕೇಂದ್ರ ಬೇಕು ಎಂಬ ನಿರ್ಧಾರವನ್ನು ಮಾಡಿತು. ೧೯೫೭ರ ಅಕ್ಟೋಬರ್ ೩ರಂದು ವಿವಿಧ ಭಾರತಿ ಎಂಬ ಚಿತ್ರಗೀತೆಗಳಿಗೆ ಮಹತ್ವ ನೀಡುವ ಆಕಾಶ ವಾಣಿ ಕೇಂದ್ರ ಪ್ರಾರಂಭವಾಯಿತು. ಚಿತ್ರಗೀತೆಗಳು ಇಲ್ಲಿಯೂ ಜನಪ್ರಿಯತೆಯನ್ನು ಪಡೆಯಲು ಆರಂಭಿಸಿದವು. ದೇಶದ ವಿವಿಧ ಭಾಗಗಳಲ್ಲಿಯೂ ಇಂತಹ ಅಗತ್ಯ ಕಂಡು ಬಂದಿದ್ದರಿಂದ ೧೯೬೧ರಿಂದ ೧೯೬೬ರ ನಡುವೆ ೨೬ ವಿವಿಧ ಭಾರತಿ ನಿಲಯಗಳು ದೇಶದೆಲ್ಲೆಡೆ ಕಾರ್ಯಾರಂಭ ಮಾಡಿದವು. ೧೯೬೭ರಲ್ಲಿ ವಿವಿಧ ಭಾರತಿಯ ಮೂಲಕ ಜಾಹಿರಾತಿಗೂ ಅವಕಾಶ ದೊರಕಿ ಅದು ವಾಣಿಜ್ಯ ಕೇಂದ್ರವಾಯಿತು. ಈ ಮೂಲಕ ಸ್ಪರ್ಧಾತ್ಮಕತೆ ಸಾಧ್ಯವಾಯಿತು. ಈಗ ದೇಶಾದ್ಯಂತ ೪೦ಕ್ಕೂ ಹೆಚ್ಚು ವಿವಿಧ ಭಾರತಿ ಕೇಂದ್ರಗಳು ಇದ್ದು ಚಿತ್ರಗೀತೆಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಿವೆ. ಇಲ್ಲಿನ ಸಂಗೀತ್ ಸರಿತಾ, ಬುಲೆ ಬಿಸರೆ ಗೀತ್, ಹವಾ ಮಹಲ್, ಜಯಮಾಲಾ, ಛಾಯಾಗೀತ್ ಮೊದಲಾದ ಕಾರ್ಯಕ್ರಮಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿವೆ.

ಈ ಅಂಕಣದ ಇತರೇ ಆಯ್ದ ಭಾಗಗಳನ್ನು ಓದಲು ಕ್ಲಿಕ್ ಮಾಡಿ

Published On - 12:32 pm, Sun, 7 August 22

ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Horoscope: ಈ ರಾಶಿಯವರಿಗೆ ಕೆಲಸದಲ್ಲಿ ಜಯ ಮತ್ತು ಧನಯೋಗ
Daily Horoscope: ಈ ರಾಶಿಯವರಿಗೆ ಕೆಲಸದಲ್ಲಿ ಜಯ ಮತ್ತು ಧನಯೋಗ
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್