Love : ನಿಮಗಾಗೇ ಸುಮ್ಮನೆ ಅಲಂಕರಿಸಿಕೊಂಡೆಷ್ಟು ಕಾಲವಾಯ್ತು ನೆನಪಿದೆಯಾ?

Love : ನಿಮಗಾಗೇ ಸುಮ್ಮನೆ ಅಲಂಕರಿಸಿಕೊಂಡೆಷ್ಟು ಕಾಲವಾಯ್ತು ನೆನಪಿದೆಯಾ?
ಸೌಜನ್ಯ : ಅಂತರ್ಜಾಲ

Self Love : ಕೆಲವರು ನಿಮ್ಮ ಸ್ವ-ಪ್ರೀತಿಯನ್ನು ಹೀಗಳೆಯಬಹುದು. ಸ್ವಾರ್ಥಿ ಎಂತಲೂ ಪರಿಗಣಿಸಬಹುದು. ತೊಂದರೆಯಿಲ್ಲ ನಮ್ಮಿಷ್ಟದ ಬದುಕು ನಡೆಸುವ ಹಕ್ಕು ನಮ್ಮದೇ. ಎಲ್ಲರನ್ನೂ ಮೆಚ್ಚಿಸುವುದು ಖಂಡಿತವಾಗಿಯೂ ಸಾಧ್ಯವಿಲ್ಲ.

TV9kannada Web Team

| Edited By: ಶ್ರೀದೇವಿ ಕಳಸದ | Shridevi Kalasad

Apr 30, 2022 | 4:00 PM

Love : ನನ್ನ ನಾ ಪ್ರೀತಿಸದೆ, ನಿನ್ನ ನೀನು ಮರೆತರೇನು ಸುಖವಿದೇ, ತನ್ನತನವ ತೊರೆದರೇನು ಸೊಗಸಿದೆ! ಸ್ವ-ಪ್ರೇಮಕ್ಕೂ ಸ್ವ- ಅನುಕಂಪಕ್ಕೂ ಹೆಚ್ಚಿನ ವ್ಯತ್ಯಾಸ ಗೋಚರವಾಗದಿದ್ದರೂ ತೆಳುವಾದ ಗೆರೆಯಿದೆ. ಸ್ವಾನುಕಂಪದಲ್ಲಿ ತನ್ನ ಜೀವನದ ಕುರಿತು ತನ್ನದಲ್ಲದ ಕಾರಣಕ್ಕೆನೋವಿದೆ. ಹಾಗೂ ಪರಿಹಾರದ ಯೋಚನೆಗಿಂತ ನೋವಿನ ನಿರಂತರ ಸುಖವಿದೆ. ನಾವಂದುಕೊಂಡಂತೆ ನಾವು ಬದುಕು ನಡೆಸುತ್ತಿಲ್ಲವೆಂದರೆ ಸ್ವ‍ಾವನುಕಂಪ ಸಹಜ. ತಪ್ಪು ಯಾರದ್ದೇ ಇರಲಿ ಬದುಕು ನಮ್ಮದಲ್ಲವೇ. ಸ್ವ-ಪ್ರೀತಿಯೊಂದೇ ಸ್ವಾವಾನುಕಂಪದ ಬದುಕಿನಿಂದ ಮುಕ್ತವಾಗಿ ಸುಂದರ ಜೀವನ ರೂಪಿಸಿಕೊಳ್ಳುವ ದಿವ್ಯೌಷಧ. ಪ್ರೇಮವೇ ಹಾಗೇ ಸಿಹಿ ಜಲದಂತೆ. ಬಾಯಾರಿದ ಬಾಳಿಗೆ ಮಧುರ ಪಾನವೀ ಪ್ರೇಮ. ಬದುಕು ದೌಡಾಯಿಸುತ್ತಿರುವ ಈ ಹೊತ್ತಿನಲ್ಲಿ ವೈಯಕ್ತಿಕವೋ ವ್ಯವಹಾರದಲ್ಲೋ ನೋವಿ ನಲಿವೆಗೆ ಸ್ಪಂದಿಸುವ ಸವಾಲಿನ ಸಂದರ್ಭದಲ್ಲಿ ಆಸರೆಯಾಗುವ ಕುಗ್ಗಿ ಕಂಗೆಟ್ಟಾಗ ಹೆಗಲು ನೀಡುವ ಗೆದ್ದಾಗ ಸಂತಸ ಪಡುವ ಸಖನೋ ಸಖಿಯೋ ಇದ್ದರೆಷ್ಟು ಚೆಂದವಲ್ಲವೇ. ಅಂತಹ ಆತ್ಮ ಸಖನೋ ಸಖಿಯೋ ದೊರಕುವುದು ಎಲ್ಲರಿಗೂ ಸಾಧ್ಯವೇ. ಬಹುಶ ಇಲ್ಲ. ಮಂಜುಳ ಸಿ.ಎಸ್., ಹಾಸನ

ದಿನದ ಇಪ್ಪತ್ತನಾಲ್ಕು ಗಂಟೆಯೂ ಜತೆಯಿರುವ ನಮ್ಮನ್ನು ನಾವೇ ಕಡೆಗಣಿಸಿದರೆ ಹೇಗೇ. ಜನಪ್ರಿಯ ನುಡಿಯೊಂದಿದೆ. ‘ತನ್ನ ತಾನು ಪ್ರೀತಿಸದವರು ಇತರರಿಂದ ಪ್ರೀತಿಸಲ್ಪಡಲು ಗೌರವಿಸಲ್ಪಡಲು ಸಾಧ್ಯವಿಲ್ಲ’. ನಮ್ಮನ್ನು ಇತರರು ಪ್ರೀತಿಸಲಿ ಗೌರವಿಸಲಿ ಆದರಿಸಲಿ ಎಂದು ಎಲ್ಲರೂ ಬಯಸುವವರೇ. ಹಾಗೇ ನಿರಂತರವಾಗಿ ಬೇರೆಯವರು ನಿಮ್ಮನ್ನು ಪ್ರೀತಿಸಿ ಗೌರವಿಸಿ ಆದರಿಸಲು ನೀವು ಒಂದಿಷ್ಟು ಶ್ರಮ ವಹಿಸಲೇ ಬೇಕು. ಮೊದಲಿಗೆ ತನ್ನತನವ ಅಂದರೆ ಸುಂದರವಾದ ವ್ಯಕ್ತಿತ್ವವ ರೂಪಿಸಿ ಕೊಳ್ಳ ಬೇಕು. ವಯಸ್ಸು ಸೌಂದರ್ಯ ಆಕಷ೯ಣೆ ಅಲ್ಪ ಕಾಲದ್ದಾದ್ದರಿಂದ ಇವೆಲ್ಲವೂ ಕಾಲನಂತರ ಮಾಸುವುದರಿಂದ ಹೆಣ್ಣು ಇತರರ ಗಮನ ಸೆಳೆಯುವ ಶ್ರಮಕ್ಕಿಂತ ತನ್ನ ತಾನು ಪ್ರೀತಿಸಿಕೊಳ್ಳುವ ಪ್ರಕ್ರಿಯೆ ಪಾರಂಭಿಸಬೇಕು.

ಬಾಲ್ಯದಿಂದಲೇ ಹುಟ್ಟಿದ ಮನೆಯಿಂದ ಹಿಡಿದು ಮೆಟ್ಟಿದ ಮನೆಯವರೆಗೂ ಇತರರಿಗೆ ನೋವುಂಟಾಗದಂತೆ ಪರರ ಇಚ್ಛೆಗೆ ವೀರೋಧಿಸದೆ ತನ್ನಾಸೆಯೇನೆಯಿದ್ದರೂ ಅದುಮಿಟ್ಟು ಓದಿನಿಂದ ಹಿಡಿದು ಸಂಗಾತಿಯ ಆಯ್ಕೆಯವರೆಗೂ ತನ್ನನ್ನು ಒಪ್ಪಿಸಿಕೊಂಡು (ಈಗಿನ ಪರಿಸ್ಥಿತಿ ಅಲ್ಲಲ್ಲಿ ಸುಧಾರಿಸಿದ್ದು ಹೆಣ್ಣಿಗೆ ಸ್ವಾತಂತ್ರ್ಯವಿರುವುದು ಸುಳ್ಳಲ್ಲ) ಬದುಕಿಡಿ ಪಾಲಿಗೆ ಬಂದದ್ದು ಪಂಚಾಮೃತವೆಂದೇ ಭಾವಿಸಿ ಅಂತರಂಗದ ಮನೆ ಹೊತ್ತಿ ಬೇಗೆಯಲ್ಲಿ ಬೇಯುತ್ತಾ ಹೊರನೋಟಕ್ಕೆ ಕೃತಕ ನಗೆಯೊಂದ ಅಲಂಕರಿಸಿ ಬದುಕ ದೂಡುತ್ತಿರುವ ಅದೆಷ್ಟು ಜೀವಗಳು ನಮ್ಮ ನಡುವೆಯಿಲ್ಲ. ಹಾಗಂತ ವಿವೇಕವುಳ್ಳ ಯಾವುದೇ ಹೆಣ್ಣು ತನ್ನವರ ಕುಟುಂಬದವರ ಪ್ರೀತಿ ಆದರ ಅವರು ಕಟ್ಟಿ ಕೊಟ್ಟ ಸಂಸ್ಕೃತಿ ಸಂಸ್ಕಾರ ಮೌಲ್ಯಗಳ ಮರೆತು ಧಿಕ್ಕರಿಸಿ ತನ್ನಿಷ್ಟದಂತೆ ಬದುಕುವ ಸ್ವಾರ್ಥವನ್ನಿಲ್ಲಿ  ಪ್ರೋತ್ಸಾಹಿಸುವುದು ಸ್ವ-ಪ್ರೇಮವಲ್ಲ. ದಿನ ನಿತ್ಯದ ಬದುಕನ್ನು ತನ್ನ ತಾನು ಪ್ರೀತಿಸಿ ಕೊಂಡು ಗೌರವಿಸಿ ಮತ್ತಷ್ಟು ಸುಂದರಗೊಳಿಸುವ ಪ್ರಕ್ರಿಯೆಯಷ್ಟೇ.

ಇದನ್ನೂ ಓದಿ : ವೈಶಾಲಿಯಾನ: ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ

ಪ್ರಸ್ತುತ ಬದುಕಿನಲ್ಲಿನ ಸುಖ-ದು‌ಃಖಗಳಿಗೆ, ಚಿಕ್ಕಪುಟ್ಟ ಆನಂದದ ಕ್ಷಣಗಳಿಗೆ ಎರವಾಗಬಾರದೆಂದುಕೊಂಡರೆ, ಸುಖವಾಗಿ ಕಳೆದು ಹೋದ ಎಳೆತನದ ದಿನಗಳನ್ನು ನೆನೆಪಿಸಿ ಕೊಂಡು ಕೊರಗುವುದರ ಹೊರತಾಗಿ ಬದುಕನ್ನು ಇದ್ದಂತೆಯೇ ಸ್ವೀಕರಿಸುವುದನ್ನು ಕಲಿತು ರಿಸ್ಕ್​ಗಳನ್ನು ಎದುರಿಸಬಲ್ಲವರಾಗಬೇಕು. ಇತರರು ನಮ್ಮನ್ನು ಯಾವಾಗಲು ಕಾಪಾಡುವರೆಂದು ನಿರೀಕ್ಷಿಸದೆ ನಮ್ಮ ಬಗ್ಗೆ ನಾವೇ ಕಾಳಜಿ ವಹಿಸಬೇಕು. ಮಾನಸಿಕವಾಗಿ  ವಿಕಾಸಗೊಳ್ಳಬೇಕೆಂದರೆ ಮೊದಲು ಅತಿ ಮುಗ್ಧತೆಯನ್ನೂ ಭ್ರಮೆಗಳನ್ನು ತೊಲಗಿಸಿಕೊಳ್ಳುಬೇಕು. ಇರಲಿ ಕಳೆದ ಬದುಕು ಬದಲಾಯಿಸಲಂತೂ ಆಗದ ಮಾತು. ನಾವು ಅತಿ ಅಗತ್ಯವಾಗಿ ನಮಗೆ ನಾವೇ ಸಹಾಯ ಮಾಡಿಕೊಳ್ಳುವ ಅವಕಾಶವಿದೆ. ತನಗೆ ತಾನೇ ಸಹಾಯ ಮಾಡಿಕೊಳ್ಳದವನಿಗೆ ಭಗವಂತನೂ ಸಹಾಯ ಮಾಡಲಾರ. ಹೆಚ್ಚೇನು ವಿಷಯವಿಲ್ಲ ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದಷ್ಟೇ ಮಾಡಬೇಕಾಗಿರುವುದು. ಯಾರೋ ಬಂದು ನಮ್ಮ ಜೀವನವನ್ನು ಬದಲಾಯಿಬಿಟ್ಟಾರೆನ್ನುವ ಕಲ್ಪನೆಯಿಂದ ಹೊರಬಂದು ವಾಸ್ತವವಾಗಿ ಒಮ್ಮೆ ಕನ್ನಡಿಯೆದುರು ನಿಂತು ಸುಮ್ಮನೆ ನಿಮ್ಮನ್ನು ನೀವೆ ಗಮನಿಸಿ ಜತೆಗೆ ಸಹಜವಾಗಿ ನಗಲು ಪ್ರಯತ್ನಿಸಿ. ವಿಷಾದದ ಒಣನಗೆಯೋ ಇಲ್ಲ ಕಾಂತಿಹೀನ ಕಂಗಳು ನಿಮ್ಮನ್ನೊಮ್ಮೆ ಅಣಕಿಸಿದಂತೆ ಭಾಸವಾದರೆ ಸ್ವ- ಪ್ರೀತಿಯ ಕೊರತೆಯಿರುವುದು ಸ್ಪಷ್ಟ.

ನಿಮಗಾಗೇ ಸುಮ್ಮನೆ ಅಲಂಕರಿಸಿ ಕೊಂಡೆಷ್ಟು ಕಾಲವಾಯ್ತು ಗಮನಿಸಿ. ಮನೆಯವರಿಗೆಂದೋ ನೆಂಟರಿಷ್ಟರಿಗೆಂದೋ ಹಲವು ತಿನಿಸುಗಳ ತಯಾರಿಸಿ ಬಡಿಸುವ ನೀವು ನಿಮ್ಮಿಸ್ಟದ ತಿಂಡಿಯೊಂದ ನಿಮಗೆಂದೇ ಕೇವಲ ನಿಮಗಾಗೇ ಮಾಡಿ ತಿಂದದ್ದಿದೆಯೇ ಕೇಳಿಕೊಳ್ಳಿ. ಕಾಲ ಕಳೆದಂತೆ ಮರೆತ ನಿಮ್ಮಮನಸ್ಸಿಗೆ ಮುದ ನೀಡುತ್ತಿದ್ದ ಪ್ರಿಯ ಹವ್ಯಾಸಗಳ ನೆನಪು ಮಾಡಿಕೊಳ್ಳಿ. ಧೂಳಿಡಿದ ಪುಸ್ತಕಗಳನೊಮ್ಮೆ ಓದಲು ಪ್ರಾರಂಭಿಸಿ. ಅದದೇ ಗೋಳಿನ ಧಾರಾವಾಹಿಗಳ ಮಿತಿಗೊಳಿಸಿ ಪ್ರಚಲಿತ ವಿದ್ಯಾಮಾನಗಳ ತಿಳಿಯುವ ಕುತೂಹಲ ಬೆಳೆಯಿಸಿ ಕೊಳ್ಳಿ. ಸಾಮಾಜಿಕ ಮಾಧ್ಯಮದ ಅರಿವು ನಿಮ್ಮ ಜ್ಞಾನವ ಹೆಚ್ಚಿಸಲಿ. ಹೊಸ ಆರೋಗ್ಯಕರ ತಿನಿಸುಗಳ ಪ್ರಯೋಗ ನಡೆಯಿಲಿ. ಅಂದಗೆಟ್ಟ ಮೊಗವು ಸಹಜವಾಗಿ ಕಂಗೊಳಿಸಲಿ. ಆಕಾರಗೆಡುತ್ತಿರುವ ಶರೀರವು ಸಂಜೆಯ ನಡಿಗೆಯನ್ನು ಹಚ್ಚಿಕೊಳ್ಳಲಿ. ಕಾಡು ಹರಟೆಯ ಸಮಯ ಕೊಲ್ಲುವ ಬದಲು ನಿಮ್ಮಿಷ್ಟದ ಅಭಿರುಚಿಗೆ ಹೊಸ ರೂಪ ನೀಡಿ. ಮನೆಯ ಸದಸ್ಯರೊಂದಿಗೆ ಮನಸ್ತಾಪವಿದ್ದರೆ ನಿಧಾನವಾಗಿ ಯೋಚಿಸಿ ಸಂಬಂಧ ಸುಧಾರಿಸುವತ್ತ ಗಮನಿಸಿ. ಆಧ್ಯಾತ್ಮಿಕತೆಯು ಬಾಳಿನಲ್ಲಿ ಬಂದ್ದದನ್ನು ಬಂದ ಹಾಗೆಯೇ ಸ್ವೀಕರಿಸಿಲು ಸಹಾಯಕ.

ಕೆಲವರು ನಿಮ್ಮ ಸ್ವ-ಪ್ರೀತಿಯನ್ನು ಹೀಗಳೆಯಬಹುದು. ಸ್ವಾರ್ಥಿ ಎಂತಲೂ ಪರಿಗಣಿಸಬಹುದು. ತೊಂದರೆಯಿಲ್ಲ ನಮ್ಮಿಷ್ಟದ ಬದುಕು ನಡೆಸುವ ಹಕ್ಕು ನಮ್ಮದೇ. ಎಲ್ಲರನ್ನೂ ಮೆಚ್ಚಿಸುವುದು ಖಂಡಿತವಾಗಿಯೂ ಸಾಧ್ಯವಿಲ್ಲ. ಕನಿಷ್ಟ ನಮ್ಮ ವರನ್ನು ನಾವು ಸಂತುಷ್ಟಗೊಳಿಸಲೂ ಸ್ವ- ಪ್ರೀತಿಯೂ ಕಾರಣ. ಹಳೆಯ ಗಾದೆಯೊಂದರಂತೆ ಬೆಟ್ಟಕ್ಕೆಲ್ಲ ಸೀರೆಯುಡಿಸುವುದು ಸಾಧ್ಯವಿಲ್ಲ . ನಮ್ಮತನವೊಂದನ್ನು ರೂಢಿಸಿ ಕೊಂಡರೆ ಆತ್ಮ ವಿಶ್ವಾಸ ತನ್ನಂತಾನೆ ಜತೆಯಾಗುತ್ತದೆ. ಆಗ ಸಹಜವಾಗೆ ಮೊಗದಲ್ಲಿ ಕಾಂತಿಯೊಂದು ಗೋಚರಿಸಲು ತೊಡಗಿ ಮನಸ್ಸು ಶಾಂತಿ ಸಂತಸದಿಂದ ತುಂಬಿ ಬಾಳು ಆಹ್ಲಾದಕರವಾಗುವುದರಲ್ಲಿ ಸಂದೇಹವಿಲ್ಲ. ಕನಿಷ್ಟ ಪಕ್ಷ ನಮ್ಮ ಬದುಕು ಸಮ್ಮ ನಿಧಾ೯ರದಿಂದಲೇ ಸಲೀಸಾಗಿ ಸಾಗದಿದ್ದರೂ ಪ್ರಾರಂಭದಲ್ಲಿ ಹಲವು ಏಳು ಬೀಳುಗಳ ಕಂಡರೂ ಅಡ್ಡಿಯಿಲ್ಲ. ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂಬಂತೆ ಪ್ರೀತಿಯಿಂದಲೇ ಮನವ ಅನುನಯಿಸಿ ಸಮಾಧಾನ ಮಾಡಿಕೊಳ್ಳುವ ಜವಾಬ್ದಾರಿಯೂ ನಮ್ಮದೇ.

ಇದನ್ನೂ ಓದಿ : ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

Follow us on

Related Stories

Most Read Stories

Click on your DTH Provider to Add TV9 Kannada