New Book: ಸುಮಂಗಲ ಎಸ್ ಮಮ್ಮಿಗಟ್ಟಿಯವರ ‘ಬಯಲ ಬೆರಗು‘ ಕಾದಂಬರಿಗೆ ಗೊ.ರು ಚನ್ನಬಸಪ್ಪರ ‘ಪದಗಳ ಮೆರುಗು’
ದೀನ ದುರ್ಬಲರನ್ನು ಸಂತೈಸುವ, ಅಜ್ಞಾನಿಗಳಲ್ಲಿ ಅರಿವು ಮೂಡಿಸುವ, ಸಾಧಕರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಚರಲಿಂಗವಾಗಿ ಸಂಚರಿಸಿದ ಆತ್ಮಜ್ಞಾನಿ ಅಲ್ಲಮಪ್ರಭು” ಎಂದಿದ್ದಾರೆ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರಸ್ವಾಮೀಜಿ ಅವರು.
ದೀನ ದುರ್ಬಲರನ್ನು ಸಂತೈಸುವ, ಅಜ್ಞಾನಿಗಳಲ್ಲಿ ಅರಿವು ಮೂಡಿಸುವ, ಸಾಧಕರಿಗೆ ಮಾರ್ಗದರ್ಶನ ಮಾಡುವ ಸಲುವಾಗಿ ಚರಲಿಂಗವಾಗಿ ಸಂಚರಿಸಿದ ಆತ್ಮಜ್ಞಾನಿ ಅಲ್ಲಮಪ್ರಭು” ಎಂದಿದ್ದಾರೆ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರಸ್ವಾಮೀಜಿ ಅವರು. ಪ್ರಸ್ತುತ ಕಾದಂಬರಿಯ ಕಥಾನಾಯಕನೇ ಅಲ್ಲಮಪ್ರಭು!
ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನೆಲದ ಕಲ್ಯಾಣದಲ್ಲಿ ನಡೆದ ಅಭೂತಪೂರ್ವ ಸಮಜೋ- ಧಾರ್ಮಿಕ ಆಂದೋಲನದ ಕೇಂದ್ರವಾಗಿದ್ದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಲೋಕಸೋಜಿಗದ ಒಂದು ಅದ್ಭುತ ಚೇತನ: ಅವನ ಆಧ್ಯಾತ್ಮಿಕ ಅರಿವು ಅಗಾಧವಾದದ್ದು ಅನನ್ಯವಾದದ್ದು.
ಸಾಮಾನ್ಯ ಅರಿವಿಗೆ ಸುಲಭವಾಗಿ ನಿಲುಕದ್ದು. ಅವನ ನುಡಿ ಸೋಜಿಗದ ಬಳಿ ಸುಳಿಯಲೂ ಸಾಮಾನ್ಯರು ಅಳುಕುತ್ತಾರೆ. ಅವನನ್ನು ಕುರಿತು ಆಳವಾದ ಅಧ್ಯಯನ ಮಾಡಿದ ಎಲ್ಲೋ ಕೆಲವರು ಮಾತ್ರ, ಅವನ ಅರಿವಿನ ಹಣತೆಯಿಂದ ತಮ್ಮ ಹಣತೆಯನ್ನು ಹಚ್ಚಿಕೊಂಡು ಸಮುದಾಯಕ್ಕೆ ಅಷ್ಟಿಷ್ಟು ಬೆಳಕು ಹಂಚುತ್ತಾ ಬಂದಿದ್ದಾರೆ ಎನ್ನಬಹುದು.
ಇಲ್ಲಿಗೆ ಒಂಭತ್ತು ಶತಮಾನಗಳು ಕಳೆಯುತ್ತಾ ಬಂದರೂ, ಅಲ್ಲಮಪ್ರಭುವಿನ ಕಾಲಮಾನವೂ ಸೇರಿದಂತೆ, ಅವನನ್ನು ಮತ್ತು ಅವನ ವಿಚಾರಧಾರೆಯನ್ನು ಕುರಿತು ನಡೆದಿರುವಷ್ಟು, ಈಗಲೂ ನಡೆಯುತ್ತಲೇ ಇರುವಷ್ಟು ಚರ್ಚೆ, ಚಿಂತನೆ, ವಾದ-ವಿವಾದ, ಸಂವಾದಗಳು,ವಿಮರ್ಶೆ, ವ್ಯಾಖ್ಯಾನಗಳು ಬೇರಾವ ಅನುಭಾವಿಯ ಬಗೆಗೂ ನಡೆದಿರುವಂತೆ ಕಾಣುವುದಿಲ್ಲ ಎನ್ನಬಹುದು. ಇಷ್ಟಾದರೂ, ಅಲ್ಲಮ ಪ್ರಭು ಎಲ್ಲರಿಗೂ ನಿಲುಕಿದ್ದಾನೆ ಎಂದು ಹೇಳುವ ಧೈರ್ಯ ನನಗಂತೂ ಇಲ್ಲ.
ಅಂಥಹ ಗಹನ ಗಂಭೀರ ವ್ಯಕ್ತಿಯ ಜೀವನ ಯಾತ್ರೆಯನ್ನು ವಸ್ತುವನ್ನಾಗಿಟ್ಟುಕೊಂಡು ಕಾದಂಬರಿ ರೂಪದಲ್ಲಿ ದಾಖಲಿಸಿರುವ ಸಾಹಸ ಸೋದರಿ ಸುಮಂಗಲಾ ಎಸ್.ಮುಮ್ಮಿಗಟ್ಟಿ ಅವರದು. ಈ ಸಾಹಸಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ಕಾದಂಬರಿಗಳೆಂದರೆ, ವಿಸ್ತರಿಸಿದ ಸಣ್ಣಕಥಾರೂಪಗಳು: ಕಲಿತ ಪ್ರಸಂಗಗಳ ಅಥವಾ ವಾಸ್ತವ ಘಟನೆಗಳ ವರದಿಗಳು. ಕಾದಂಬರಿಕಾರರು ಆ ಘಟನೆಯ ವರದಿ ನೀರಸವಾಗದಂತೆ ನೋಡಿಕೊಳ್ಳಲು, ಅದಕ್ಕೆ ಒಂದಷ್ಟು ಸಂವಾದ-ಸಂವೇದನೆ ಮತ್ತು ಹಾಸ್ಯ ಸ್ವಾರಸ್ಯಗಳನ್ನು ಒದಗಿಸಬಹುದು. ಈ ಮಾತು ಸಾಮಾಜಿಕ, ಐತಿಹಾಸಿಕ, ರಾಜಕೀಯ, ಪೌರಾಣಿಕ, ವಿಡಂಬನಾತ್ಮಕ ಮತ್ತಿತರ ವರ್ಗದ ಕಾದಂಬರಿಗಳಿಗೆ ಅನ್ವಯವಾಗಬಹುದು.
ಈ ವರ್ಗದ ಕಾದಂಬರಿ ರಚನೆಗೆ ಸೃಜನಶೀಲತೆ ,ಲೋಕಾನುಭವ ಮತ್ತು ಅಧ್ಯಯನಗಳ ಹಿನ್ನೆಲೆ ಸಾಕಾಗಬಹುದು. ಆದರೆ ಪ್ರಸ್ತುತ ಕಾದಂಬರಿ, ಕಾದಂಬರಿ ತಾತ್ವಿಕ ಮತ್ತು ಅನುಭಾವಿಕ. ಇಂತಹ ವಸ್ತುಗಳನ್ನಿಟ್ಟುಕೊಂಡು ಬರೆಯುವವರಿಗೆ ವಿಶೇಷವಾಗಿ ಆ ಬಗೆಗಿನ ಹಿನ್ನೆಲೆ ಅಗತ್ಯವಾಗುತ್ತದೆ. ಈ ಕಾದಂಬರಿಯಲ್ಲಿ ಸುಮಂಗಲಾ ಅವರೇ ಒಂದುಕಡೆ “ಅನುಭಾವಿಗಳು ತಾವಾಗಿಯೇ ಕಾಣಿಸಿಕೊಳ್ಳುವುದಿಲ್ಲ.
ಆದರೆ ಅದೇ ಪಥದಲ್ಲಿ ಸಾಗುತ್ತಿರುವವರು ಮಾತ್ರ ಅವರನ್ನು ಗುರುತಿಸಬಲ್ಲರು” ಎಂದು ಹೇಳಿರುವ ಮಾತು ಸೂಕ್ತವಾಗಿದೆ. ಈ ಮಾತನ್ನು ನಾನು ಸುಮಂಗಲಾ ಅವರಿಗೆ ಅನ್ವಯಿಸುತ್ತೇನೆ. ನನ್ನ ಅನ್ವಯವನ್ನು ಸಮರ್ಥಿಸಲು ಅವರ “ಬಯಲ ಬೆರಗುಓದುಗರ ಮುಂದೆ ಇದೆ.
ಈ ಕಾದಂಬರಿಯ ಕಥಾನಾಯಕ ಅಲ್ಲಮನೇ ಒಂದು ಸೋಜಿಗ. ಹಾಗೆಯೇ, ವಿಜ್ಞಾನ ಸಾಹಿತ್ಯದ ಲೇಖಕಿಯಾಗಿ ಸುಮಂಗಲಾ ಅವರು ಆಧ್ಯಾತ್ಮಸಂಭಂದದ ಕಾದಂಬರಿಯನ್ನು ರಚಿಸಿರುವುದು ಒಂದು ಸೋಜಿಗವೇ! ನಮಗೆಲ್ಲ ತಿಳಿದಿರುವಂತೆ ಸುಮಂಗಲಾ ಎಸ್.ಮುಮ್ಮಿಗಟ್ಟಿ ಅವರು ಸ್ನಾತಕೋತ್ತರ ವಿಜ್ಞಾನದ ಪದವೀಧರರು. ವಿಜ್ಞಾನ ಸಾಹಿತ್ಯ ಮತ್ತು ಸಂವಹನಗಳಲ್ಲಿ ಅವರದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹೆಸರು.
ಲಂಡನ್ನಿನ ಪರಿಸರ ಶಿಕ್ಷಣ ಸಂಸ್ಥೆಯ ಮನ್ನಣೆ ಪಡೆದಿರುವ ಸುಮಂಗಲಾ ಮುಮ್ಮಿಗಟ್ಟಿ ಇರಾನಿನಲ್ಲಿ ನಡೆದ ಅಂತಾರಾಷ್ಟ್ರೀಯ ರೇಡಿಯೋ ಉತ್ಸವದ ಪ್ರಶಸ್ತಿ ಪುರಸ್ಕ್ರತರು. ವಿಜ್ಞಾನಕ್ಕೆ ಸಂಭಂದಿಸಿಯೇ 800ಕ್ಕೂ ಹೆಚ್ಚು ಲೇಖನಗಳನ್ನೂ 38 ಗ್ರಂಥಗಳನ್ನು ರಚಿಸಿರುವ ಅವರಿಗೆ ಸಂದಿರುವ ಪ್ರಶಸ್ತಿಗಳು ಅನೇಕ.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ಮಹಾಮನೆ ಪತ್ರಿಕೆಯ ವಚನ-ವೈಚಾರಿಕತೆ-ವೈಜ್ಞಾನಿಕ ಮನೋಭಾವ ಎಂಬ ಅಂಕಣದ ಶಾಶ್ವತ ಬರಹಗಾರರಾಗಿದ್ದಾರೆ. ಇಂತಹ ವಿಜ್ಞಾನ ಸಾಹಿತ್ಯದ ತಜ್ಞರು ಆತ್ಮವಿಜ್ಞಾನದ ಕೃಷಿಯನ್ನು ನಡೆಸಿರುವುದು ಅಲ್ಲಮನೇ ಹೇಳುವಂತೆ “ ಎತ್ತಣ ಮಾಮರ? ಎತ್ತಣ ಕೋಗಿಲೆ?” ಎನಿಸಬಹುದು.
ಕಣ್ಣಿಗೆ ಕಾಣುವ ವಿಶ್ವದ ಆಕಾರ ಮತ್ತು ಅದರ ಸುತ್ತ ಇರುವ ಕಣ್ಣಿಗೆ ಕಾಣದ ಆವರಣದ ಸ್ವರೂಪ ಕುರಿತಂತೆ ಕ್ರಿಸ್ತಪೂರ್ವದ ಪ್ಲೇಟೋ, ಅರಿಸ್ಟಾಟಲ್, ಸಾಕ್ರೆಟೀಸ್, ಗೆಲಿಲಿಯೋ ಮೊದಲಾದ ಪ್ರಾಚೀನರಿಂದ ಹಿಡಿದು ಐಸ್ಯಾಕ್ ನ್ಯೂಟನ್, ಆಲ್ಬರ್ಟ, ಐನ್ ಸ್ಟೈನ್, ಹೋಮಿಜೆಬಾಬಾ, ಮೊದಲಾದ ಭೌತಶಾಸ್ತ್ರ ವಿಜ್ಞಾನಿಗಳವರೆಗೆ ನಡೆಯುತ್ತಲೇ ಬಂದಿದೆ. ಈಗಲೂ ನಡೆಯುತ್ತಲೇ ಇದೆ.
ಭೌತವಿಜ್ಞಾನಿಗಳ ಪ್ರಕಾರ ಈ ವಿಶ್ವಸೃಷ್ಟಿಯ ಮಹಾಸ್ಪೋಟ (ಬಿಗ್ ಬ್ಯಾಂಗ್ )ದಿಂದ ಈ ಬಯಲು ಕಾಣಿಸಿಕೊಂಡಿತೆಂದು ಹೇಳಲಾಗಿದೆ. ಆದರೆ ಈ ಮಹಾಸ್ಪೋಟಕ್ಕೆ ಮುನ್ನ ಈ ಬಯಲು ಎಲ್ಲಿತ್ತು ಹೇಗಿತ್ತು ಎಂದು ತಿಳಿಸುವುದು ವಿಜ್ಞಾನಕ್ಕೆ ಇನ್ನೂ ಸಾಧ್ಯವಾಗಿಲ್ಲ. ಆದರೂ ಬಯಲಿನ ಉದ್ದ-ಅಗಲ-ಆಳ ಎತ್ತರಗಳನ್ನು ಅಳೆಯುವ ಪ್ರಯತ್ನವೂ ನಿಂತಿಲ್ಲ. ಅದರೆ ಆ ಬಯಲು ಭೌತವಿಜ್ಞಾನದ ಯಾವ ಅಳತೆ ಅಂದಾಜುಗಳಿಗೆ ನಿಲುಕದ್ದು ಎನ್ನುವ ಇನ್ನೊಂದು ವಿಜ್ಞಾನವಿದೆ.
ಅದೇ ಅನುಭಾವ ವಿಜ್ಞಾನ: ಆಧ್ಯಾತ್ಮ ವಿಜ್ಞಾನ ಬಯಲ ವಿಜ್ಞಾನ, ಬಯಲು ಎನ್ನುವುದು ಯಾವುದೇ ಮಾಪಕದಿಂದ ಅಳೆಯಲಾಗದ ಒಂದು ಅನಂತ:ದೃಷ್ಟಿಗೆ ನಿಲುಕದ ದಿಗಂತ. ಅದೊಂದು ಮಹಾರಹಸ್ಯ. ಅ ರಹಸ್ಯವನ್ನು “ಬಯಲು” ಮಾಡಿದ ಬೆರಗೇ ಆತ್ಮಜ್ಞಾನಿ ಅಲ್ಲಮಪ್ರಭು. ವಿಜ್ಞಾನಿಗಳು ತಮ್ಮ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ನಿರೀಕ್ಷಿತ ಅಥವಾ ಅನೀರೀಕ್ಷಿತ ಸಾಫಲ್ಯತೆ ಕಂಡಾಗ, ಬೆರಗಾಗುವಂತೆ ಅಲ್ಲಮಪ್ರಭು ತನ್ನ ಆತ್ಮಾನುಸಂಧಾನದಿಂದ ಅನಿರ್ವಚನೀಯ ಆನಂದವನ್ನು ಕಂಡು, ಬೆರಗಾದಂತೆ, ನಮ್ಮ ಸುಮಂಗಲಾ ತಾಯಿ,ತಮ್ಮ ಗಂಭೀರ ಅಧ್ಯಯನದಿಂದ ಅಲ್ಲಮನನ್ನು ಕಂಡು ಬೆರಗಾಗಿದ್ದಾರೆ.
ಆ ಬೆರಗಿನ ಬೆಳಕಿನಲ್ಲೇ ಈ ಕಾದಂಬರಿ ಮೂಡಿಬಂದಿದೆ. ಅಲ್ಲಮಪ್ರಭುವಿನ ಸತ್ಯದರ್ಶನದ ನಿತ್ಯ ಸಂದೇಶದ ಒಂದು ಸಾಹಸದ ಕೃತಿ ಈ “ಬಯಲ ಬೆರಗು”!
ವಿಜ್ಞಾನಿಗಳು ಮತ್ತು ನಿಘಂಟುಕಾರರು ಹೇಳುವ ಬಯಲೆಂದರೆ – ಮೈದಾನ, ನೆಲ, ಭೂಮಿ, ಶೂನ್ಯ ಠಾವು ಎರಡು ವಸ್ತುಗಳ ನಡುವಣ ಅಂತರ.ವಿಶಾ ಇದೊದೂಲ ಸ್ಥಳ ಇತ್ಯಾದಿ. ಎಷ್ಟೇ ಹೇಳಿದರೂ, ’ಬಯಲು’ ಇದೊಂದೂ ಅಲ್ಲ. ಅಲ್ಲಮ ಹೇಳುವ ಬಯಲೇ ಬೇರೆ. ಅವನ ಮಾತಿನಲ್ಲೇ ಹೇಳುವುದಾದರೆ ಅದು “ಬಚ್ಚ ಬರಿಯ ಬಯಲು”
ಇದುವರೆಗೆ ನಮಗೆ ದೊರಕಿರುವ ಅಲ್ಲಮನ 1636 ವಚನಗಳಲ್ಲಿ ’ಬಯಲು’ ಶಬ್ದ ನೇರವಾಗಿ 108 ಕಡೆ ಬಳಕೆಯಾಗಿದೆ. ಉಳಿದ ವಚನಗಳೂ ಒನ್ದು ರೀತಿ ಆ ಬಯಲಿನಲ್ಲೇ ಸಂಚರಿಸುತ್ತವೆ!
ಅಲ್ಲಮನ ಪರಿಭಾಷೆಯಲ್ಲಿ ’ಬಯಲು’ ಎಂದರೆ ಎನೂ ಇಲ್ಲದ್ದೂ ಹೌದು; ಎಲ್ಲವೂ ಇರುವುದೂ ಹೌದು. ಅದು ಅಗಮ್ಯ, ಅಗೋಚರ ನಿರಾಕಾರ, ನಿರ್ವಿಕಾರ. ಸಂದು-ಭೇದವಿಲ್ಲದ ಆ ಬಯಲನ್ನು ಕಂಡು ’ಬೆರಗಾದೆ’ ಸ್ನ್ನುತ್ತಾನೆ ಅಲ್ಲಮ. ಅದು ನಿತ್ಯವನ್ನು ಅರಿಯುವ. ಸತ್ಯವನ್ನು ಸಾಧಿಸುವ ಅವಸ್ಥೆ ಅನ್ನುತ್ತಾನೆ. ಅದು ಹೊರಗಣ ಒಳಗು, ಒಳಗಣ ಹೊರಗು. ಕೇವಲ ಬೆರಗು.
ಸೃಷ್ಟಿಪೂರ್ವದ ಪರವಸ್ತುಗಳನ್ನು ’ಶೂನ್ಯ’ ಎಂದೇ ಕರೆಯಲಾಗಿದೆ. ಈ ಶೂನ್ಯದಲ್ಲಿ ಸೇರಿ ನಿಶ್ಯೂನ್ಯವಾಗುವುದೇ ಅಲ್ಲಮ ಹೇಳುವ ಬಯಲಾಗುವುದು.ಅವನೇ ಒಂದು ಕಡೆ “ನೀನು ಬಯಲಾದೆ ನನ್ನನ್ನೂ ಬಯಲು ಮಾಡು” ಎಂದು ಗುಹೇಶ್ವರನಲ್ಲಿ ಭಿನ್ನವಿಸಿಕೊಂಡಿದ್ದಾನೆ. ಏನಿದ್ದರೂ, ಅಲ್ಲಮನಂತಹ ಮಹಾನುಭಾವಿಗೆ ಮಾತ್ರ ಸಲ್ಲುವ ತಾಣ ’ಬಯಲು’. ಅವನ ವಚನಗಳಲ್ಲಿ ಬಯಲು, ಬೆಳಗು,ಬೆರಗು ಶಬ್ದಗಳು ಮತ್ತೆ ಮತ್ತೆ ಬರುತ್ತವೆ. ಏಕೆಂದರೆ, ಅವನ ಅರಿವು-ಇರುವುಗಳೆಲ್ಲ ಬಯಲೇ!
ಕೇವಲ ಅಂತರಂಗ ವೇದ್ಯವಾದ ಈ ಬಯಲಿನ ಅನುಭವ ಎಂತಹುದೆಂದರೆ ’ಅನುಭಾವ್ಯ ದೃಷ್ಟಿಯಲ್ಲಿ , ಅನ್ನಕ್ಕೂ ಹಸಿವಾಗುತ್ತದೆ, ನೀರಿಗೂ ಬಾಯಾರುತ್ತದೆ, ಅಗ್ನಿಗೂ ಚಳಿಯಾಗುತ್ತದೆ, ಆಕಾಶ ಕೈಗೆ ಸಿಕ್ಕಿತ್ತದೆ, ವಾಯು ಹಿಡಿತಕ್ಕೆ ಈಡಾಗುತ್ತದೆ. ನಾವು ಅಗ್ನಿಯನ್ನು ಬಳಸಿ ಕಟ್ಟಿಗೆಯನ್ನು ಸುಟ್ಟರೆ, ಅವನು ಅಗ್ನಿಯನ್ನೇ ಸುಡುತ್ತಾನೆ. ನಾವು ನೀರನ್ನು ಬಳಸಿ ಕೊಳಕು ತೊಳೆದರೆ, ಅವನು ನೀರನ್ನೇ ತೊಳೆಯುತ್ತಾನೆ. ಅದು ಎಷ್ಟು ಅದ್ಭುತವೆಂದರೆ, ತಾನಿರುವ ಬಯಲನ್ನೇ ಸುಟ್ಟು, ಅದರ ಬೂದಿಯನ್ನು ಭಸ್ಮಮಾಡಿ ಹಣೆಗೆ ಧರಿಸಿಕೊಳ್ಳುತ್ತಾನೆ.
ಅಂತರಂಗದ ಅನುಸಂಧಾನದ ಅನಂತವಾದ ಅಲ್ಲಮಪ್ರಭು ತನ್ನೊಂದು ತನ್ನೊಂದು ವಚನದಲ್ಲಿ “ಅನುಭಾವ” ಎನ್ನುವುದು “ಸುತ್ತಿಸುತ್ತಿ ಬಂದಡಿಲ್ಲ, ಲಕ್ಷಗಂಗೆಯ ಮಿಂದಡಿಲ್ಲ, ತುಟ್ಟತುದಿಯ ಮೇರುಗಿರಿಯ ಮೆಟ್ಟಿಕೂಗಿದಡಿಲ್ಲ. ನಿತ್ಯನೇಮದಿಂದ ತನುವ ಮುಟ್ಟಿಕೊಂಡಡಿಲ್ಲ. ಅತ್ತಲಿತ್ತ ಹರಿವ ಮನವ ಚಿತ್ತದಲಿ ನಿಲಿಸಬಲ್ಲಡೆ ಬಚ್ಚ ಬರಿಯ ಬೆಳಗು ಗುಹೇಶ್ವರಾ” ಎಂದು ಹೇಳಿ ಅನುಭಾವದ ಗುಟ್ಟನ್ನೇ ಬಯಲು ಮಾಡುತ್ತಾನೆ.
ಕತ್ತಲೆ-ಬೆಳಕು ಎರಡೂ ಪರಸ್ಪರ ವಿರುದ್ಧ ಸ್ಥಿತಿಗಳು. ಆದರೂ, ಅವೆರೆಡರ ಮಧ್ಯೆ ಯಾವುದೇ ಘರ್ಷಣೆಯಿಲ್ಲ. ಕತ್ತಲೆ ಕವಿಯುತ್ತಿದ್ದಂತೆ ಬೆಳಕು ಮರೆಯಾಗುತ್ತದೆ. ಅದು ಸದ್ದಿಲ್ಲದ ನಡೆಯುವ ಪ್ರಕ್ರಿಯೆ. ಹಾಗೆ ಸದ್ದಿಲ್ಲದೆ ಭಾವ ಬತ್ತಲೆಯಾಗಿ, ಮನ ದಿಗಂಬರವಾಗುವುದೇ ಬಯಲು. ಕತ್ತಲಿರಲಿ-ಬೆಳಕಿರಲಿ ಬಯಲು ಮಾತ್ರ ಶಾಶ್ವತ: ನಿಶ್ಚಿತ. ಆ ನಿಶ್ಚಿತದೊಡನೆ ಬೆರೆದು ನಿಶ್ಚಿಂತವಾಗುವುದೇ ಅನುಭಾವ.
ನಾವು ಭೌತಿಕವಾಗಿ ಸಾಧಿಸಿರುವ ಸಾಧನೆ ಸಾಮಾನ್ಯವಾದುದೇನೂ ಅಲ್ಲ. ಆದರೂ ಬದುಕಿಗೆ ನೆಮ್ಮದಿಯಿಲ್ಲ. ಭೌತಿಕ ಸಾಧನೆಯಂತೆ ಆತ್ಮಿಕ ಸಾಧನೆಯೂ ನಡೆಯುವುದಾದರೆ ಅಲ್ಲಮನ “ಅನುಭಾವ” ಎಲ್ಲರದೂ ಆಗಬಹುದು. ನಮಗೆ ಬುದ್ಧಿಯೇನೋ ಇದೆ: ಆದರೆ ಶ್ರದ್ಧೆಯಿಲ್ಲ. ಐಹಿಕ ಬೆಡಗು- ಬಿನ್ನಾಣಗಳಿಗೆ ತಮ್ಮ ತನು-ಮನಗಳನ್ನು ಅಡವಿಟ್ಟು ಬಡವಾಗಿರುವ, ಬರೀ ಹೊರಗಿನ ಆಕರ್ಷಣೆಗಳಿಗೆ ಮರುಳಾಗಿ, ತಮ್ಮ ಬದುಕಿನ ಗುರಿಯನ್ನೇ ಮರೆತಿರುವ ಲೋಕದ ಜನರಿಗೆ ಸುಮಂಗಲಾ ಮುಮ್ಮಿಗಟ್ಟಿ ಅವರ ಈ ಕಾದಂಬರಿ ಅಲ್ಲಮ ಪ್ರಭುವಿನ ಅನುಭಾವದ ಬೆಳಕಿನತ್ತ ನಡೆಯಲು ಪ್ರೇರಕವಾಗಿದೆ ಎಂದು ನಾನು ತಿಳಿದಿದ್ದೇನೆ.
ಈ ಕಾದಂಬರಿಯ ಮೂಲಕ ಅಲ್ಲಮಪ್ರಭುವಿನ ಕಥೆ ಹೇಳಬೇಕೆಂಬುದು ಸುಮಂಗಲಾ ಮುಮ್ಮಿಗಟ್ಟಿ ಅವರ ಉದ್ದೇಶವಲ್ಲ. ಇಲ್ಲಿ ಪ್ರಧಾನವಾಗಿ ಕಂಡುಬರುವುದು. ಕೇವಲ ಅನುಭಾವ ಚಿಂತನೆ. ಈ ದೃಷ್ಟಿಯಿಂದ, ಈ ಕಾದಂಬರಿ ಅಸಾಧರಣವೆಂದೇ ನಾನು ಭಾವಿಸುತ್ತೇನೆ. ಈ ಕಾದಂಬರಿಕಾರ್ತಿ ಇಲ್ಲಿ ಅಲ್ಲಮ ಪ್ರಭು ಮತ್ತು ಅವನ ಸಂಪರ್ಕಕ್ಕೆ ಬಂದ ಶರಣರ ವಚನಗಳನ್ನೇ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಂದರ್ಭೋಚಿತವಾಗಿ ಸಂಯೋಜಿಸಿ, ಆ ಮೂಲಕವೇ ಕಥಾಲಾಪ ನಡೆಸಿರುವುದು ಒಂದು ಗಮನಾರ್ಹ ಪ್ರಯೋಗವೆನ್ನಬಹುದು.
ಈ ಪ್ರಯೋಗಕ್ಕೆ ಹಿಂದಿನ “ಶೂನ್ಯಸಂಪಾದನೆ” ಗಳು ಪ್ರೇರಣೆ ನೀಡಿದ್ದರೂ, ಸುಮಂಗಲಾ ಮುಮ್ಮಿಗಟ್ಟಿ ಅವರ ಇಲ್ಲಿನ ನಿರೂಪಣೆ ನಿಜಕ್ಕೂ ವಿಶಿಷ್ಟವಾಗಿದೆ. ಸಾಮಾನ್ಯವಾಗಿ, ಶೂನ್ಯಸಂಪಾದನಕಾರರು ನಿರೂಪಿಸಿರುವ ಪ್ರಸಂಗಗಳ ಹೊರತಾಗಿ, ಈಚಿನ ಎಲ್ಲ ಓದುಗರು, ವಿದ್ವಾಂಸರು, ವಿಮರ್ಶಕರು, ವ್ಯಾಖ್ಯಾನಕಾರರು, ಪ್ರವಚನಕಾರರು, ಉಪನ್ಯಾಸಕರು ಶರಣರ ವಚನಗಳನ್ನು ಬಿಡಿಬಿಡಿಯಾಗಿ ನೋಡಿರುವುದೇ ಹೆಚ್ಚು.
ಯಾವ ಶರಣರು, ಯಾವ ಸಂದರ್ಭದಲ್ಲಿ ಯಾರನ್ನು ಕುರಿತು, ಯಾವ ವಚನ ಹೇಳಿರಬಹುದು ಆ ಬಿಡಿ ಬಿಡಿ ಚಿಂತನೆಗಳಿಂದ ಸ್ಪಷ್ಟವಾಗದಿರಬಹುದು. ಆದರೆ ಸುಮಂಗಲಾ ತಾಯಿ ಅತ್ಯಂತ ಪರಿಶ್ರಮದಿಂದ ಮತ್ತು ಗಾಢ ಅಧ್ಯಯನದಿಂದ ಅವುಗಳನೆಲ್ಲ ಅರ್ಥಮಾಡಿಕೊಂಡು, ಸಂದರ್ಭೋಚಿತವಾಗಿ ತುಂಬ ಸಹಜವಾಗಿದೆ: ವೈಜ್ಞಾನಿಕವಾಗಿದೆ.
“ಬಯಲ ಬೆರಗಿ” ನಲ್ಲಿ ಅಲ್ಲಮಪ್ರಭುಗಳ ಸಂಪರ್ಕಕ್ಕೆ ಬರುವ ಗೊಗ್ಗಯ್ಯನಿಂದ ಗೋರಕ್ಷನವರೆಗೆ, ಸಿದ್ಧರಾಮನಿಂದ ನುಲಿಯ ಚಂದಯ್ಯನವರೆಗೆ, ಮುಕ್ತಾಯಕ್ಕನಿಂದ ಅಕ್ಕಮಹಾದೇವಿಯವರೆಗೆ, ಮರುಳಶಂಕರದೇವನಿಂದ ಮೋಳಿಗೆ ಮಾರಯ್ಯನವರೆಗೆ,ಘಟ್ಟಿವಾಳಯ್ಯನಿಂದ ಆಯ್ದಕ್ಕಿ ಮಾರಯ್ಯನವರೆಗೆ, ಮಡಿವಾಳ ಮಾಚಿದೇವರು ಮತ್ತಿತರ ಶರಣರವರೆಗೆ, ನಡೆದಿರುವ ವಚನಗಳ ಮೂಲಕವೇ ಆಯಾ ಶರಣರ ವ್ಯಕ್ತಿತ್ವ ವ್ಯಕ್ತವಾಗುತ್ತಾ ಹೋಗುತ್ತದೆ. ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣನವರ ನಡುವೆ ನಡೆದಿರುವ ಸಂವಾದವಂತೂ, ಆ ಮೂರು ಮೇರು ವ್ಯಕ್ತಿಗಳ ದಿವ್ಯದರ್ಶನ ಮಾಡಿಸುತ್ತದೆ.
ಕಾದಂಬರಿಕಾರ್ತಿ ಇಲ್ಲಿನ ಯಾವುದೇ ಪಾತ್ರ ಅಥವಾ ಅದರ ಮಾತುಗಳು, ಸಂದರ್ಭ, ಸಂಗತಿಗಳ ಮೇಲೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳಹೋಗದೆ, ಕನ್ನಡಿಯ ಪ್ರತಿಬಿಂಬದಂತೆ ವಸ್ತುನಿಷ್ಟ ನಿರೂಪಣೆ ಮಾಡಿದ್ದಾರೆ. ಇಲ್ಲಿನ ವಿಶೇಷವೆಂದರೆ, ಉಲ್ಲೇಖಗೊಂಡಿರುವ ಪ್ರತಿಯೊಂದು ವಚನಕ್ಕೂ ಅವರು ನೀಡಿರುವ ಅರ್ಥವಿವರಣೆ ವಚನಾರ್ಥಕ್ಕೆ ಎಲ್ಲೂ ಭಂಗ ಬಾರದಂತೆ ಎಚ್ಚರ ವಹಿಸಿರುವ ಸುಮಂಗಲಾ, ಎಷ್ಟೋ ಕಡೆ ಭಾವುಕರಾಗಿ ಬಿಡುವುದನ್ನುಅವರ ಬರಹದಲ್ಲಿ ಗುರುತಿಸಬಹುದು.
ಸುಮಂಗಲಾ ತಾಯಿ ಅವರು ಅಲ್ಲಮಪ್ರಭುಗಳನ್ನು “ಹುಡುಕಲು” ಸಾಕಷ್ಟು ಶ್ರಮಿಸಿದ್ದಾರೆ. ಅವರ ಬಗೆಗಿನ ಇದುವರೆಗೆ ಲಭ್ಯವಿರುವ ಹರಿಹರನ ಪ್ರಭುದೇವರ ರಗಳೆ, ಚಾಮರಸನ ಪ್ರಭುಲಿಂಗಲೀಲೆ, ಎಳಂದೂರು ಹರಿಹರೇಶ್ವರನ ಪ್ರಭುದೇವ ಪುರಾಣ, ಪರ್ವತೇಶನ ಪ್ರಭುದೇವರ ಸಾಂಗತ್ಯ ಮತ್ತು ಹಿಂದಿನ ನಾಲ್ಕು ಸಂಪಾದನಾ ಗ್ರಂಥಗಳು, ಜನಪದ ಸಾಹಿತ್ಯ, ಸಮಗ್ರ ವಚನ ಸಂಪಟಗಳು ಇತ್ಯಾದಿ. ಸಾಕಷ್ಟು ಗ್ರಂಥಗಳನ್ನು ಅಧ್ಯಯನ ಮಾಡಿ ವಿಷಯ ಸಂಗ್ರಹಿಸಿದ್ದರೂ, ಪ್ರಧಾನವಾಗಿ ಚಾಮರಸನ ಪ್ರಭುಲಿಂಗಲೀಲೆ ಮತ್ತು ಶೂನ್ಯಸಂಪಾದನಾ ಗ್ರಂಥಗಳನ್ನು ಆಧರಿಸಿ ಈ ಕಾದಂಬರಿ ರಚಿಸಿದ್ದಾರೆ.
ಬಳ್ಳಿಗಾವೆಯ ಅರಸರ ಮೂಲಕ ನಡೆಸಿದ ಭೂಮಿಯ ಉತ್ಖನನದಲ್ಲಿ ಗೋಚರವಾದ ಹಳೆಯ ದೇಗುಲವೊಂದರಲ್ಲಿ ದರ್ಶನವಾದ ಅನಿಮಿಷನಿಂದ ಲಿಂಗಕಾರುಣ್ಯ ಪಡೆಯುವ “ಬಿತ್ತಿದ ಬಯಲು” ಪ್ರಸಂಗದಿಂದ ಪ್ರಾರಂಭವಾಗುವ ಕಾದಂಬರಿ, ಅಲ್ಲಮಪ್ರಭುವಿನ ಲೋಕಸಂಗ್ರಹ ಮತ್ತು ಲೋಕಸಂದೇಶದ ದಿವ್ಯಯಾತ್ರೆ ಮುಗಿದು “ಬಯಲು ಬಯಲ ಬೆರೆಯಿತು” ಎನ್ನುವ ಪ್ರಸಂಗದೊಂದಿಗೆ ಅಂತ್ಯಗೊಳ್ಳುತ್ತದೆ.
ಒಟ್ಟು 58 ಸಂದರ್ಭಗಳ ಸರದಿಯ ಈ ಕಾದಂಬರಿಯಯಲ್ಲಿ ಬರುವ ಒಂದೊಂದು ಸಂದರ್ಭವನ್ನು ಆಯಾ ಸಂದರ್ಭಕ್ಕೆ ಸಲ್ಲುವ “ಹದಗೊಳ್ಳುವ ಹಾದಿಯಲ್ಲಿ” ಬಯಲ ಬೆಳೆ ಬೆಳೆಯತೊಡಗಿತು ಸಮರಸದ ಸೊಬಗು ಚಿಂತಿಯಿಲ್ಲದ ಮಹಾಘನ ಮಂಥನದ ನವನೀತ ಅರಿವಿನ ಬೆಳಕಿನಲ್ಲಿ” ಅಂಬರವಿಲ್ಲದ ಮೇರು – ಇಂತಹ ಅರ್ಥಪೂರ್ಣ ಉಪಶಿರ್ಷಿಕೆಗಳೊಂದಿಗೆ ನಿರೂಪಿಸಲಾಗಿದೆ.
ನಾನು ಮೊದಲೇ ಹೇಳಿದಂತೆ, ಸುಮಂಗಲಾ ಮುಮ್ಮಿಗಟ್ಟಿ ಅವರು ಮೂಲತಃ ವಿಜ್ಞಾನ ಸಾಹಿತ್ಯ ಬಲ್ಲಿದರಾದರೂ ಆತ್ಮವಿಜ್ಞಾನ ಸಂಸ್ಕಾರ ಪಡೆದವರು. ಎಂತಲೇ ಅನುಭಾವ ಸಾಹಿತ್ಯದ ಈ ಬೃಹತ್ ಕಾದಂಬರಿ ಅವರಿಂದ ಮೂಡಿಬರಲು ಸಾಧ್ಯವಾಗಿದೆ. ಇದು ಗಾತ್ರದಲ್ಲಿ ಮಾತ್ರವಲ್ಲ, ಪಾತ್ರದಲ್ಲೂ ಮಹತ್ವದ ಕಾದಂಬರಿ ಎನ್ನುವುದು ಇದನ್ನು ಓದಿದ ಯಾರಿಗಾದರೂ ಮನವರಿಕೆಯಾಗದಿರದು. ತಮ್ಮ ಕಥಾ ನಿರೂಪಣೆಯಲ್ಲಿ ಕಾದಂಬರಿಕಾರ್ಥಿ ಅಲ್ಲಮನ 307 ವಚನಗಳು ಮತ್ತು ಬಸವಾದಿ ಶರಣರ 270 ವಚನಗಳು ಹೀಗೆ ಒಟ್ಟು 657 ವಚನಗಳನ್ನು ಉಲ್ಲೇಖಿಸಿ, ಆಯಾ ಸಂದರ್ಭಕ್ಕೆ ಉಚಿತವಾಗಿ ಅನ್ವಯಿಸಿ, ಅರ್ಥ ವಿವರಿಸಿದ್ದಾರೆ.
ಸುಮಂಗಲಾ ತಾಯಿ ಅವರು ಕೆಲವು ಪ್ರಸಂಗಗಳ ಮುಕ್ತಾಯದಲ್ಲಿ ಬಳಸಿರುವ ಮಾತುಗಳಿಂದ ಅವರು ಈ ಕಾದಂಬರಿಯ ರಚನೆಯಲ್ಲಿ ಎಂತಹ ಭಾವಾನುಸಂಧಾನ ನಡೆಸಿದ್ದಾರೆ ಎಂಬುದು ಅರ್ಥವಾಗುತ್ತದೆ. ಉದಾಹರಣೆಗೆ:
ಗುರಿತಲುಪವ ಮುನ್ನ ಬಯಲು ಬೆಳೆಯಬೇಕು: ಮತ್ತಷ್ಟು ಬಯಲುಗಳನ್ನು ಬೆಳೆಯಬೇಕು ಹಾದಿ ಸ್ಪಷ್ಟವಾಗಿದೆ. ಮದ್ದಳೆ ಬಾರಿಸುವ ಅಲ್ಲಮನೆಲ್ಲಿ? ಮಹಾ ಬೆಳಗಿನಲ್ಲಿ ಸಮರಸಗೊಂಡಿರುವ ಅಲ್ಲಮನೆಲ್ಲಿ? ಜ್ಞಾನಧರೆಯನ್ನೆರೆಯಲು ಗುರು ಮನಸ್ಸು ಮಾಡಿದ್ದಾನೆ. ಸ್ವೀಕರಿಸಲು ಶಿಷ್ಯನ ಮನಸ್ಸು ಮಾಡಿದ್ದಾನೆ. ಸ್ವೀಕರಿಸಲು ಶಿಷ್ಯನ ಮನಸ್ಸು ಹದಗೊಂಡಿದೆ.ಇನ್ನೇನು ಆರಂಭವಾಗಲಿದೆ ಮಹಾಜ್ಞಾನಬೋಧೆ. ಭಾವನೆಯ ಅಲೆಗಳು ಬ್ರಹ್ಮಾಂಡದಲ್ಲಿ ಅನುರಣಿಸಿ, ಭಕ್ತಿಯ ಹೊಸ ಬೀಜಗಳಿಗೆ ಜೀವ ಚೈತನ್ಯವನ್ನೆರೆಯಲು ತವಕಿಸುತ್ತಿದ್ದವು. ಶರಣರೆಂದರೆ ನನ್ನ ಮನ ಗರಿ ಬಿಚ್ಚಿದ ನವಿಲಿನಂತಾಗುತ್ತದೆ. ಸುತ್ತಲಿನ ನಿಸರ್ಗ ಆ ಬಯಲು ಬೆರೆಯುವಿಕೆಗೆ ಬೆರಗಾಗಿ ನಿಂತಿತ್ತು.
ಇಲ್ಲಿ ವಚನಗಳನ್ನು ಎಷ್ಟು ಸಂದರ್ಭೋಚಿತವಾಗಿ, ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದಕ್ಕೆ ಕೇವಲ ನಿದರ್ಶನಕ್ಕಾಗಿ ಒಂದೆರೆಡು ಸಂದರ್ಭಗಳನ್ನು ಇಲ್ಲಿ ಉಲ್ಲೇಖಿಸಬಹುದೆಂದು ಕಾಣುತ್ತದೆ.
. ಅಲ್ಲಮಪ್ರಭುವಿನ ಸಂಚಾರದಲ್ಲಿ ಕೃಷಿಕ ಗೊಗ್ಗಯ್ಯನನ್ನು ಕಂಡು ಮಾತುಕತೆ ನಡೆಸಿದಾಗ, ಗೊಗ್ಗಯ್ಯ “ಇದು ನಾನು ಮಾಡುತ್ತಿರುವ ಕೃಷಿ” ಎಂದಾಗ ಅಲ್ಲಮ ಪ್ರಭು “ನಾನೂ ಕೃಷಿಕ” ಎನ್ನುತ್ತಾನೆ. “ನೀವು ಮಾಡುವ ಕೃಷಿಯ ಬಗೆಗೆ ತಿಳಿಸುವಿರಾ? ಎಂದು ಕೇಳಿದ ಗೊಗ್ಗಯ್ಯನಿಗೆ ಅಲ್ಲಮ ಪ್ರಭು “ ತನುತೋಂಟವ ಮಾಡಿ, ಮನವ ಗುದ್ದಲಿ ಮಾಡಿ” ವಚನ ಹೇಳುತ್ತಾನೆ.- (ಗೊಗ್ಗಯನ ಗುರುವಾಗಿ, ಪುಟ……) ಬಹಿರಂಗದ ಕೃಷಿಗಿಂತ ಅಂತರಂಗದ ಕೃಷಿಯಿಂದ ಪಡೆಯುವ ಫ್ಲ ಅನಿರ್ವಚನೀಯವೆಂದು ಮನಗಂಡ ಗೊಗ್ಗಯ್ಯ ಅಲ್ಲಮ ಪ್ರಭುವಿಗೆ ಶರಣಾಗಿ ಶಿಷ್ಯನಾಗುತ್ತನೆ: ಪ್ರಭುಗುರುವಾಗುತ್ತಾರೆ.
ಬಾಲ ಸಿದ್ಧರಾಮ ಹೊಲದಲ್ಲಿ ಬೆಳೆ ಕಾಯುವಾಗ ಪರೀಕ್ಷಾರ್ಥ ಬಂದು ಬೆಳಸಿಯನ್ನು ಬೇಡಿತಿಂದು ಮೊಸರನ್ನ ಬೇಕೆಂದು ಅಪೇಕ್ಷಿಸಿದ ಮತ್ತು ಅವನು ಮನೆಗೆ ಹೋಗಿ ಮೊಸರನ್ನ ತರುವವರೆಗೂ ಇಲ್ಲೇ ಇರುವುದಾಗಿ ಹೇಳಿದ್ದ. ಮಲ್ಲಯ್ಯ (ಮಲ್ಲಿಕಾರ್ಜುನ) ಅವನು ಬಂದಾಗ ಇಲ್ಲದ್ದನ್ನು ಕಂಡು ದೇವನಿಂತವನೆಂದು ನಂಬಲಾದಯ್ಯ ಎಂಬ ವಚನವನ್ನು ಬಳಸುತ್ತಾರೆ. (ಸಾಗಿದರು ಸೊನ್ನಲಿಗೆಗೆ ಪುಟ…….) ಕರಾವಳಿ ಗುಡ್ಡಗಾಡಿನ ಸಂಚಾರದಲ್ಲಿದ್ದಾಗ ಅಲ್ಲಮ ಪ್ರಭುವಿದ್ದ ಗುಹೆಯ ಬಳಿ ಮೇಯುತ್ತಿದ್ದ ಹುಲ್ಲೆಯ ಬಳಿ ಬಂದ ಹುಲಿಯೊಂದು ಆ ಹುಲ್ಲಿಗೆ ಬಾಧೆಕೊಡದೆ ಹೋಗಿದ್ದನ್ನು ಕಂಡು “ಹುಲಿಯ ಬೆನ್ನಲ್ಲಿ ಹುಲ್ಲಿ ಹೋಗಿ” ವಚನ ಹೇಳುತ್ತಾರೆ. (ಪಶ್ಚಿಮದಲ್ಲಿ ಪ್ರಭುದೇವ ಪುಟ….)
ನಾನು ಮೇಲೆ ಉಲ್ಲೇಖಿಸಿದ ನಿದರ್ಶನಗಳು ಸರಳ ಸಂದರ್ಭದವಾಗಿದ್ದರೆ, ಶರಣರೊಡನೆ ಸಂವಾದ ನಡೆಯುವಾಗಲೂ ಅಷ್ಟೇ ಸಮುಚಿತವಾದ, ಸಮರ್ಥನೀಯವಾದ ವಚನಗಳನ್ನು ಆಯಾ ಶರಣರಿಂದ ಆಡಿಸುತ್ತಾರೆ.
ವಚನಗಳ ಈ ಸಂಯೋಜನೆ “ Proper thing in a proper place” ಎನ್ನುವ ಇಂಗ್ಲಿಷ್ ಮಾತಿಗೆ ಸರಿಹೊಂದುತ್ತದೆ. ಹಾಗೆಯೇ ವಚನಗಳ ಓದುಗರಿಗೂ ವಚನಗ ಸಂದರ್ಭಕ್ಕೆ ಸಂಬಂಧಿಸಿದ ಗೊಂದಲ ನಿವಾರಣೆಯಾಗುತ್ತದೆ. ಸುಮಂಗಲಾ ಮುಮ್ಮಿಗಟ್ಟಿ ಅವರ ಈ ಪರಿಕಲ್ಪನೆಯೇ ಮನಮುಟ್ಟುವಂತಹದು.
ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಚನಗಳ ರಾಶಿಯಲ್ಲಿ ಕಥಾನಿರೂಪಣೆಯ ಸಂದರ್ಭಕ್ಕೆ ಸಲ್ಲುವ ವಚನ ಹುಡುಕುವುದೆಂದರೆ ಸಾಮಾನ್ಯವಲ್ಲ. ಆದರೆ ನಮ್ಮ ಸುಮಂಗಲಾ ತಾಯಿ ಲಿಂಗಪೂಜೆಯ ನಿಷ್ಠೆಯಿಂದ ಆ ಕೆಲಸ ಮಾಡಿ ಯಶಸ್ವಿಯಾಗಿದ್ದಾರೆ. ಈ ಕಾರಣದಿಂದಲೇ “ಬಯಲ್ಅ ಬೆರಗು” ಉಳಿದ ಕಾದಬರಿಗಳಂತಲ್ಲ!
ಈ ಕಾದಂಬರಿ ಮನರಂಜನೆಗಾಗಿ ಓದುವ, ಕಾಲಹರಣಕ್ಕಾಗಿ ಓದುವ ಬೇಸರ ಪರಿಹಾರಕ್ಕಾಗಿ ಓದುವ ಕೃತಿಯಲ್ಲ. ಜೀವನದ ಅಸ್ತಿತ್ವವನ್ನು ಅಲ್ಲಗಳೆಯದೆ, ಅಲ್ಲಮ ಪ್ರಭುವನ್ನು ವಸ್ತುನಿಷ್ಠವಾಗಿ ಅರಿತುಕೊಳ್ಳುವಲ್ಲಿ, ಆತ್ಮಾನುಭವದ ಆನಂದವನ್ನು ಅನುಭವಿಸುವಲ್ಲಿ ಆಸಕ್ತಿಯುಳ್ಳ ಪ್ರತಿಯೊಬ್ಬರೂ ಗಂಭೀರವಾಗಿ ಅಧ್ಯಯನ ಮಾಡಬೇಕಾದ ಕೃತಿ. ಇದು ಸುಮಂಗಲಾ ಮುಮ್ಮಿಗಟ್ಟಿ ಅವರ ಸಾಹಸದ ಸಾಹಿತ್ಯ ಯಾತ್ರೆ ಎಂದೇ ಹೇಳಬೇಕು.
ನಿಸರ್ಗ ಸೌಂದರ್ಯದ ಸಹಜ ವರ್ಣನೆ, ತತ್ವಸಿದ್ಧಾಂತಗಳ ಸರಳ ವಿಶ್ಲೇಷಣೆ, ವಚನ ವಿಚಾರಗಳ ಸ್ಪಷ್ಟ ವಿವೇಚನೆ, ಸುಭಗ ಶೈಲಿಯ ಸರಾಗ ನಿರೂಪಣೆ, ಮತ್ತು ಅನುಭಾವ ಸಾಹಿತ್ಯಕ್ಕೆ ಅನುಗಣ ಒಕ್ಕಣೆ- ಈ ಐದು ವೈಶಿಷ್ಟ್ಯಗಳ ಕೂಡಲ ಸಂಗಮ- ಈ “ ಬಯಲ ಬೆರಗು”!
ಇದು ಅಲ್ಲಮ ಪ್ರಭುವಿನ ಚಾರಿತ್ರಕ ಕಥೆಯೂ ಹೌದು, ವಚನ ವ್ಯಾಖ್ಯಾನ, ಅನುಭವ ಚಿಂತನ, ವಿಚಾರ ವಿಶ್ಲೇಷಣ ಮತ್ತು ಸತ್ಯ ದರ್ಶನಗಳ ಹೊತ್ತಗೆಯೂ ಹೌದು. ಕನ್ನಡದ ತತ್ವ ಸಾಹಿತ್ಯಕ್ಕೆ ಕಾದಂಬರಿ ರೂಪದ ಈ ಕೊಡಿಗೆ ನೀಡಿರುವ ಸೋದರಿ ಸುಮಂಗಲಾ ಮುಮ್ಮಿಗಟ್ಟಿ ಅವರನ್ನು ನಾನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಗೊ.ರು ಚನ್ನಬಸಪ್ಪ